ಆಗಸ್ಟ್-ಸೆಪ್ಟೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆ: ಸ್ಪೋಟಕ ಭವಿಷ್ಯ
ಬೆಂಗಳೂರು , ಜೂನ್ 26: ರಾಜ್ಯ ರಾಜಕಾರಣದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇತ್ತೀಚೆಗಷ್ಟೇ, ವಸತಿ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಲಂಚ ಪಡೆದಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕರು ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸಚಿವ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ.
ಗುರುವಾರ (ಜೂನ್ 26) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಗಸ್ಟ್-ಸೆಪ್ಟಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದೆ. ಈಗಾಗಲೇ ಬದಲಾವಣೆಯ ಗಾಳಿ ತಣ್ಣಗೆ ಬೀಸುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸ್ಪೋಟಕ ಹೇಳಿಕೆ ನೀಡಿದರು.

ರಾಜ್ಯ ಕಾಂಗ್ರೆಸ್‌ನಲ್ಲಿನ ಶಾಸಕರ ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಏನು ಮಾಡುವುದು ಪವರ್ ಸೆಂಟರ್‌ಗಳು ಹೆಚ್ಚಾಗಿಬಿಟ್ಟಿವೆ. 2013ರಿಂದ 2018ರ ವರೆಗೆ ಒಂದೇ ಪವರ್ ಸೆಂಟರ್ ಇತ್ತು. ಈಗ ಒಂದು-ಎರಡು ಮೂರು ಲೆಕ್ಕ ಇಲ್ಲದಷ್ಟು ಪವರ್ ಸೆಂಟರ್‌ಗಳಿವೆ. 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಯಾವ ಒತ್ತಡ ಇರಲಿಲ್ಲ. ಇದೀಗ ಪವರ್ ಸೆಂಟರ್‌ಗಳು ಹೆಚ್ಚಾಗಿರುವ ಅವರಿಗೆ ಹೆಚ್ಚು ತಲೆನೋವಾಗಿದೆ ಎಂದು ಹೇಳಿದರು.
ಗ್ಯಾರಂಟಿ ಕೊಟ್ಟ ಕಾರಣ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಇದೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದಾರೆ. ಹಣ ಇಲ್ಲದಿದ್ದರೆ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಾಗುತ್ತಿತ್ತಾ? ಬೇಡಿಕೆಗೆ ತಕ್ಕಂತೆ ಅನುದಾನ ಸಿಕ್ಕಿಲ್ಲ ಎಂದು ಬೇಸರ ಇರಬಹುದು. ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಇಲ್ಲ. ಆಡಳಿತ ಹಾಗೂ ವಿಪಕ್ಷದ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೂ ಅನುದಾನ ಒದಗಿಸುತ್ತಿದೆ ನಮ್ಮ ಸರ್ಕಾರ ಎಂದು ಹೇಳಿದರು.
ನಮ್ಮ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಅನುದಾನವನ್ನೇ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳುತ್ತಿರವುದೆಲ್ಲ ಸುಳ್ಳು. ಅನುದಾನದ ವಿಚಾರದಲ್ಲಿ ಯಾರ ಕ್ಷೇತ್ರಕ್ಕೂ ತಾರತಮ್ಯ ಮಾಡಿಲ್ಲ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದರು.
ರಾಜೀನಾಮೆ ಅಸ್ತ್ರ ಬಿಟ್ಟಿದ್ದ ರಾಜು ಕಾಗೆ: ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಕಾಗೆ ಅವರು, ನಮ್ಮ ಸರ್ಕಾರದಲ್ಲಿ ಯಾವುದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಎರಡು ದಿನದಲ್ಲಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಕೊಟ್ಟರೂ ಯಾವುದೇ ಆಶ್ಚರ್ಯವಿಲ್ಲ ಎಂದು ಇತ್ತೀಚೆಗಷ್ಟೇ ಸ್ಪೋಟಕ ಹೇಳಿಕೆ ನೀಡಿದ್ದರು.
ಹಣ ಕೊಟ್ಟವರಿಗೆ ಅಷ್ಟೇ ವಸತಿ ನಿಗಮದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿರುವ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ರಾಜು ಕಾಗೆ ಬಿ.ಆರ್.ಪಾಟೀಲ್ ಹೇಳಿದ್ದು ಸುಳ್ಳಲ್ಲ, ಅದು ನಿಜ ಎಂದು ಸರ್ಕಾರದ ವಿರುದ್ಧ ಅಸಮಾಧಾಣ ವ್ಯಕ್ತಪಡಿಸಿದ್ದರು.
25 ಕೋಟಿ ರೂಪಾಯಿ ಅನುದಾನ ನೀಡಿ 2 ವರ್ಷ ಕಳೆದರೂ ವರ್ಕ್ ಆರ್ಡರ್ ಇಲ್ಲ. ಎರಡು ವರ್ಷ ಕಳೆದರೂ ವರ್ಕ್ ಆರ್ಡರ್ ನೀಡುತ್ತಿಲ್ಲ ಅಂದರೆ ಏನು ಅರ್ಥ? ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಸಹ ಎರಡು ದಿನದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಿದರೂ ಆಶ್ಚರ್ಯ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications