ಹೆಚ್ಡಿಕೆ ವಿದೇಶ ಪ್ರವಾಸವೇ ದೊಡ್ಡ ಕುತೂಹಲ; ಈ ಸರ್ಕಾರ ಅಸ್ಥಿರ ಮಾಡೋಕೆ ಯಾರಿಂದಲೂ ಆಗಲ್ಲ: ಪರಮೇಶ್ವರ್
ತುಮಕೂರು, ಜುಲೈ 28: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚಿಸಿರುವ ಕಾಂಗ್ರೆಸ್ ಗೆ, ವಿಪಕ್ಷಗಳ ಭಯ ಶುರುವಾದಂತೆ ಕಾಣುತ್ತಿದೆ. ಈಗಾಗಲೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿದೇಶ ಪ್ರವಾಸವನ್ನ ಕೈಗೊಂಡಿದ್ದು, ಈ ಸರ್ಕಾರ ಅಸ್ಥಿರ ಮಾಡೋಕೆ ಯಾರಿಂದಲೂ ಆಗಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾರು ಹೇಗೆ ಎಲ್ಲಿ ವಿದೇಶಕ್ಕೆ ಹೋಗುತ್ತಾರೆ ಅನ್ನೋದು ನಮಗೆ ಗೊತ್ತಿಲ್ಲ. ಸರ್ಕಾರ ಅಸ್ಥಿರ ಮಾಡೋಕೆ ಯಾರಿಂದಲೂ ಆಗಲ್ಲ, ನಾವು ಸುಭ್ರದ್ರವಾಗಿದ್ದೇವೆ ಎಂದು ತಿಳಿಸಿದರು.

ಉಡುಪಿ ಯುವತಿ ವಿಡಿಯೋ ಪ್ರಕರಣದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹೇಳಿಕೆಯನ್ನೇ ಬಿಜೆಪಿಯವರು ಪ್ರಚಾರಕ್ಕೆ ಬಳಸಿದರೆ ಬಳಸಿಕೊಳ್ಳಲಿ. ನಮಗೆ ಜವಾಬ್ದಾರಿ ಇದೆ. ಸರ್ಕಾರ ನಡೆಸುವ ನಾವು ಇಂತಹ ಘಟನೆ ಲಘುವಾಗಿ ಸ್ವೀಕರಿಸುವುದಿಲ್ಲ. ಆದರೆ, ಇವರು ಬೇರೆ ಬೇರೆ ಅರ್ಥ ಕಲ್ಪಿಸೋದು ಸರಿಯಲ್ಲ. ಅವರು ಹೇಳಿದ್ದಕ್ಕೆ, ವ್ಯಾಖ್ಯಾನಕ್ಕೆ ಉತ್ತರ ಕೊಡಲು ಆಗಲ್ಲ ಎಂದು ಹೇಳಿದರು.
ಇನ್ನೂ ಈ ಪ್ರಕರಣದಲ್ಲಿ ರಾಜಕೀಯ ಮಾಡಬೇಡಿ ಎಂದು ಅವರಿಗೆ ನಾನು ಹೇಳಿದ್ದೀನಿ. ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಇದೆ. ಪ್ರಿನ್ಸಿಪಾಲ್ ಇದ್ದಾರೆ, ಕ್ರಮ ತೆಗೆದುಕೊಳ್ಳುತ್ತಾರೆ. ಯುಜಿಸಿ ಗೈಡ್‌ಲೈನ್ಸ್ ಇದೆ, ಅಶಿಸ್ತು ಕಂಡುಬಂದರೆ ಪ್ರಿನ್ಸಿಪಾಲ್ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಅದಕ್ಕೆ ಹೋಗಿ ಭಾಗಿಯಾಗೋದು ಎಷ್ಟು ಸರಿ. ಇದರಲ್ಲಿ ರಾಜಕೀಯ ಮಾಡುವ ಬದಲು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಗುರುವಾರ ನಡೆದ ಸಿಎಲ್‌ಪಿ ಸಭೆಯಲ್ಲಿ ಶಾಸಕರು ಯಾವುದೇ ಅಸಮಾಧಾನ ಕುರಿತು ಮಾತನಾಡಿದ ಅವರು, ಶಾಸಕಾಂಗ ಸಭೆಯಲ್ಲಿ ಶಾಸಕರು ಯಾವುದೇ ರೀತಿಯ ಅಸಮಾಧಾನವನ್ನ ಹೊರಹಾಕಿಲ್ಲ. ಕೆಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೇಳಿಕೊಂಡಿದ್ದರು. ಹಿಂದಿನ ಶಾಸಕಾಂಗ ಪಕ್ಷದ ಸಭೆ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಅರ್ಧದಲ್ಲೇ ನಿಂತಿತ್ತು. ಹಾಗಾಗಿ ಶಾಸಕರು ಪತ್ರ ಬರೆದಿದ್ದರು ಎಂದು ತಿಳಿಸಿದರು.
ಶಾಸಕಾಂಗ ಸಭೆಯಲ್ಲಿ ಪತ್ರ ಬರೆದು ಸಹಿ ಅಭಿಯಾನ ಮಾಡುವ ಸಂಪ್ರದಾಯ ಬೇಡ. ಪತ್ರ ಬರೆಯೋದು ಅಷ್ಟೊಂದು ಸೂಕ್ತ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೌಖಿಕವಾಗಿ ಹೇಳಿದರೆ ನಾನು ಶಾಸಕಾಂಗ ಸಭೆ ಕರೆಯುತ್ತಿದ್ದೇ ಎಂದಿದ್ದಾರೆ. ನಮಗೆ ಗೊತ್ತಾಗದೇ ಪತ್ರ ಬರೆದು ತಪ್ಪು ಮಾಡಿದ್ದೇವೆ ಎಂದು ಶಾಸಕರು ಕ್ಷಮೆ ಕೇಳಿದ್ದಾರೆ. ಅದಾದ ಮೇಲೆ ಶಾಸಕರ ಸಮಸ್ಯೆಗಳು ಚರ್ಚೆಯಾದವು. ಸಚಿವರು ಶಾಸಕರಿಗೆ ಉತ್ತಮವಾಗಿ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ. ಇನ್ನೂ ಪ್ರತ್ಯೇಕವಾಗಿ ಪ್ರತಿ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರ ಸಭೆ ನಡೆಸುವ ಕುರಿತು ಮುಖ್ಯಮಂತ್ರಿಗಳು ಭರವಸೆಯನ್ನು ಕೊಟ್ಟಿದ್ದಾರೆ ಎಂದರು.












Click it and Unblock the Notifications