Congress Guarantees: ಗ್ಯಾರಂಟಿ ಹಣ ತಿಂಗಳ ಸಂಬಳವಲ್ಲ ಎಂದ ಸಚಿವ ಜಾರ್ಜ್
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಫಲಾನುಭವಿಗಳಿಗೆ ಹಲವು ತಿಂಗಳಿನಿಂದ ಹಣ ಬಂದಿಲ್ಲ ಎಂಬ ದೂರು ಕೇಳಿಬಂದಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸದ್ಯ ರಾಜ್ಯಾದ್ಯಂತ ಆಕ್ರೋಶವೂ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸಚಿವ ಕೆ.ಜೆ.ಜಾರ್ಜ್ ಅವರು ಉಡಾಫೆ ಉತ್ತರ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಗಳ ಹಣ ಸಕಾಲಕ್ಕೆ ಬರುತ್ತಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಚಿವ ಜಾರ್ಜ್, ಗ್ಯಾರಂಟಿ ಯೋಜನೆಗಳ ಹಣವೇನು ತಿಂಗಳ ಸಂಬಳ ಅಲ್ಲವಲ್ಲಾ? ಎಂದು ಹೇಳಿದ್ದಾರೆ. ಪ್ರತಿ ತಿಂಗಳು ಫಲಾನುಭವಿಗಳಿಗೆ ಹಣ ಹೋಗುತ್ತಿರುವುದು ವಿಳಂಬ ಆಗಿರಬಹುದು. ಆ ವಿಚಾರ ಗೊತ್ತಿರಬೇಕು ಎಂಬ ನಿಯಮ ಇದೆಯಾ? ಸಮಸ್ಯೆ ಗೊತ್ತಾದ ಕೂಡಲೇ ಪರಿಹರಿಸುವ ಕೆಲಸ ಮಾಡ್ತಾರೆ. ಗ್ಯಾರಂಟಿ ಹಣವೇನು ತಿಂಗಳ ಸಂಬಳದ ಟೈಪ್ ಅಲ್ವಲ್ಲಾ? ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಮಾರ್ಚ್ ವೇಳೆಗೆ ಎಲ್ಲ ಬಾಕಿ ಹಣ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ. ಬೇರೆ ಬೇರೆ ಕಾರಣಗಳಿಂದ ಅದು ವಿಳಂಬ ಆಗಬಹುದು ಎಂದು ಜಾರ್ಜ್ ಹೇಳಿದ್ದಾರೆ. ರಾಜ್ಯದೆಲ್ಲೆಡೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹೊತ್ತಿನಲ್ಲೇ ಜಾರ್ಜ್ ಅವರ ಈ ಉಡಾಫೆ ಹೇಳಿಕೆಯಿಂದ ಸಾರ್ವಜನಿಕರು ಗರಂ ಆಗಿದ್ದಾರೆ.
ಜಾರ್ಜ್ ಅವರ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಖಂಡಿಸಿದ್ದಾರೆ. ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ತಿಂಗಳ ಸಂಬಳ ಅಲ್ವಲ್ಲ ಅಂತ ಹೇಳಿದ್ದೀರಲ್ಲ? ಇದೇನಾ ಮತದಾರರಿಗೆ ನೀವು ಕೊಡುವ ಗೌರವ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಗೃಹಲಕ್ಷ್ಮಿ ಹಣ ಕೊಡಿ, ಅನ್ನಭಾಗ್ಯದ ಹಣ ಕೊಡಿ ಅಂತ ಮತದಾರರೇನು ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ. ಈ ಗ್ಯಾರೆಂಟಿ ಯೋಜನೆಗಳನ್ನು ಪ್ರಾರಂಭಿಸಿ ಅಂತ ಜನತೆ ಕೇಳಿಯೂ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕಾರದ ತೆವಲಿಗೆ ಬೇಕಾಬಿಟ್ಟಿ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ, ಈಗ ಮತದಾರರ ಬಗ್ಗೆ ಕೀಳಾಗಿ ಯಾಕೆ ಮಾಡುತ್ತೀರಿ? ನಿಮ್ಮ ಕೈಲಾದರೆ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳನ್ನು ಗೌರವದಿಂದ ಜಾರಿ ಮಾಡಿ. ನಿಮ್ಮ ಕೈಲಾಗದಿದ್ದರೆ ಬಿಟ್ಟುಬಿಡಿ ಎಂದು ಕೆಂಡವಾಗಿದ್ದಾರೆ.
ಗ್ಯಾರೆಂಟಿ ಯೋಜನೆಗಳು ಜಾರಿ ಆಗುವ ಮುನ್ನವೂ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದರು. ಅವು ಇಲ್ಲದೆಯೂ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ಕಾಂಗ್ರೆಸ್ ಕೋಳಿ ಕೂಗಿದರೆ ಕರ್ನಾಟಕದಲ್ಲಿ ಬೆಳಕು ಹರಿಯುತ್ತದೆ ಎನ್ನುವ ದುಸ್ಥಿತಿ ಕನ್ನಡಿಗರಿಗೆ ಬಂದಿಲ್ಲ. ಕನ್ನಡಿಗರ ಸ್ವಾಭಿಮಾನ ಕೆಣಕಬೇಡಿ. ಈಗಾಗಲೇ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಅಡ್ರೆಸ್ ಇಲ್ಲದಂತಾಗಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ, ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ನಿರ್ನಾಮ ಆಗುವುದು ಗ್ಯಾರೆಂಟಿ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
"ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಮೂರು ತಿಂಗಳಿನಿಂದ ಜಮೆಯಾಗಿಲ್ಲ ಎಂಬುದು ನನ್ನ ಗಮನದಲ್ಲಿದೆ. ಯಾವ ಯೋಜನೆಗಳನ್ನೂ ನಿಲ್ಲಿಸುವ ಪ್ರಶ್ನೆಯಿಲ್ಲ. ಪಾವತಿಯಲ್ಲಿ ಆಗಿರುವ ವಿಳಂಬವನ್ನು ಪರಿಶೀಲಿಸಿ ಕೂಡಲೇ ಬಿಡುಗಡೆ ಮಾಡಲಾಗುವುದು" ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.












Click it and Unblock the Notifications