Mangaluru: ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು: ದಶಕಗಳ ಕನ್ನಡಿಗರ ಕನಸು ನನಸು; ಕೇರಳಂ ಮುಖ್ಯಮಂತ್ರಿ ವಿ.ಡಿ ಸತೀಶನ್ ಕಿರಿಕ್

ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು ಸೇರಿದೆ ಈ ಮೂಲಕ ದಶಕಗಳ ಕನ್ನಡಿಗರ ಕನಸು ನನಸಾಗಿದೆ. ಆದರೆ ಇದಕ್ಕೆ ಕೇರಳಂ ಮುಖ್ಯಮಂತ್ರಿ ವಿ.ಡಿ ಸತೀಶನ್ ಕಿರಿಕ್ ಮಾಡಿದ್ದಾರೆ. ಇದು ಏಕಪಕ್ಷೀಯ ನಿರ್ಧಾರ ಎಂದು ಕೇರಳ ಸರ್ಕಾರ ದೂರಿದೆ. ಇದರ ಸಂಪುರ್ಣ ವಿವರ ಇಲ್ಲಿದೆ.

ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು ಸೇರಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. ಕರಾವಳಿ ಕರ್ನಾಟಕದ ರೈಲು ಬಳಕೆದಾರರು, ರೈಲ್ವೆ ಆಡಳಿತ ಮತ್ತು ಸೇವೆಗಳಿಗೆ ಸಂಬಂಧಿಸಿದ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

Mangaluru

ಮೂರು ವಲಯಗಳಲ್ಲಿ ಹಂಚಿಹೋಗಿದ್ದ ಮಂಗಳೂರು ರೈಲ್ವೆ ಪ್ರದೇಶವು ಇದೀಗ, ಈ ಭಾಗದ ಜನರ ಅಪೇಕ್ಷೆಯಂತೆ ನೈಋತ್ಯ ರೈಲ್ವೆಯ ಭಾಗವಾಗಲಿದೆ. (ವಿಭಾಗೀಯ ಪ್ರಧಾನ ಕಚೇರಿ ಮೈಸೂರು ಮತ್ತು ವಲಯ ಪ್ರಧಾನ ಕಚೇರಿ ಹುಬ್ಬಳ್ಳಿ ಆಗಿರುತ್ತದೆ.) ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿರುವ ಮಂಗಳೂರು ರೈಲ್ವೆ ಪ್ರದೇಶಕ್ಕೆ ಈ ಮೂಲಕ ಮತ್ತಷ್ಟು ಹೆಚ್ಚಿನ ಶಕ್ತಿ ದೊರೆತಂತಾಗಿದ್ದು, ಸಕಾಲಿವಾದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.

ರೈಲ್ವೆ ಜಾಲವು ಪ್ರಾದೇಶಿಕವಾದ ಗಡಿಗಳನ್ನು ದಾಟಿ ಹಬ್ಬಿದ್ದರೂ, ಆಡಳಿತಾತ್ಮಕವಾಗಿ ವಲಯಗಳನ್ನು ಸಂಯೋಜಿಸುವುದರಿಂದ ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಬಹುದು ಮತ್ತು ವ್ಯಾಪಾರ ವಹಿವಾಟುಗಳಲ್ಲಿನ ಸುಲಭತೆಯನ್ನು ಮತ್ತಷ್ಟು ಸುಧಾರಿಸಬಹುದಾಗಿದೆ.

2024 ರ ಜುಲೈ ತಿಂಗಳಲ್ಲಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಈ ಬೇಡಿಕೆಯನ್ನು ನನ್ನ ಗಮನಕ್ಕೆ ತಂದಿದ್ದರು. ಆ ಭಾಗವಾಗಿ ದೀರ್ಘಕಾಲದ ಕುಂದುಕೊರತೆಗಳನ್ನು ಪರಿಹರಿಸುವುದು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಮತ್ತು ಕೊಂಕಣ್ ರೈಲ್ವೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಚರ್ಚಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಅನುಮೋದಿಸುವ ಮೂಲಕ ಮಂಗಳೂರು ಭಾಗದ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿರುವ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದೂ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ.

ಮಂಗಳೂರಿನ ರೈಲ್ವೆಗಳು ಕೊನೆಗೂ ಒಂದೇ ಸೂರಿನಡಿಗೆ ಬರುತ್ತಿವೆ: ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರಿನ ರೈಲ್ವೆಗಳು ಕೊನೆಗೂ ಒಂದೇ ಸೂರಿನಡಿಗೆ ಬರುತ್ತಿವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೇಳಿದ್ದಾರೆ.
ದಕ್ಷಿಣ ಮತ್ತು ನೈಋತ್ಯ ರೈಲ್ವೆಗಳಾಗಿ ವಿಂಗಡಿಸಲಾದ ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಡಿಯಲ್ಲಿ ತರಲಾಗುತ್ತಿರುವುದರಿಂದ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಬೇಡಿಕೆ ಈಡೇರುತ್ತಿದೆ.

ಜೂನ್ 2024 ರಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ನಾವು ಆದ್ಯತೆಯಾಗಿ ಈ ಬೇಡಿಕೆಯನ್ನು ಎತ್ತಿದ್ದರಿಂದ ಇದು ನನಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ. ಅಂದಿನಿಂದ, ನಾವು ಇದನ್ನು ನಿರಂತರವಾಗಿ ಅನುಸರಿಸಿದ್ದೇವೆ - ನಮ್ಮ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಇದನ್ನು ಪದೇ ಪದೇ ಚರ್ಚಿಸಿದ್ದೇವೆ, ಈ ದೀರ್ಘಕಾಲದಿಂದ ಬಾಕಿ ಉಳಿದಿರುವ ಬೇಡಿಕೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಅವರ ಪೂರ್ವಭಾವಿ ಭಾಗವಹಿಸುವಿಕೆ ಮತ್ತು ಸ್ಪಂದಿಸುವಿಕೆಯನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ. ಲಭ್ಯವಿರುವ ಪ್ರತಿಯೊಂದು ಸಂಸದೀಯ ಮತ್ತು ಸಾಂಸ್ಥಿಕ ವೇದಿಕೆಯನ್ನು ಬಳಸಿಕೊಂಡು ನಾವು ಕಾಳಜಿಯನ್ನು ಎತ್ತಿ ತೋರಿಸಿದ್ದೇವೆ ಮತ್ತು ಅದರ ತ್ವರಿತ ಪರಿಹಾರಕ್ಕಾಗಿ ಒತ್ತಾಯಿಸಿದ್ದೇವೆ.

ಇದು ಮಂಗಳೂರಿಗೆ ಮಹತ್ವದ ಹೆಜ್ಜೆಯಾಗಿದೆ - ನ್ಯಾಯವ್ಯಾಪ್ತಿಯ ಅಡೆತಡೆಗಳನ್ನು ಕಡಿಮೆ ಮಾಡುವುದು, ಸಮನ್ವಯವನ್ನು ಸುಧಾರಿಸುವುದು, ಪ್ರಯಾಣಿಕರ ಕಾಳಜಿಗಳನ್ನು ವೇಗವಾಗಿ ಪರಿಹರಿಸಲು ಅನುವು ಮಾಡಿಕೊಡುವುದು ಮತ್ತು ಕರಾವಳಿ ಕರ್ನಾಟಕದಾದ್ಯಂತ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಹೆಚ್ಚಿನ ಗಮನ ನೀಡುವುದು ಇದರ ಉದ್ದೇಶವಾಗಿದೆ.

ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ. ಇದರಿಂದ ನಮ್ಮ ರೈಲ್ವೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿದ್ದು, ಮುಖ್ಯವಾಗಿ ಮಂಗಳೂರಿನ ರೈಲ್ವೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗಲು ಅನುಕೂಲವಾಗಲಿದೆ ಎಂದು ಸಂಸದರು ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್ ಕಿರಿಕ್

ಮಂಗಳೂರು ಜಂಕ್ಷನ್ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆಗೆ ಬದಲಾಯಿಸುತ್ತಿರುವುದು ರೈಲ್ವೆ ಮಂಡಳಿಯ ಏಕಪಕ್ಷೀಯ ನಿರ್ಧಾರವಾಗಿದೆ. ಈ ಕ್ರಮದಿಂದ ಪಾಲಕ್ಕಾಡ್ ವಿಭಾಗಕ್ಕೆ ಭಾರಿ ಆದಾಯ ನಷ್ಟವಾಗಲಿದೆ. ಅಲ್ಲದೆ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂದು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ. ಅಲ್ಲದೆ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆಯಲಾಗುವುದು ಎಂದೂ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+