ನಾನು ಹಾಗೆ ಹೇಳಿದ್ರೆ ಇಂದೇ ರಾಜಕೀಯ ನಿವೃತ್ತಿ : ಡಿಕೆ ಶಿವಕುಮಾರ್ ಹೀಗಂದಿದ್ಯಾಕೆ?
ಬೆಂಗಳೂರು, ಮಾರ್ಚ್ 26: ಸಂವಿಧಾನ ಬದಲಾವಣೆ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿದ್ದು, ರಾಜಕೀಯ ನಿವೃತ್ತಿ ಕುರಿತು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನನಗೆ ತಲೆಕೆಟ್ಟಿಲ್ಲ. ನಾನು ಸಂದರ್ಶನದಲ್ಲಿ ಸತ್ಯ ಮಾತನಾಡಿರುವುದನ್ನು ಹಾಗೂ ನನ್ನ ರಾಜಕೀಯ ನಿಲುವನ್ನು ನೋಡಿ ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಸಂವಿಧಾನ ಬದಲಿಸುತ್ತೇನೆ ಎಂದು ಎಲ್ಲಿ ಹೇಳಿದ್ದೇನೆ? ನಾನು ಹೇಳಿದ್ದರೆ ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಸಂವಿಧಾನ ಜಾರಿಗೆ ತಂದವರು ನಾವು, ನಾವು ಅದನ್ನು ರಕ್ಷಣೆ ಮಾಡುತ್ತಿದ್ದೇವೆ. ಬಿಜೆಪಿಯವರು ತಮ್ಮ ಹುಳುಕುಗಳನ್ನು ಮುಚ್ಚಿಹಾಕಲು ಈ ವಿಚಾರ ಪ್ರಸ್ತಾಪಿಸಿದ್ದಾರೆ.

ನಮ್ಮ ನಾಯಕರು ದಡ್ಡರಲ್ಲ, ನಾನು ಏನು ಮಾತನಾಡಿದ್ದೇನೆ ಎಂದು ಅವರು ನೋಡಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿರುವುದು ಬಿಜೆಪಿ ಪಕ್ಷದ ನಾಯಕರು. ನಾನು ಸಂವಿಧಾನ ಬದಲಿಸುತ್ತೇನೆ ಎಂದು ಹೇಳಿದ್ದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನನ್ನ ಹೇಳಿಕೆ ತೆಗೆಸಿ ನೋಡಲಿ. ಬಿಜೆಪಿ ಅವರ ಆರೋಪದಲ್ಲಿ ಯಾವ ಅರ್ಥವೂ ಇಲ್ಲ. ನನ್ನ ಸಂದರ್ಶನವನ್ನು ಪೂರ್ಣವಾಗಿ ನೋಡಿ, ನಾನು ಅಲ್ಲಿ ಏನು ಮಾತನಾಡಿದ್ದೇನೆ ಎಂದು ಕೇಳಿ ಎಂದು ಮಾಧ್ಯಮ ಹಾಗೂ ರಾಜಕೀಯ ಸ್ನೇಹಿತರಲ್ಲಿ ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಸಂವಿಧಾನ ಬದಲಿಸುತ್ತೇವೆ ವಿಚಾರವಾಗಿ ದೆಹಲಿ ನಾಯಕರು ನಿಮ್ಮ ಬಳಿ ಸ್ಪಷ್ಟನೆ ಕೇಳಿದ್ದಾರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ನನಗೆ ಕೇಳಿದ್ದಾರೆ. ನಾನು ದಾಖಲೆ ತೆಗೆದು ನೋಡಿ ಎಂದು ಹೇಳಿದ್ದೆ. ಅವರು ನೋಡಿದ್ದು, ನಂತರ ಅವರಿಗೆ ನಾನು ಹಾಗೇ ಹೇಳಿಲ್ಲ ಎಂಬುದರ ಅರಿವಾಗಿದೆ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ನೀವು ಹೋದ ಕಡೆ ಕಪ್ಪು ಬಾವುಟ ಪ್ರದರ್ಶಿಸಲು ಬಿಜೆಪಿಯವರು ನಿರ್ಧರಿಸಿದ್ದಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ, ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನನ್ನ ಬಗ್ಗೆ ಮಾತನಾಡದಿದ್ದರೆ, ಅವರಿಗೆ ನಿದ್ದೆ ಬರುವುದಿಲ್ಲ. ಅದಕ್ಕಾಗಿ ಮಾತನಾಡುತ್ತಾರೆ, ಮಾತನಾಡಲಿ. ತಮಿಳುನಾಡಿನಲ್ಲಿ ಕಪ್ಪು ಬಾವುಟ ನೋಡಬೇಕು ಎಂದು ಕಾದು ಕುಳಿತಿದ್ದೆ. ನನಗೆ ಮಾಧ್ಯಮಗಳ ಮೈಕ್ ಹೊರತಾಗಿ ಯಾವ ಕಪ್ಪು ಬಾವುಟವೂ ಕಾಣಲಿಲ್ಲ ಎಂದು ತಿಳಿಸಿದರು.
ಫೋನ್ ಟ್ಯಾಪಿಂಗ್ ವಿಚಾರ ಮತ್ತೆ ಚರ್ಚೆಯಾಗುತ್ತಿದೆ ಬಗ್ಗೆ ಮಾತನಾಡಿ, ನಾನು ಜೈಲಲ್ಲಿ ಇದ್ದಾಗ, ನಮ್ಮ ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ನಡೆದಿದೆ ಎಂಬ ಸುದ್ದಿ ಓದಿದ್ದೆ. ಅದಾದ ನಂತರ ತನಿಖೆ, ಏನೇನೋ ನಡೆಯಿತು. ಈ ವಿಚಾರವಾಗಿ ಸಿಬಿಐ ತನಿಖೆ ಮಾಡಿತ್ತು. ಬಿಜೆಪಿಯವರು ಸಿಬಿಐ ವರದಿಯನ್ನು ಪ್ರಕಟಿಸಲಿ, ಆಮೇಲೆ ಮಿಕ್ಕ ವಿಚಾರ ಮಾತನಾಡೋಣ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎಂಬ ತಮಿಳುನಾಡು ಸಚಿವ ದೊರೈ ಮುರುಗನ್ ಹೇಳಿಕೆ ಬಗ್ಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಮಾತನಾಡಿ, ಮೇಕೆದಾಟು ವಿಚಾರವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯ ಸಿಗುವ ವಿಶ್ವಾಸವಿದೆನಮ್ಮ ನೀರು ನಮ್ಮ ಹಕ್ಕು. ಅವರು ಅವರದೇ ಆದ ರಾಜಕೀಯ ನಿಲುವು ತೆಗೆದುಕೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹೋಗಿ ಮಾತುಕತೆ ಮಾಡಲಾಗಿತ್ತು. ನಾವು ಈ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ನ್ಯಾಯಾಲಯದ ತೀರ್ಪಿಗೆ ಯಾರೂ ಅಡ್ಡಿ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ವಾದ ಮಾಡಲಿ, ನಾವು ನಮ್ಮ ವಾದ ಮಂಡಿಸುತ್ತೇವೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಡಿಪಿಆರ್ ಸಲ್ಲಿಕೆ ಮಾಡಿಲ್ಲ ಎಂಬ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ಈ ಯೋಜನೆ ಜಾರಿಗೆ ನಾವು ಬದ್ಧವಾಗಿದ್ದೇವೆ. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿಯೂ ಹೋರಾಟ ಮಾಡುತ್ತಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ತಮಿಳುನಾಡು ಸಿಎಂ ನಿಮ್ಮ ಸ್ನೇಹಿತರು, ಅವರನ್ನು ಒಪ್ಪಿಸಿ ಈ ಯೋಜನೆ ಜಾರಿ ಮಾಡಿ ಎಂಬ ಬಿಜೆಪಿ ಆಗ್ರಹದ ಕುರಿತು ಮಾತನಾಡಿ, ತಮಿಳುನಾಡಿನವರು ಅವರದೇ ಆದ ರಾಜಕೀಯ ನಿಲುವು ತೆಗೆದುಕೊಂಡಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಕೈ ಹಿಡಿದು ಒಪ್ಪಿಗೆ ಕೊಡಿಸುವುದಾಗಿ ಹೇಳಿದ್ದರು. ಅವರು ಯಾಕೆ ಕೊಡಿಸುತ್ತಿಲ್ಲ. ರಾಜಕೀಯದಲ್ಲಿ ಅನೇಕ ಒತ್ತಡಗಳಿರುತ್ತವೆ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಸಮುದ್ರಕ್ಕೆ ವ್ಯರ್ಥವಾಗಿ ಹೋಗುತ್ತಿರುವ ನೀರನ್ನು ಸಂಗ್ರಹಿಸಲು ನೆರವಾಗಲಿದೆ. ಹೀಗಾಗಿ ಈ ಯೋಜನೆಗೆ ಸಹಕಾರ ನೀಡಿ ಎಂದು ತಮಿಳುನಾಡಿನವರಿಗೆ ಮನವಿ ಮಾಡುತ್ತೇನೆ. ಕೃಷ್ಣಾ ನೀರು ಸಂಬಂಧ ಆಂಧ್ರ ಪ್ರದೇಶ ಸಿಎಂ ಜತೆ ಚರ್ಚೆಗೆ ದಿನಾಂಕ ಕೇಳಿದ್ದು, ಅವರು ದಿನಾಂಕ ನಿಗದಿ ಮಾಡಿದ ಬಳಿಕ ಹೋಗಿ ಭೇಟಿ ಮಾಡುವೆ ಎಂದು ತಿಳಿಸಿದರು.
ಸಿಎಂ, ಗೃಹಮಂತ್ರಿಗಳಿಂದ ಎಲ್ಲರಿಗೂ ನ್ಯಾಯ
ಇನ್ನೂ ರಾಜಣ್ಣ ಅವರು ಹನಿಟ್ರ್ಯಾಪ್ ವಿಚಾರವಾಗಿ ಗೃಹ ಮಂತ್ರಿಗೆ ದೂರು ನೀಡಲು ಮುಂದಾಗಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಗೃಹ ಸಚಿವರು ಬಹಳ ಹಿರಿಯರು. ಅವರಿಗೆ ಪಕ್ಷ ನಡೆಸಿ, ಜತೆಗೆ ಸರ್ಕಾರದಲ್ಲೂ ಅನುಭವವಿದೆ. ಅವರು ಹಾಗೂ ಮುಖ್ಯಮಂತ್ರಿಗಳು ಎಲ್ಲಾ ರೀತಿಯ ತನಿಖೆ ನಡೆಸುವುದಾಗಿ ಸದನದಲ್ಲಿ ಹೇಳಿದ್ದು, ರಾಜಣ್ಣ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ ನ್ಯಾಯ ಒದಗಿಸಬೇಕೋ ಒದಗಿಸುತ್ತಾರೆ ಎಂದು ತಿಳಿಸಿದರು.












Click it and Unblock the Notifications