ಪೆಟ್ರೋಲ್-ಡೀಸೆಲ್ ದರ ಮುಂದಿನ ದಿನಗಳಲ್ಲಿ ಏರಲಿದೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ಒಪ್ಪಂದ ಮುಂದಿನ ದಿನಗಳಲ್ಲಿ ದೇಶದ 140 ಕೋಟಿ ಜನರಿಗೆ, ಅದರಲ್ಲೂ ಮುಖ್ಯವಾಗಿ 72 ಕೋಟಿ ರೈತರ ಪಾಲಿಗೆ ಮರಣಶಾಸನವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ
ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಸಮಾನತೆ ಹಾಗೂ ಪರಸ್ಪರ ಗೌರವದ ಆಧಾರದ ಮೇಲೆ ಇರಬೇಕು. ಒತ್ತಡ, ಬೆದರಿಕೆ ಮತ್ತು ಏಕಪಕ್ಷೀಯ ನೀತಿ ನಿರ್ಧಾರಗಳ ಮೂಲಕ ಸಂಬಂಧಗಳನ್ನು ನಡೆಸಬಾರದು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಜಾರಿಗೆ ಬಂದಿರುವ ವಿಧಾನಗಳನ್ನು ನೋಡಿದರೆ, ಇದು ಒಡೆಯನ ಆಜ್ಞೆಗೆ ಸೇವಕ ತಲೆಯಾಡಿಸಿದಂತಿದೆ ಎಂದು ಕಿಡಿಕಾರಿದ್ದರು.

ಸುಂಕ ಇಳಿಕೆ ಹೆಸರಲ್ಲಿ ಅಮೆರಿಕ ನಾಟಕ
ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತವನ್ನು ಮಣಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಿದ್ದರು. ಈಗ ಅದನ್ನೇ ಶೇ 25ರಿಂದ ಶೇ 18ಕ್ಕೆ ಇಳಿಸಿ, ಭಾರತಕ್ಕೆ ದೊಡ್ಡ ಉಪಕಾರ ಮಾಡಿದಂತೆ ನಟಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಭಾರತ ಸೊನ್ನೆಗಿಳಿಸಿರುವುದು ಮೇಲ್ನೋಟದಲ್ಲೇ ಅನ್ಯಾಯಕರವಾಗಿದ್ದು, ಕೇಂದ್ರ ಸರ್ಕಾರ ಇದನ್ನು ಸ್ವಾಗತಿಸಿರುವುದು ದೇಶದ ಜನತೆಗೆ ಮಾಡಿದ ಮಹಾದ್ರೋಹ ಎಂದು ಅವರು ಹೇಳಿದ್ದಾರೆ.
ಅಮೇರಿಕಕ್ಕೆ ಸಂಪೂರ್ಣ ಶರಣಾಗತಿ
ಪ್ರಸ್ತುತ ಭಾರತ ಶೇಕಡಾ 40ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಆದರೆ ಈ ಒಪ್ಪಂದದ ಭಾಗವಾಗಿ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿ ಅಮೆರಿಕ ಮತ್ತು ವೆನಿಜುವೆಲಾದಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ದೇಶದ ಸಂಪೂರ್ಣ ಶರಣಾಗತಿಯೇ ಆಗಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಲಿದ್ದು, ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ.

ಈ ಒಪ್ಪಂದದಿಂದ ಉಂಟಾಗುವ ಸಣ್ಣ ಲಾಭಗಳನ್ನು ದೊಡ್ಡ ಸಾಧನೆಯಂತೆ ಬಿಂಬಿಸಲಾಗುತ್ತಿದೆ. ಆದರೆ ಭಾರತೀಯ ರೈತರಿಗೆ ಆಗುವ ನಷ್ಟವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಅಮೆರಿಕದ ರೈತ ಸಮುದಾಯ ಈ ಒಪ್ಪಂದವನ್ನು ಒಕ್ಕೊರಲಿನಿಂದ ಸ್ವಾಗತಿಸಿ ಸಂಭ್ರಮಿಸುತ್ತಿರುವುದೇ, ಇದು ಭಾರತದ ರೈತರ ಪಾಲಿಗೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಭಾರತದ ರೈತರಿಗಿಂತ ಅಮೆರಿಕದ ರೈತರು ಬಹಳ ಹೆಚ್ಚಿನ ಸಬ್ಸಿಡಿ ಪಡೆಯುತ್ತಾರೆ. ಇದರಿಂದ ಅವರು ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಈ ಕಾರಣದಿಂದಲೇ ಹಿಂದಿನ ಎಲ್ಲ ಸರ್ಕಾರಗಳು ಅಮೆರಿಕದಿಂದ ಆಮದು ಆಗುವ ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಾ ಬಂದಿದ್ದವು. ಈಗ ಆ ಸುಂಕವನ್ನು ರದ್ದುಗೊಳಿಸಿದರೆ, ದೇಶದ ಮಾರುಕಟ್ಟೆಗಳಲ್ಲಿ ಅಮೆರಿಕದ ಅಗ್ಗದ ಆಹಾರಧಾನ್ಯ, ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳು ಲಗ್ಗೆ ಇಡಲಿವೆ. ಇದರಿಂದ ಭಾರತೀಯ ರೈತರು ದಿವಾಳಿಯಾಗುವ ಸ್ಥಿತಿ ನಿರ್ಮಾಣವಾಗಿ, ಆತ್ಮಹತ್ಯೆಗಳಂತಹ ದಾರುಣ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜತಾಂತ್ರಿಕ ದುರ್ಬಲತೆ ಆರೋಪ
ಭಾರತ ಜಾಗತಿಕವಾಗಿ ಹಿಂದೆಂದೂ ಇಷ್ಟೊಂದು ದುರ್ಬಲವಾಗಿರಲಿಲ್ಲ. ಹಿಂದಿನ ಪ್ರಧಾನಿಗಳು ರಾಜತಾಂತ್ರಿಕ ಒತ್ತಡಗಳನ್ನು ಸಮರ್ಥವಾಗಿ ಎದುರಿಸಿ ದೇಶದ ಗೌರವ ಮತ್ತು ಸಾರ್ವಭೌಮತೆಯನ್ನು ಕಾಪಾಡಿಕೊಂಡಿದ್ದರು. ನೆಹರೂ ಅವರ ಅಲಿಪ್ತ ನೀತಿ, ಇಂದಿರಾಗಾಂಧಿಯವರ ಧೈರ್ಯಶಾಲಿ ನಿರ್ಧಾರಗಳು ಹಾಗೂ ಡಾ.ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣೆಗಳನ್ನು ಉದಾಹರಣೆಯಾಗಿ ಅವರು ಉಲ್ಲೇಖಿಸಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಇಂದಿನ ವಿದೇಶಾಂಗ ನೀತಿ ಭಾಷಣ, ಘೋಷಣೆ, ಮತ್ತು ಸ್ವಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ. ಚೀನಾ ಮತ್ತು ಅಮೆರಿಕದಂತಹ ದೈತ್ಯ ಶಕ್ತಿಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಭಾರತ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ವಿದೇಶಾಂಗ, ಆರ್ಥಿಕ ಹಾಗೂ ಸಾಮಾಜಿಕ ನೀತಿಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡುವ ಮೂಲಕ ಕನಿಷ್ಠ ದೇಶದ ಗೌರವವನ್ನಾದರೂ ಉಳಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications