Mysuru Dasara Row: ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿ: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸೂಚನೆ!
ಮೈಸೂರು ದಸರಾ ಉತ್ಸವದ ಸಮಯದಲ್ಲಿ ನಂದಿಧ್ವಜ ಪೂಜೆಗೆ ಸಚಿವರಿಗೆ ಅಧಿಕಾರಿಗಳು ಅವಕಾಶ ನಿರಾಕರಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಹತ್ವದ ಸೂಚನೆ ನೀಡಿದ್ದಾರೆ.
ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆದೇಶ ಮಾಡಿದ್ದಾರೆ. ಮೈಸೂರು ಅರಮನೆ ಆವರಣದಲ್ಲಿ ನಂದಿಧ್ವಜ ಪೂಜೆಯ ಸಂದರ್ಭದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಪಿ.ಎಂ. ನರೇಂದ್ರ ಸ್ವಾಮಿ, ಎಚ್.ಸಿ. ಬಾಲಕೃಷ್ಣ, ಕೆ.ಎಸ್. ಬಸವಂತಪ್ಪ ಅವರಿಗೆ ಪೂಜಾ ಆವರಣ ಪ್ರವೇಶಿಸಲು ಪೊಲೀಸ್ ಅಧಿಕಾರಿಗಳು ನಿರ್ಬಂಧಿಸಿದ ಘಟನೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಮಂತ್ರಿಗಳಿಗೇ ಪ್ರವೇಶ ನಿರಾಕರಿಸುವ ಮೂಲಕ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಖಂಡನೀಯ. ತಕ್ಷಣ ಮಧ್ಯಪ್ರವೇಶಿಸಿ ಸಚಿವರಿಗೆ ಪೂಜಾ ಆವರಣ ಪ್ರವೇಶಿಸಲು ಅನುವು ಮಾಡಿಕೊಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿಚಾರಣೆ ನಡೆಸಿ, ಹೊಣೆಗಾರ ಅಧಿಕಾರಿಗಳ ಕುರಿತು ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದೇನೆ. ಕರ್ತವ್ಯ ನಿರ್ವಹಣೆಯಲ್ಲಿ ಶಿಸ್ತು, ಸಂಯಮ ಹಾಗೂ ಜನಪ್ರತಿನಿಧಿಗಳ ಗೌರವ ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ.
ಅಧಿಕಾರದ ಹೆಸರಿನಲ್ಲಿ ನಡೆಯುವ ಯಾವುದೇ ಉಡಾಫೆ ಅಥವಾ ಉದ್ಧಟತನವನ್ನು ಸರ್ಕಾರ ಸಹಿಸುವುದಿಲ್ಲ. ವಿಚಾರಣಾ ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಪ್ರದೀಪ್ ಈಶ್ವರ್ ಟ್ವೀಟ್: ಕ್ರಮಕ್ಕೆ ಆಗ್ರಹ
ಇನ್ನು ದಲಿತ ಸಮುದಾಯದ ಹಿರಿಯ ಸಚಿವರಾದ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ ಅವರು ಮತ್ತು ಬಸವಂತಪ್ಪ ಅವರನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬ ನಿನ್ನೆ ನಡೆದ ದಸರಾ ಕಾರ್ಯಕ್ರಮದಲ್ಲಿ ತಡೆದಿದ್ದಾರೆ. ಇದು ಖಂಡಿತವಾಗಿಯೂ ಬೇಸರದ ಸಂಗತಿ. ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ರಾಜ್ಯ ಸರ್ಕಾರ ಹಾಗೂ ನಮ್ಮ ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತೇನೆ, ದಯವಿಟ್ಟು ಆ ಪೊಲೀಸ್ ಅಧಿಕಾರಿಯ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಿ ಎಂದು ವಿನಂತಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ದಲಿತ ಸಮುದಾಯವು ನಮ್ಮ ನಾಡಿಗೆ ಮತ್ತು ದೇಶಕ್ಕೆ ನೀಡಿರುವ ಕೊಡುಗೆ ಅದ್ಭುತವಾದದ್ದು. ನಾನೊಬ್ಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಕ್ತನಾಗಿ, ಅನುಯಾಯಿಯಾಗಿ, ದಲಿತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ. ದಯವಿಟ್ಟು ನಮ್ಮ ಸರ್ಕಾರವನ್ನು ಮತ್ತೊಮ್ಮೆ ವಿನಂತಿಸುತ್ತೇನೆ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದು ಪ್ರದೀಪ್ ಈಶ್ವರ್ ಅವರು ಒತ್ತಾಯಿಸಿದ್ದಾರೆ.
ಜಾತಿ ವಿಷಯ ಎಳೆದು ತರುವುದು ತಪ್ಪು: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್
ಮೈಸೂರು ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ತೆರಳುತ್ತಿದ್ದ ಕೆಲವು ಸಚಿವರನ್ನು ಪೊಲೀಸರು ತಡೆದಿರುವ ವಿಡಿಯೋ ವೈರಲ್ ಆಗಿರುವ ವಿಷಯದ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು, ಮೈಸೂರು ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಶಿಷ್ಟಾಚಾರ ಪಾಲಿಸುವ ವೇಳೆ ನಡೆದ ಘಟನೆಗಳಿಗೆ ಜಾತಿ ಬಣ್ಣ ಹಚ್ಚುವುದು ಕೀಳುಮಟ್ಟದ ಆಲೋಚನೆಯಾಗಿದೆ. ಇಂತಹ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳಿಗೆ ಅವರದೇ ಆದ ಶಿಷ್ಟಾಚಾರವಿರುತ್ತದೆ. ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ವಿಶೇಷವಾಗಿ ಅಪಾರ ಜನಸಂದಣಿ ಇರುವ ಸಂದರ್ಭಗಳಲ್ಲಿ ಭದ್ರತೆ ಮತ್ತು ಶಿಷ್ಟಾಚಾರದ ನಿಯಮಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂಬ ಸೂಚನೆ ಪೊಲೀಸರಿಗೆ ಇರಬಹುದು. ಈ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ. ಆದರೆ, ಮೇಲಧಿಕಾರಿಗಳಿಂದ ಬಂದ ಸೂಚನೆಗಳನ್ನು ಪೊಲೀಸರು ಪಾಲಿಸಿರುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.
ಸಿಎಂ ಜೊತೆಯಲ್ಲಿ ಹೋಗ್ತಿದ್ದ ಸಚಿವರಾದ ಶಿವರಾಜ್ ತಂಗಡಗಿ, ಬಸವಂತಪ್ಪ, ನರೇಂದ್ರ ಸ್ವಾಮಿಯವರನ್ನ ಪೊಲೀಸರು ಎಳೆದಾಡಿದ್ದು ಯಾಕೆ.? https://t.co/OAMmlCQyt4
— 𝐒𝐡𝐚𝐫𝐚𝐭𝐡 | ಶರತ್ (@sharath_nayaka7) October 21, 2026


Click it and Unblock the Notifications
