ಗೃಹಲಕ್ಷ್ಮಿ ಯೋಜನೆ: ಮಹತ್ವದ ಅಪ್‌ಡೇಟ್ ಕೊಟ್ಟ ಡಿ.ಕೆ.ಶಿವಕುಮಾರ್!
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು 5 ಗ್ಯಾರಂಟಿಗಳ ಪಾತ್ರ ದೊಡ್ಡದಾಗಿದೆ. ಹೀಗಾಗಿಯೇ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಗ್ಯಾರಂಟಿಗಳ ಜಾರಿಗೆ ಬದ್ಧವಾಗಿತ್ತು. ಈ ಪೈಕಿ ಈಗಾಗಲೇ 3 ಗ್ಯಾರಂಟಿಗಳು ಜಾರಿಯಾಗಿದ್ದು, ಇನ್ನುಳಿದ 2 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಜಾರಿ ಮಾಡಲು ಸರ್ಕಾರವೂ ಸನ್ನದ್ಧವಾಗಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಮೂಲಕ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡಲಾಗುತ್ತದೆ. ಇದು ಗ್ರಾಮೀಣ ಭಾಗ ಸೇರಿ ಬಡತನದಲ್ಲಿ ಬದುಕುತ್ತಿರುವ ಕೋಟ್ಯಂತರ ಕುಟುಂಬಗಳಿಗೆ ಸಹಾಯ ಮಾಡಲಿದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯ ತನಕ 1.50 ಕೋಟಿ ಮನೆಯೊಡತಿಯರು ನೋಂದಣಿ ಮಾಡಿಸಿದ್ದಾರೆ. ಹೀಗೆ ಕೋಟ್ಯಂತರ ಜನರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಹಿಸುದ್ದಿ ನೀಡಿದ್ದು, ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ತಿಳಿಯಿರಿ.

ಯಾವಾಗ ಸಿಗಲಿದೆ 2000 ರೂಪಾಯಿ?
ಹೌದು ಗೃಹಲಕ್ಷ್ಮಿ ಯೋಜನೆ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಮಹತ್ವದ ಸಭೆ ನಡೆಸಿದರು. ಈ ವೇಳೆ ಮಾತನಾಡಿ, ಎಲ್ಲರ ಅನುಕೂಲಕ್ಕೆ ಅನುಗುಣವಾಗಿ ಆಗಸ್ಟ್ 20ರ ಬದಲಿಗೆ ಆಗಸ್ಟ್ 27ರಂದು ರಾಜ್ಯದ 11 ಸಾವಿರ ಕಡೆ ಗೃಹಲಕ್ಷ್ಮಿ ಯೋಜನೆಗೆ ಬೃಹತ್ ಮಟ್ಟದಲ್ಲಿ ಚಾಲನೆ ನೀಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ. ಈ ಯೋಜನೆಯಲ್ಲಿ ನೋಂದಣಿಯಾಗಿರುವ 1.50 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನೇರಪ್ರಸಾರ
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಹತ್ವದ ಮೀಟಿಂಗ್ ನಂತರ ವಿಕಾಸಸೌಧದಲ್ಲಿ ಮಾಧ್ಯಮ ಸಿಬ್ಬಂದಿಗೆ ಮಾಹಿತಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಬೆಳಗಾವಿಯಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನೇರಪ್ರಸಾರ ಆಗಲಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಪ್ರತಿ ವಾರ್ಡಿನಲ್ಲಿ ಸಂಭ್ರಮದಿಂದ ಆಚರಣೆ ಮಾಡುವಂತೆ ತಿಳಿಸಿದ್ದೇವೆ. ಜೂಮ್ & ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರ ವ್ಯವಸ್ಥೆ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಮಾಹಿತಿ ನೀಡಿದರು.
ರಾಜ್ಯದ ನಾನಾ ಕಡೆ ಅನೇಕ ಹೆಣ್ಣು ಮಕ್ಕಳು ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರುವ ದಿನ ಮನೆಯ ಮುಂದೆ ರಂಗೋಲಿ ಹಾಕಿ ಸಂಭ್ರಮ ಆಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಗೃಹಲಕ್ಷ್ಮಿಯನ್ನು ಆಹ್ವಾನ ಮಾಡಿಕೊಳ್ಳಬೇಕು ಎಂದು ಇದೇ ವೇಳೆ ಡಿಸಿಎಂ ತಿಳಿಸಿದರು. ಹಾಗೇ ಗುತ್ತಿಗೆದಾರರು ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿದ್ದಾರೆ ಎನ್ನುವ ಪ್ರಶ್ನೆಗೆ, ಅವರಿಗೆ ಆಲ್ ದಿ ಬೆಸ್ಟ್, ಒಳ್ಳೆಯದಾಗಲಿ, ಈ ಹೋರಾಟದ ಹಿಂದೆ ಇರುವವರಿಗೂ ಒಳ್ಳೆಯದಾಗಲಿ. ಆದರೆ ನ್ಯಾಯ ಏನಿದೆಯೋ ಅದರಂತೆ ನಾವು ನಡೆಯಲಿದ್ದೇವೆ ಎಂದು ತಿಳಿಸಿದರು.












Click it and Unblock the Notifications