ರೋಷನ್ ಬೇಗ್ ರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮುಸ್ಲಿಮರ ಆಗ್ರಹ
ಬೆಂಗಳೂರು, ಮೇ 22: ಇನ್ನೇನು ನಾಳೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಆದರೆ ಉಪಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸಿಗೆ ಬಿಟ್ಟು ಕೊಡಲಾಗಿದ್ದು, ಈ ಸ್ಥಾನಕ್ಕೆ ಯಾರು ಎಂಬುದು ಇನ್ನೂ ಪ್ರಶ್ನಾರ್ಥಕವಾಗಿದೆ. ಎಲ್ಲಾ ಸಮುದಾಯದವರು ನಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಬೇಡಿಕೆ ಮುಂದಿಡುತ್ತಿದ್ದಾರೆ.
ಇದೀಗ ಮುಸ್ಲಿಂ ಸಮುದಾಯದಿಂದ ಇಂಥಹದ್ದೊಂದು ಬೇಡಿಕೆ ಕೇಳಿ ಬಂದಿದೆ. 7 ಬಾರಿ ಶಾಸಕರಾಗಿರುವ ಹಿರಿಯ ಕಾಂಗ್ರೆಸಿಗ, ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರಿಗೆ ಮೈತ್ರಿ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕೆಲವು ಮುಸ್ಲಿಂ ಸಂಘಟನೆಗಳು ಇಂದು ಆಗ್ರಹಿಸಿವೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಮುಸ್ಲಿಂ ಸಂಘಟನೆಗಳ ಮುಖಂಡರು ಈ ಬೇಡಿಕೆ ಇಟ್ಟಿದ್ದಾರೆ.
ಈ ಹಿಂದೆ ಅಖಿಲ ಭಾರತ ವೀರಶೈವ ಮಹಾಸಭಾ ತಮ್ಮ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಿಎಂ ಹುದ್ದೆ ನೀಡುವಂತೆ ಬೇಡಿಕೆ ಇಟ್ಟಿದ್ದರೆ, ವಾಲ್ಮೀಕಿ ಸಮುದಾಯ ತಮ್ಮ ಸಮುದಾಯದಿಂದ ಸತೀಶ್ ಜಾರಕಿಹೊಳಿಯವರಿಗೆ ಡೆಪ್ಯುಟಿ ಸಿಎಂ ಪೋಸ್ಟ್ ನೀಡಬೇಕು ಎಂದು ಪಟ್ಟು ಹಿಡಿದಿದೆ.
ಇನ್ನೊಂದೆಡೆ ದಲಿತರು ಯಾರೂ ಇಲ್ಲಿಯವರೆಗೆ ಕರ್ನಾಟಕದಲ್ಲಿ ಉನ್ನತ ಹುದ್ದೆಗೆ ಏರಿಲ್ಲ, ಈ ಕಾರಣಕ್ಕೆ ಈ ಸಮುದಾಯದವರಿಗೆ ಈ ಹುದ್ದೆ ನೀಡಬೇಕು ಎಂಬ ಬೇಡಿಕೆ ಇದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಉಮಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.
ಇದರ ಮಧ್ಯೆ ಮತ್ತೊಂದಿಷ್ಟು ಸಮುದಾಯಗಳಿಂದ, ಉತ್ತರ ಕರ್ನಾಟಕದಂಥ ಭಾಗಗಳಿದ ನಮ್ಮ ಭಾಗಕ್ಕೆ, ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಿ ಎಂಬ ಬೇಡಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುತ್ತಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.












Click it and Unblock the Notifications