Congress: ಡಿಕೆಶಿ-ಸಿದ್ದರಾಮಯ್ಯ ನಡುವೆ ಇದ್ಯಾ ಆಂತರಿಕ ಕಚ್ಚಾಟ? ಚರ್ಚೆಗೆ ಕಾರಣವಾಯ್ತು ಖರ್ಗೆ ಹೇಳಿಕೆ
ಕಾಂಗ್ರೆಸ್ ನಾಯಕರಾದ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ವಿರುದ್ಧ ದಿಕ್ಕಿನಲ್ಲಿ ಹೋಗಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ವೇದಿಕೆಯಲ್ಲೇ ಹೇಳಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಇಬ್ಬರೂ ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂದು ಖರ್ಗೆ ಹೇಳಿರುವ ಕಿವಿಮಾತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಈ ಪೈಕಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸೈಲೆಂಟ್ ವಾರ್ ನಡೆಯುತ್ತಿದೆಯಾ? ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿದೆ, ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ ಎಂದು ಕಾಂಗ್ರೆಸ್ ನಾಯಕರು ಹಲವು ಬಾರಿ ಮೇಲ್ನೋಟಕ್ಕೆ ಹೇಳಿಕೊಂಡರೂ ಹಿಂಬದಿಯಲ್ಲಿ ಆಂತರಿಕ ಕಚ್ಚಾಟ ಜೋರಾಗಿಯೇ ಇದೆ ಎಂದು ಹೇಳಲಾಗುತ್ತಿದೆ. ಮಲ್ಲಿಕಾರ್ಜುನ್ ಖರ್ಗೆ ಅವರು ಆಡಿರುವ ಮಾತುಗಳು ಕೂಡ ಇದಕ್ಕೆ ಪುಷ್ಟಿ ನೀಡುವಂತಿವೆ. ಇಷ್ಟಕ್ಕೂ ಖರ್ಗೆ ಹೇಳಿದ್ದೇನು ಗೊತ್ತಾ?

ಜೇವರ್ಗಿಯಲ್ಲಿ ನಡೆದ ಕಲ್ಯಾಣ ಪಥ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮಾತನಾಡುತ್ತಾ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದರು. ಇಬ್ಬರೂ ಯಾವ ಕಾರಣಕ್ಕೂ ವಿರುದ್ಧ ದಿಕ್ಕಿನಲ್ಲಿ ಹೋಗಬೇಡಿ, ನೇರ ದಾರಿಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ವೇದಿಕೆಯಲ್ಲೇ ಹೇಳಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಡಿಕೆ ಶಿವಕುಮಾರ್ ಅವರು ನಕ್ಕಿದ್ದರು. ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿದರೆ ನಮ್ಮ ಭಾಗದಲ್ಲಿ ಕೆಲಸ ಆಗುತ್ತದೆ. ಹೀಗಾಗಿ ಇಬ್ಬರೂ ಜೊತೆಯಲ್ಲೇ ಸಾಗಬೇಕು. ಬೇರೆ ಬೇರೆ ದಿಕ್ಕಿನಲ್ಲಿ ಯಾವ ಕಾರಣಕ್ಕೂ ಹೋಗಬಾರದು ಎಂದು ಖರ್ಗೆ ಹೇಳಿದ್ದರು.
ಮೊದಲು ಕಾಂಗ್ರೆಸ್‌ನ ನಟ್ಟು ಬೋಲ್ಟ್ ಮಾಡಿ ಎಂದ ಬಿಜೆಪಿ
ಇದರ ಬೆನ್ನಲ್ಲೇ ಪಕ್ಷದಲ್ಲಿ ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ಇದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಕೂಡ ಇದನ್ನು ಅಸ್ತ್ರವಾಗಿ ಬಳಸಿಕೊಂಡಿದೆ. ಕಾಂಗ್ರೆಸ್‌ನ ಒಳಜಗಳಕ್ಕೆ ಕೊನೆ ಮೊದಲು ಎಂಬುದೇ ಇಲ್ಲ. ರಾಜ್ಯ ಕಾಂಗ್ರೆಸ್ಸಿನ ನಟ್ಟು ಬೋಲ್ಟುಗಳನ್ನು ಬಿಗಿಗೊಳಿಸಲು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರೇ ಫೀಲ್ಡಿಗಿಳಿದಿದ್ದಾರೆ ಎಂದು ಕಾಲೆಳೆದಿದೆ.

ಸಿಎಂ ಅವರು ಮಂಡಿಸಿರುವ ಹಲಾಲ್ ಬಜೆಟ್ ಕೊನೆಯದ್ದಾಗಲಿದೆ ಎಂದು ಡಿಕೆ ಶಿವಕುಮಾರ್ ಅವರ ಬಣ ಪ್ರತಿಪಾದಿಸುತ್ತಿದ್ದರೆ, ಇನ್ನೂ 3 ಬಜೆಟ್ ಸಿದ್ದರಾಮಯ್ಯ ಅವರೇ ಮಂಡಿಸಲಿದ್ದಾರೆ ಎಂದು ಸಿದ್ದರಾಮಯ್ಯ ಬಣ ಹೇಳುವ ಮೂಲಕ ಎರಡೂವರೆ ವರ್ಷದ ಒಪ್ಪಂದವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ಎರಡೂ ಬಣಗಳಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್ಸಿನ ಈ ಒಳಜಗಳದಿಂದ ರಾಜ್ಯದ ಆಡಳಿತ ಯಂತ್ರ ನಟ್ಟು ಬೋಲ್ಟುಗಳೂ ಕಳಚಿಕೊಂಡಿದೆ. ಅಭಿವೃದ್ಧಿ ಎನ್ನುವುದು ರಾಜ್ಯದಲ್ಲಿ ಮರೀಚಿಕೆಯಾಗಿದೆ. ಒಂದು ಕಡೆ ಬೆಲೆ ಏರಿಕೆ ಮತ್ತೊಂದು ಕಡೆ ಶೂನ್ಯ ಅಭಿವೃದ್ಧಿ, ಒಟ್ಟಿನಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ದಿವಾಳಿಗೊಳಿಸುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಕರ್ನಾಟಕದಲ್ಲಿ ರಸ್ತೆಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ದಿವಾಳಿತನವನ್ನ ಎತ್ತಿ ತೋರಿದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಸರ್ಕಾರದ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮತ್ತು ಭ್ರಷ್ಟಚಾರವನ್ನ ಬಯಲು ಮಾಡಿದ್ದಾರೆ. ರಾಜ್ಯ ಸರ್ಕಾರದ ಯಾವುದೇ ಯೋಜನೆ ಮೈಸೂರಿನಿಂದ ಪ್ರಾರಂಭವಾಗಿ ದಾವಣಗೆರೆಗೆ ಬಂದು ನಿಂತು ಬಿಡುತ್ತದೆ, ಬಳ್ಳಾರಿಯವರೆಗೂ ತಲುಪುವುದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಗೇಲಿ ಮಾಡಿದ್ದಾರೆ.
ಈಗ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕಕ್ಕೆ ಬಿಡುಗಡೆ ಆಗುವ ಅನುದಾನ ದಾವಣಗೆರೆಯಲ್ಲಿಯೇ ನಿಂತು ಹೋಗುತ್ತದೆ. ಬಳ್ಳಾರಿಯೂ ತಲುಪಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಮತ್ತೆ ಒಪ್ಪಿಕೊಂಡಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.












Click it and Unblock the Notifications