
ಹೊಸ ಕಾರ್ಮಿಕ ನೀತಿ ಬಂದ್ರೆ ವಾರಕ್ಕೆ 4 ದಿನ ಕೆಲಸ, ಉಳಿತಾಯ ಜಾಸ್ತಿ!
ಬೆಂಗಳೂರು, ಜೂ. 14: ಪ್ರತಿ ದಿನ 12 ತಾಸು ಕೆಲಸ.. ನಾಲ್ಕು ದಿನಕ್ಕೆ ವಾರದ 48 ಗಂಟೆ ಕೆಲಸ ಮಾಡಿದ್ರೆ ಸಾಕು, ಉಳಿದ ಮೂರು ದಿನ ರಜೆ!
ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ. ಅಂದಹಾಗೆ ಜುಲೈ 1 ನೇ ತಾರೀಖಿನಿಂದ ಈ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಹೊಸ ಕಾರ್ಮಿಕ ನೀತಿ ಜಾರಿಗೆ ಬಂದಲ್ಲಿ, ವೇತನ, ಭವಿಷ್ಯ ನಿಧಿ, ರಜೆ ದಿನಗಳಲ್ಲಿ ಭಾರೀ ಬದಲಾವಣೆ ಯಾಗಲಿದೆ. ಈ ಹೊಸ ಕಾರ್ಮಿಕ ನೀತಿ ಭಾರೀ ಸಂಚಲನ ಮೂಡಿಸಿದ್ದು, ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾರ್ಮಿಕರು ಕಾಯುತ್ತಿದ್ದಾರೆ.
ಹೊಸ ಕಾರ್ಮಿಕ ನೀತಿಯ ಅನುಗುಣವಾಗಿ 23 ರಾಜ್ಯಗಳು ಪರಿಷ್ಕತ ಕಾರ್ಮಿಕ ಕಾನೂನು, ನೀತಿ ನಿಬಂಧನೆಗಳನ್ನು ಪ್ರಕಟಿಸಿವೆ. ಕೇಂದ್ರ ಸರ್ಕಾರ 2021 ರ ಫೆಬ್ರವರಿಯಲ್ಲಿ ಈ ಹೊಸ ಕಾರ್ಮಿಕ ನೀತಿ ನಿಬಂಧನೆಗಳನ್ನು ಅಂತಿಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು. ಅಂತಿಮ ಅಧಿಸೂಚನೆ ಹೊರ ಬಿದ್ದ ಬಳಿಕ ಹೊಸ ಕಾರ್ಮಿಕ ನೀತಿ ಅಡಿ ವೇತನ, ಕೈಗಾರಿಕಾ ಸಂಬಂಧ, ಕಾರ್ಮಿಕರ ಸಾಮಾಜಿಕ ಭದ್ರತೆ, ಕಾರ್ಮಿಕರ ಸುರಕ್ಷತೆ ಮತ್ತು ಅರೋಗ್ಯ ಕುರಿತ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿವೆ.
ಇನ್ನು ಕಾರ್ಮಿಕ ಕಲ್ಯಾಣ ನಿಯಮಗಳು ಸಮವರ್ತಿ ಪಟ್ಟಿಯಲ್ಲಿ ಬರುವ ಕಾರಣ, ಕೇಂದ್ರ ಸರ್ಕಾರವೂ ನಿಯಮಗಳನ್ನು ರೂಪಿಸಬಹುದು. ಆಯಾ ರಾಜ್ಯಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಸಹ ನಿಯಮಗಳನ್ನು ರೂಪಿಸಬಹುದು.

ಕೈಗೆ ಸಿಗುವ ಸಂಬಳ ಕಡಿಮೆ:
ಹೊಸ ಕಾರ್ಮಿಕ ನೀತಿ 2019 ಜಾರಿಗೆ ಬಂದಲ್ಲಿ ಕಾರ್ಮಿಕರು ಕೈಗೆ ತೆಗೆದುಕೊಳ್ಳುವ ಮಾಸಿಕ ವೇತನ ಕಡಿತವಾಗಲಿದೆ. ಅದರ ಬದಲಿಗೆ ಕಾರ್ಮಿಕರ ಭವಿಷ್ಯ ನಿಧಿ ಹಾಗೂ ಗ್ರಾಚುಯಿಟಿ ಹೆಚ್ಚಾಗಲಿದೆ. ಇದರ ಪ್ರಕಾರ ಕಾರ್ಮಿಕರ ಮೂಲ ವೇತನದಲ್ಲಿ ಶೇ. 50 ಕ್ಕಿಂತಲೂ ಹೆಚ್ಚು ಪಡೆಯಲು ಸಾಧ್ಯವಿಲ್ಲ.

ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತು:
ಹೊಸ ಕಾರ್ಮಿಕ ನೀತಿ ಅನುಷ್ಠಾನಕ್ಕೆ ಬಂದಲ್ಲಿ ಕಾರ್ಮಿಕರ ಪಿಎಫ್ ಕೊಡುಗೆ ಮೊತ್ತ ಹೆಚ್ಚಾಗಲಿದೆ. ಇದರ ಜತೆಗೆ ಗ್ರಾಜ್ಯುಯಿಟಿ ಸಹ ಹೆಚ್ಚಾಗಲಿದೆ. ಹೀಗಾಗಿ ಮಾಸಿಕವಾಗಿ ಕೈಗೆ ಪಡೆಯುವ ವೇತನ ಕಡಿಮೆಯಾಗಲಿದ್ದು, ಭವಿಷ್ಯ ನಿಧಿ ಕೊಡುಗೆ ಮೊತ್ತ ಹೆಚ್ಚಾಗಲಿದ್ದು, ಇದರಿಂದ ಕಾರ್ಮಿಕರ ಉಳಿತಾಯ ಹೆಚ್ಚಾಗಲಿದೆ.

ನಾಲ್ಕುದಿನ ಕೆಲಸ ಮೂರು ದಿನ ರಜೆ:
ಪರಿಷ್ಕೃತ ಕಾರ್ಮಿಕ ನೀತಿಯಿಂದಾಗಿ ವಾರದಲ್ಲಿ ನಾಲ್ಕು ದಿನ 12 ತಾಸು ಕೆಲಸ ಮಾಡಬೇಕು. ಈಗಿರುವ ನಿಯಮದ ಪ್ರಕಾರ ಆರು ದಿನ ಎಂಟು ತಾಸು ಕೆಲಸ ಮಾಡಬೇಕು. ಹೊಸ ಕಾರ್ಮಿಕ ನೀತಿ ಜಾರಿಗೆ ಬಂದರೆ, ದಿನಕ್ಕೆ 12 ತಾಸು ನಾಲ್ಕುದಿನ ಕೆಲಸ ಮಾಡಿದರೆ ಸಾಕು. ವಾರಕ್ಕೆ ಸರಾಸರಿ 48 ಗಂಟೆ ಕೆಲಸ ಮಾಡಿದಂತಾಗುತ್ತದೆ. ಇದರಿಂದ ವಾರದಲ್ಲಿ ಮೂರು ದಿನ ಕಾರ್ಮಿಕರು ಮನೆಯಲ್ಲಿರಲು ಸಾಧ್ಯವಾಗಲಿದೆ. ಇದರಿಂದ ಕಾರ್ಮಿಕರ ಅನಾವಶ್ಯಕ ಪ್ರಯಾಣ, ಪ್ರಯಾಣ ವೆಚ್ಚ ಕಡಿತವಾಗಲಿದೆ. ಇದರಿಂದ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ.

ಹೊಸ ಕಾರ್ಮಿಕ ನೀತಿ ಏನು ಹೇಳುತ್ತೆ?:
ಹೊಸ ಕಾರ್ಮಿಕ ನೀತಿಯಲ್ಲಿ ಗಳಿಕೆ ರಜೆ ನೀತಿ ನಿಯಮಗಳಲ್ಲಿ ಬಾರೀ ಬದಲಾವಣೆ ತಂದಿದೆ. ಸರ್ಕಾರ ವರ್ಷಕ್ಕೆ 30 ಗಳಿಕೆ ರಜೆ ನೀಡುತ್ತದೆ. ಮಿಲಟರಿಯಲ್ಲಿ ಸೇವೆ ಮಾಡುವರಿಗೆ ವರ್ಷಕ್ಕೆ 60 ಗಳಿಕೆ ರಜೆ ನೀಡಲಾಗುತ್ತದೆ. ಹೊಸ ಕಾರ್ಮಿಕ ನೀತಿಯಿಂದಾಗಿ 300 ಗಳಿಕೆ ರಜೆಗಳನ್ನು ಉಳಿಸಿಕೊಂಡು ಅದಕ್ಕೆ ವೇತನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 20 ವರ್ಷಗಳ ಸೇವೆ ನಂತರ ಗಳಿಕೆ ರಜೆ ಪಡೆಯಲು ಅವಕಾಶ ನೀಡಲಾಗಿದೆ.