NEET ಪರೀಕ್ಷೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಹೋರಾಟ ದಾರಿ ತಪ್ಪಿಸಲಾಗಿದೆ: ಆರ್. ಅಶೋಕ್
NEET: ಪರೀಕ್ಷೆಯ ಹೆಸರಿನಲ್ಲಿ ಆರಂಭವಾದ ವಿದ್ಯಾರ್ಥಿಗಳ ಹೋರಾಟ ಈಗ ದಾರಿ ತಪ್ಪಿರುವುದು ಈಗ ಮತ್ತಷ್ಟು ಸ್ಪಷ್ಟವಾಗುತ್ತಿದೆ ಎಂದು ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ದೆಹಲಿಯ ಪ್ರತಿಭಟನೆಗಳ ಕುರಿತು ಈ ಹಿಂದೆ ವಿದೇಶಿ ಹಾಗೂ ದೇಶವಿರೋಧಿ ಶಕ್ತಿಗಳ ಕೈವಾಡದ ಅನುಮಾನ ವ್ಯಕ್ತವಾಗಿತ್ತು. ಈಗ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ "ಉಮರ್ ಖಾಲಿದ್ ಜಿಂದಾಬಾದ್", "ಶಾರ್ಜಿಲ್ ಇಮಾಮ್ ಬಿಡುಗಡೆ ಮಾಡಿ" ಎಂಬ ಘೋಷಣೆಗಳು ಹಾಗೂ ಪೋಸ್ಟರ್‌ಗಳು ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಅವರು ಹೇಳಿದ್ದಾರೆ.
NEET ವಿರುದ್ಧದ ಪ್ರತಿಭಟನೆಗೂ ದೇಶದ್ರೋಹ ಪ್ರಕರಣಗಳಲ್ಲಿ ಆರೋಪಿಯಾಗಿರುವವರ ಬಿಡುಗಡೆಗೂ ಏನು ಸಂಬಂಧ? ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳ ಹೆಸರಿನಲ್ಲಿ ಹೋರಾಟವನ್ನು ಬೇರೆ ಅಜೆಂಡಾಕ್ಕೆ ತಿರುಗಿಸುವ ಪ್ರಯತ್ನ ಏಕೆ. ಇದರ ಜೊತೆಗೆ, ಈ ಬೆಳವಣಿಗೆಗಳನ್ನು ವರದಿ ಮಾಡಲು ಮುಂದಾದ ಮಾಧ್ಯಮಗಳ ಮೇಲೂ ಒತ್ತಡ ಹೇರುವ ಹಾಗೂ ವರದಿಗೆ ತಡೆ ಒಡ್ಡುವ ಪ್ರಯತ್ನಗಳು ನಡೆದಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ (Freedom of Speech) ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರವೇ, ಪ್ರತಿಭಟನೆಯ ಹೆಸರಿನಲ್ಲಿ ಬೆದರಿಕೆ, ಅತಿರೇಕದ ವರ್ತನೆ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲು ಒಡ್ಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ರಾಜಕೀಯ ಬದಿಗೆ ಸರಿಸಿ ರಾಜ್ಯದ ಜನತೆಗೆ ಉತ್ತರಿಸಿ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸದಾ ಲಂಗು ಲಗಾಮು ಇಲ್ಲದೆ ಮಾತನಾಡುವ ನೀವು ಈ ಎಲ್ಲ ಬೆಳವಣಿಗೆಗಳ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು. ಸತ್ಯಾಂಶವನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನದ ಹೆಸರಿನಲ್ಲಿ ₹2,000 ಲೂಟಿ!
ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನದ ಹೆಸರಿನಲ್ಲಿ ₹2,000 ಲೂಟಿ ನಡೆದಿದೆ ಎಂದೂ ಆರ್. ಅಶೋಕ್ ಅವರು ದೂರಿದ್ದಾರೆ. ₹2,000 ಪಡೆದು 20 ನಿಮಿಷದಲ್ಲಿ ವಿಶೇಷ ಶೀಘ್ರ ದರ್ಶನ ಎಂದು ಹೇಳಿ, ನಂತರ ವಿಐಪಿಗಳ ಆಗಮನದ ನೆಪದಲ್ಲಿ ಭಕ್ತರನ್ನು 4-5 ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲಿಸುವುದು ಯಾವ ಸೀಮೆ ವ್ಯವಸ್ಥೆ. ವಯೋವೃದ್ಧರು, ಮಹಿಳೆಯರು, ಪುಟ್ಟ ಮಕ್ಕಳೊಂದಿಗೆ ಬಂದ ಕುಟುಂಬಗಳು ಅನುಭವಿಸಿದ ಸಂಕಷ್ಟಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.
ಮೈಸೂರು ಉಸ್ತುವಾರಿ ಸಚಿವ ಡಾ. ಯತೀಂದ್ರ ಹಾಗೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಭಕ್ತರಿಂದ ಹಣ ವಸೂಲಿ ಮಾಡುವಾಗ ಇರುವ ಆಸಕ್ತಿ, ಅವರಿಗೆ ಗೌರವಯುತ ದರ್ಶನ ವ್ಯವಸ್ಥೆ ಕಲ್ಪಿಸುವಲ್ಲಿ ಏಕೆ ಕಾಣಿಸುತ್ತಿಲ್ಲ. ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತರು ನಾಡ ಅಧಿದೇವತೆಯ ದರ್ಶನಕ್ಕಾಗಿ ಬರುತ್ತಾರೆ. ಅವರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದು ಸರ್ಕಾರದ ಕರ್ತವ್ಯ. VIP ಸಂಸ್ಕೃತಿಯ ಹೆಸರಿನಲ್ಲಿ ಸಾಮಾನ್ಯ ಭಕ್ತರನ್ನು ಗಂಟೆಗಟ್ಟಲೆ ಕಾಯಿಸಿ ಕಳುಹಿಸುವುದು ಅತ್ಯಂತ ಖಂಡನೀಯ.
ದೇವಾಲಯದ ವ್ಯವಸ್ಥೆಯ ಜೊತೆ ಚೆಲ್ಲಾಟವಾಡಬೇಡಿ. ಭಕ್ತರಿಗೆ ಪಾರದರ್ಶಕ, ಸಮಯೋಚಿತ ಮತ್ತು ಗೌರವಯುತ ದರ್ಶನ ವ್ಯವಸ್ಥೆ ಕಲ್ಪಿಸಿ. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ಭಕ್ತರ ನಂಬಿಕೆಗೆ ಧಕ್ಕೆ ತರುವ ಆಡಳಿತವನ್ನು ಜನರು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications
