ಸೋಲಿನ ಹೊಣೆ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಸಾಧ್ಯತೆ?
ಶನಿವಾರ, ಮೇ 13ರಂದು 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬರೋಬ್ಬರಿ 135 ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುತ್ತಿದೆ.
ಇದೇ ವೇಳೆ 2019ರ ಜುಲೈನಿಂದ ಈವರೆಗೆ ಅಧಿಕಾರ ಹಿಡಿದಿದ್ದ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದ ಕಾರಣ ರಾಜ್ಯದ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದರು. ಈ ಬಾರಿ ಬಿಜೆಪಿ 66 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, 12 ಸಚಿವರು ಸೇರಿದಂತೆ ಘಟಾನುಘಟಿ ನಾಯಕರೇ ಸೋಲು ಕಂಡಿದ್ದಾರೆ.

ಇನ್ನು ಅತಂತ್ರ ವಿಧಾನಸಭೆಯ ಕನಸಿನಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈಗಾಗಲೇ ಶನಿವಾರ ಸಂಜೆಯೇ ಮುಖ್ಯಮಂತ್ರಿ ಹುದ್ದೆಗೆ ಬಸವರಾಜ ಬೊಮ್ಮಾಯಿ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನು 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ನೈತಿಕ ಹೊಣೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ (ಮೇ 15) ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತೊಮ್ಮೆ ಅಧಿಕಾರ ಹಿಡಿಯುವ ಆಸೆಯಲ್ಲಿದ್ದ ಬಿಜೆಪಿ ಪಕ್ಷಕ್ಕೆ, ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಂಡು ಕೇಳರಿಯದ ಹಿನ್ನಡೆ ಉಂಟಾಗಿದೆ. ಶನಿವಾರ ಫಲಿತಾಂಶದ ಬಳಿಕ ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನೇ ಸೋಲಿನ ಹೊಣೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು.
ಈ ಕಾರಣದಿಂದ ನಳಿನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತಿದ್ದು, ನಾಳೆ (ಸೋಮವಾರ, ಮೇ 15) ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ನಳಿನ್ ಕುಮಾರ್ ಕಟೀಲ್ ಈಗಾಗಲೇ ತನ್ನ ಆಪ್ತರ ಜೊತೆ ಮಾತನಾಡಿದ್ದಾರೆ ಎಂಬ ಮಾಹಿತಿ ಇದೆ. 2019ರ ಆಗಸ್ಟ್ 20ರಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಅವರ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ಅವರನ್ನು ಕರ್ನಾಟಕ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿತ್ತು.
ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, "ಸೋಲು-ಗೆಲುವು ಬಿಜೆಪಿಗೆ ಹೊಸದೇನು ಅಲ್ಲ. ಮುಂಬರುವ ಲೋಕಸಭೆ ಚುನಾವಣೆಗೂ, ಈ ಚುನಾವಣೆಯ ಫಲಿತಾಂಶಕ್ಕೆ ಯಾವುದೇ ಸಂಬಂಧ ಇಲ್ಲ," ಎಂದು ಹೇಳಿದ್ದಾರೆ.












Click it and Unblock the Notifications