Milk Price Hike: ರಾಜ್ಯಾದ್ಯಂತ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಸುಳಿವು
ಈಗಾಗಲೇ ದುಬಾರಿ ದುನಿಯಾದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಶೀಘ್ರದಲ್ಲೇ ಮತ್ತೊಂದು ಶಾಕ್ ರೆಡಿಯಾಗಿದೆ. ಕರ್ನಾಟಕ ಸರ್ಕಾರವು ನಂದಿನಿ ಹಾಲಿನ ದರ ಏರಿಕೆ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ. ಕೆಲವು ತಿಂಗಳ ಹಿಂದಷ್ಟೇ ಹಾಲಿನ ದರ ಏರಿಕೆಯಾಗಿತ್ತು. ಇದೀಗ ಕೆಎಂಎಫ್ ಮತ್ತೆ ಹಾಲಿನ ದರ ಏರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಹಾಲು ಒಕ್ಕೂಟಗಳು ಹಾಗೂ ಉತ್ಪಾದಕರು ಪ್ರತಿ ಲೀಟರ್ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡುವಂತೆ ಕೆಎಂಎಫ್ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಬೆಲೆ ಏರಿಸುವ ಸಂಬಂಧ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಸುಳಿವು ನೀಡಿದ್ದಾರೆ. ಈ ಚಳಿಗಾಲದ ಅಧಿವೇಶನದ ನಂತರ ಸಿಎಂ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿ, ಬಳಿಕ ದರ ಏರಿಕೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ಹಿಂದೆ ಕೆಎಂಎಫ್ ಪ್ರತಿ ಲೀಟರ್ ಹಾಲಿನ ಪ್ಯಾಕೆಟ್‌ಗೆ ಹೆಚ್ಚುವರಿಯಾಗಿ 50 ಮಿಲಿ ಲೀಟರ್ ಸೇರಿಸಿ, ಲೀಟರ್ ಮೇಲೆ 2 ರೂಪಾಯಿ ಏರಿಕೆ ಮಾಡಿತ್ತು. ಆಗ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 24 ರೂಪಾಯಿ ಆಗಿತ್ತು. ಒಂದು ಲೀಟರ್ ಹಾಲಿನ ದರ 44 ರೂಪಾಯಿಗೆ ಏರಿತ್ತು.
ಕಳೆದ ಜೂನ್ ತಿಂಗಳಲ್ಲಿ ಹಾಲಿನ ದರ ಏರಿತ್ತು. ನಂದಿನಿ ಹಾಲಿನ ಪ್ಯಾಕೇಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2 ರೂಪಾಯಿ ದರ ನಿಗದಿಪಡಿಸಲಾಗಿದೇ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ. ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ ಟ್‌ನಲ್ಲಿ 550 ಎಂ.ಎಲ್ ಹಾಗೂ ಒಂದು ಲೀಟರ್ ಪ್ಯಾಕೆಟ್‌ನಲ್ಲಿ 1,050 ಎಂ.ಎಲ್ ಹಾಲು ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.

ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನಂದಿನಿ ಮಳಿಗೆ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದರು. ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲೂ ಲಭ್ಯ. ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಗಣನೀಯ ಏರಿಕೆ ಕಂಡಿದ್ದು, ಮಾರುಕಟ್ಟೆ ವಿಸ್ತರಿಸಲು ನಮ್ಮ ನಂದಿನಿ ಹಾಲು ಮತ್ತು ಮೊಸರು ಈಗ ದೆಹಲಿಗೂ ಕಾಲಿಟ್ಟಿದೆ ಎಂದು ಹೇಳಿದ್ದರು.
ಕೆಎಂಎಫ್ ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತನ್ನ ಮಾರಾಟ ಕೇಂದ್ರಗಳನ್ನು ಹೊಂದಿದ್ದು, ಕನ್ನಡದ ರೈತರ ಶ್ರಮದ ಸಂಸ್ಥೆಯೊಂದು ಕನ್ನಡತನವನ್ನು ಉಳಿಸಿಕೊಂಡು ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ. ಕರ್ನಾಟಕದ ಹೆಮ್ಮೆಯ ನಂದಿನಿ ಹಾಲಿಗೆ ದೇಶದಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ದೆಹಲಿಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ನಂದಿನಿ ಹಾಲು ಮಾರಾಟವಾಗಿದೆ ಎಂದಿದ್ದರು.
ಅಲ್ಲದೆ ದೆಹಲಿಯಲ್ಲಿ ಮೊದಲ ದಿನವೇ 10 ಲೀಟರ್ ಮಾರಾಟವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇನ್ನು ಕೆಲವೇ ತಿಂಗಳಲ್ಲಿ 70 ಲೀಟರ್ ಹಾಲು ಮತ್ತು ಮೊಸರು ಮಾರಾಟ ಮಾಡುವ ಗುರಿ ಇದೆ ಎಂದು ಹೇಳಿದ್ದರು. ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೆಹಲಿ ನಗರದಲ್ಲಿ ಕೆ.ಎಂ.ಎಫ್ ಮತ್ತು ಮಂಡ್ಯ ಹಾಲು ಒಕ್ಕೂಟಗಳು ಸೇರಿಕೊಂಡು ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ದೆಹಲಿಯ ನಿವಾಸಿಗಳಿಂದ ನಂದಿನಿ ಉತ್ಪನ್ನಗಳಿಗೆ ಅತ್ಯುತ್ತಮ ಸ್ಪಂದನೆ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಸಿಎಂ ಹೇಳಿದ್ದರು.
ಇಡೀ ದೇಶದಲ್ಲಿ ಪಶುಸಂಗೋಪನೆ ರೈತರ ಉಪಕಸುಬು. ಗುಜರಾತಿನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಪ್ರಾರಂಭ ಮಾಡಿದರು. ಹಿಂದೆ ನಾನೂ ಕೂಡ ಪಶುಸಂಗೋಪನಾ ಸಚಿವನಾಗಿದ್ದೆ, ಒಂದು ವರ್ಷ ಕಾಲ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷನೂ ಆಗಿದ್ದೆ. ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶೋಷಣೆಯಾಗುತ್ತಿದ್ದುದ್ದನ್ನು ಮನಗಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಿದ್ದೆ ಎಂದಿದ್ದರು.
ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಂದ ಲೀಟರ್‌ಗೆ 32 ರೂ.ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗಳಿಗೆ ಹೆಚ್ಚಿಸಿದ್ದೆ. ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಹೇಳಿದ್ದರು.












Click it and Unblock the Notifications