Get Updates
Get notified of breaking news, exclusive insights, and must-see stories!

ಕೆನಡಾದಲ್ಲಿ ಕನ್ನಡಿಗನ ಮೇಲೆ ಗುಂಡಿನ ದಾಳಿ ನಡೆಸಿ ಬರ್ಬರ ಹತ್ಯೆ

ನೆಲಮಂಗಲ, ಫೆಬ್ರವರಿ 9: ಕೆನಡಾದಲ್ಲಿ ಉದ್ಯೋಗ ಮಾಡುತ್ತಿದ್ದ ನೆಲಮಂಗಲ ತಾಲೂಕಿನ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ. ಈ ದುರ್ಘಟನೆಯಿಂದ ಕರ್ನಾಟಕದಲ್ಲಿರುವ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಾಗಾದ್ರೆ, ಈ ಘಟನೆ ಹಿನ್ನೆಲೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮೃತರನ್ನು ಚಂದನ್ ಕುಮಾರ್ (37) ಎಂದು ಗುರುತಿಸಲಾಗಿದ್ದು, ಅವರು ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದ ಮೂಲದವರು. ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿದ್ದ ಚಂದನ್ ಅವರು, ಎಲ್ ಅಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Nelamangala Man Working in Canada Shot Dead Near Woodbine Mall What did Local People Say this

ಸ್ಥಳೀಯರು ಹೇಳುವುದೇನು?: ಮಾಹಿತಿ ಪ್ರಕಾರ, ಫೆಬ್ರವರಿ 8ರಂದು ಕೆನಡಾದ ವುಡ್‌ಬೈನ್ ಮಾಲ್ ಸಮೀಪ ಚಂದನ್ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ ಏಕಾಏಕಿ ಗುಂಡಿನ ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಸ್ಥಳೀಯರು ತಾವು ಕಂಡ ಈ ಘಟನೆ ಬಗ್ಗೆ ವಿವರಿಸಿದ್ದು, ಮಾಲ್ ಹೊರಭಾಗದಲ್ಲಿ ಕಾರಿನೊಳಗೆ ಕುಳಿತಿದ್ದ ವ್ಯಕ್ತಿಗೆ ಹಲವು ಬಾರಿ ಗುಂಡಿನ ಶಬ್ದ ಕೇಳಿಬಂದಿತ್ತಂತೆ. ಕಾರಿನ ಕನ್ನಡಿಯ ಮೂಲಕ ನೋಡಿದಾಗ ಗನ್ ಹಿಡಿದ ವ್ಯಕ್ತಿಯೊಬ್ಬ ನಿಂತಿರುವುದು ಕಂಡಿತ್ತೆಂದು ಅವರು ಹೇಳಿದ್ದಾರೆ.

ಚಂದನ್ ಅವರ ತಂದೆ ನಂದಕುಮಾರ್ ನಿವೃತ್ತ ಶಿಕ್ಷಕರಾಗಿದ್ದು, ತಾಯಿ ಹಾಗೂ ಕುಟುಂಬದವರು ತ್ಯಾಮಗೊಂಡ್ಲು ಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ಘಟನೆ ಬಗ್ಗೆ ಕೆನಡಾ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರ ಪ್ರಕಾರ, ಚಂದನ್ ಕೆಲಸದ ಜೊತೆಗೆ ವಿದೇಶದಲ್ಲಿರುವ ಕನ್ನಡಿಗರಿಗೆ ನೆರವು ನೀಡುವ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿವಿಧ ಸಂಘಟನೆಗಳ ಮೂಲಕ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗುತ್ತಿದೆ ಎಂದು ಹೇಳಿದ್ದಾರೆ.

ಸುಧಾಕರ್ ಹೇಳಿದ್ದೇನು?: ಈ ಬಗ್ಗೆ ಕೆ.ಸುಧಾಕರ್ ಅವರು ಟ್ವೀಟ್‌ ಮಾಡಿದ್ದು, ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಐಟಿ ಉದ್ಯೋಗಿಯಾಗಿ ನೆಲೆಸಿದ್ದ ನಮ್ಮ ಕರ್ನಾಟಕ ಮೂಲದ, ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಚಂದನ್ ಕುಮಾರ್ ಅವರು ಶನಿವಾರ ಅಲ್ಲಿ ನಡೆದ ಶೂಟೌಟ್‌ನಲ್ಲಿ ಹತ್ಯೆಗೀಡಾಗಿರುವುದು ನಮ್ಮೆಲ್ಲರಿಗೂ ಅತ್ಯಂತ ಆಘಾತಕಾರಿ ಮತ್ತು ದುಃಖಕರ ಸಂಗತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಮೃತ ದುರ್ದೈವಿ ಚಂದನ್ ಕುಮಾರ್ ಅವರ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತಾ, ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರದೊಂದಿಗೆ ಅವರ ಮೃತದೇಹವನ್ನು ಆದಷ್ಟು ಶೀಘ್ರದಲ್ಲಿ ಭಾರತಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ಚಂದನ್ ಕುಮಾರ್ ಅವರ ಹೆತ್ತವರ ದುಃಖದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಭಾಗಿ ಎಂದು ಬರೆದುಕೊಂಡಿದ್ದಾರೆ.

ಗೃಹಸಚಿವ ಜಿ.ಪರಮೇಶ್ವರ್ ಟ್ವಿಟ್: ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಬೆಂಗಳೂರಿನ ನೆಲಮಂಗಲ ಮೂಲದ ಚಂದನ್ ಕುಮಾರ್ ಅವರು ಗುಂಡಿನ ದಾಳಿಯಲ್ಲಿ ಹತ್ಯೆಗೀಡಾಗಿರುವ ಸುದ್ದಿ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ. ಮೃತರಿಗೆ ಭಾವಪೂರ್ಣ ನಮನಗಳು. ಭಗವಂತನು ಮೃತರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ. ಕುಟುಂಬ ವರ್ಗದವರಿಗೆ ಈ ನೋವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ನಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಅವರು ಬರೆದುಕೊಂಡಿದ್ದಾರೆ.

ಮೃತರ ಪಾರ್ಥೀವ ಶರೀರವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ರಾಜ್ಯ ಪೊಲೀಸ್ ಇಲಾಖೆಯ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರ ಕೋರಲಾಗಿದೆ. ಕರ್ನಾಟಕದಲ್ಲಿ ನೆಲೆಸಿರುವ ದುಃಖತಪ್ತ ಕುಟುಂಬದವರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಚಂದನ್ ಕುಮಾರ್ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸುವಂತೆ ಕೇಂದ್ರ ವಿದೇಶಾಂಗ ಸಚಿವಾಲಯದ‌ ಮೂಲಕ ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತೇನೆ. ಈ ಘಟನೆಯಿಂದ ಕೆನಾಡದಲ್ಲಿ ನೆಲೆಸಿರುವ ಕನ್ನಡಿಗರು ಆತಂಕ ಪಡುವುದು ಬೇಡ. ಎಲ್ಲ ಕನ್ನಡಿಗರ ಸುರಕ್ಷತೆಗೆ ಕರ್ನಾಟಕ ಸರ್ಕಾರವು ಕಟಿಬದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+