ದಲಿತ ನಾಯಕ ನಾಗೇಂದ್ರ ಸುರಿಸಿದ ಕಣ್ಣೀರು ಬಿಜೆಪಿಯನ್ನ ಸರ್ವನಾಶ ಮಾಡಲಿದೆ": ಮಧು ಬಂಗಾರಪ್ಪ ವಾಗ್ದಾಳಿ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರವನ್ನಿಟ್ಟುಕೊಂಡು ರಾಜ್ಯ ಸರ್ಕಾರ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಆರೋಪಗಳನ್ನ ಮಾಡುತ್ತಿರುವ ಭಾರತೀಯ ಜನತಾ ಪಾರ್ಟಿ ವಿರುದ್ಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಿ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡುವಾಗ ಸುರಿಸಿದ ಕಣ್ಣೀರು, ಮುಂದೊಂದು ದಿನ ರಾಜ್ಯದಲ್ಲಿ ಬಿಜೆಪಿಯನ್ನು ಸರ್ವನಾಶ ಮಾಡಲಿದೆ ಎಂದು ಎಚ್ಚರಿಸಿದ್ದಾರೆ. ಶನಿವಾರ ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದ ಹಲವು ವಿಚಾರಗಳ ಬಗ್ಗೆ ವಿಪಕ್ಷಗಳ ಕಿವಿ ಹಿಂಡಿದರು.

ದಲಿತ ಹಾಗೂ ಪರಿಶಿಷ್ಟ ಜಾತಿ ಸಮುದಾಯದ ನಾಯಕರು ರಾಜಕೀಯವಾಗಿ ಉನ್ನತ ಮಟ್ಟಕ್ಕೆ ಬೆಳೆಯುತ್ತಿರುವುದನ್ನು ನೋಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದು ಮಧು ಬಂಗಾರಪ್ಪ ಆರೋಪಿಸಿದರು. "ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿ. ನಾಗೇಂದ್ರ ಅವರ ವಿರುದ್ಧ ಕೇವಲ ರಾಜಕೀಯ ದುರುದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನ ಮಾಡಲಾಗಿದೆ. ತನಿಖಾ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಾಗೇಂದ್ರ ಅವರು ನಿರಪರಾಧಿ ಎಂಬುದು ಸ್ಪಷ್ಟವಾಗುತ್ತದೆ.

Madhu Bangarappa Slams BJP Over B Nagendra Resignation Says Dalit Leader Tears Will Destroy BJP

ಆದರೆ, ಈ ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿ ಕೇವಲ ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಇಡೀ ತಳ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ. ಇದಕ್ಕೆ ಬಿಜೆಪಿ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ," ಎಂದು ಅವರು ಗುಡುಗಿದರು.

ಆರ್ ಅಶೋಕ್ ಅವರೇನು ಸಿಬಿಐ ಅಧಿಕಾರಿಯೇ?

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, "ಆರ್. ಅಶೋಕ್ ಅವರು ನಾಗೇಂದ್ರ ವಿಚಾರದಲ್ಲಿ ವಾದ ಮಾಡಲು ತಾವೇನು ಸಿಬಿಐ ಅಧಿಕಾರಿಯೇ? ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನ ಕಾನೂನಿನ ಚೌಕಟ್ಟಿನಲ್ಲಿ ಮಾಡುತ್ತವೆ. ಮುಂದೊಂದು ದಿನ ಅಶೋಕ್ ಅವರ ಮೇಲೂ ಇಂತಹದೇ ಪ್ರಕರಣಗಳು ಬಂದಾಗ ಬಿಜೆಪಿ ಬಣ್ಣ ಬಯಲಾಗುತ್ತದೆ," ಎಂದು ತಿರುಗೇಟು ನೀಡಿದರು.

ಇದೇ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಕೆಣಕಿದ ಅವರು, "ಬಿಜೆಪಿ ನಾಯಕರು ತಾವು ಮಾತ್ರ ಅತಿ ಸಾಚಾಗಳು ಎಂಬಂತೆ ವರ್ತಿಸುತ್ತಿದ್ದಾರೆ. ಬಿ.ವೈ. ವಿಜಯೇಂದ್ರ ಅವರ ನಕಲಿ ಸಹಿ ಹಗರಣವನ್ನ ಅಷ್ಟು ಬೇಗ ಮರೆತುಬಿಟ್ಟರೇ?" ಎಂದು ನೇರವಾಗಿ ಪ್ರಶ್ನಿಸಿದರು.

ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮೊದಲು ಪಾದಯಾತ್ರೆ ಮಾಡಲಿ

ಇತ್ತೀಚೆಗೆ ಮೈಸೂರು ಚಲೋ ಹೆಸರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆಯನ್ನು ಕಟುವಾಗಿ ಟೀಕಿಸಿದ ಮಧು ಬಂಗಾರಪ್ಪ, ವಿಪಕ್ಷಗಳ ದ್ವಂದ್ವ ನಿಲುವನ್ನು ಬಯಲು ಮಾಡಿದರು. "ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ಮೂರು ವರ್ಷಗಳೇ ಕಳೆದಿದ್ದರೂ ರಾಜ್ಯಪಾಲರು ಇನ್ನೂ ಅನುಮತಿ ನೀಡಿಲ್ಲ.

ಈಗ ಕುಮಾರಸ್ವಾಮಿ ಅವರು ಬಿಜೆಪಿಯ ಮೈತ್ರಿ ಕೂಟದಲ್ಲಿ ಇರುವುದರಿಂದ ಅವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆಯೇ? ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ನೈತಿಕತೆ ಇದ್ದರೆ ಬಿಜೆಪಿ-ಜೆಡಿಎಸ್ ನಾಯಕರು ಮೊದಲು ಎಚ್.ಡಿ. ಕುಮಾರಸ್ವಾಮಿ ವಿರುದ್ಧವೇ ಪಾದಯಾತ್ರೆ ಮಾಡಲಿ," ಎಂದು ಸವಾಲು ಹಾಕಿದರು.

ಇದೇ ವೇಳೆ ಮುಂಗಾರು ಅಧಿವೇಶನದ ಕಲಾಪವನ್ನು ವಿಪಕ್ಷಗಳು ಹಾಳು ಮಾಡಿದ ಬಗ್ಗೆಯೂ ಸಚಿವರು ಬೇಸರ ವ್ಯಕ್ತಪಡಿಸಿದರು. "ನಾಗೇಂದ್ರ ಅವರ ವಿಚಾರದಲ್ಲಿ ಸರ್ಕಾರ ಚರ್ಚೆಗೆ ಸಂಪೂರ್ಣ ಸಿದ್ಧವಿತ್ತು. ಆದರೆ, ವಿಪಕ್ಷಗಳು ಸೂಕ್ತ ನೋಟಿಸ್ ನೀಡಿ ಚರ್ಚೆ ಮಾಡುವ ಬದಲು ಕೇವಲ ರಾಜಕೀಯ ಪ್ರಹಸನಕ್ಕಾಗಿ ಕಲಾಪಕ್ಕೆ ಅಡ್ಡಿಪಡಿಸಿದವು. ರಾಜ್ಯದಲ್ಲಿ ಬರಗಾಲ, ಕಾವೇರಿ ನೀರಿನ ವಿವಾದ, ಕಸ್ತೂರಿ ರಂಗನ್ ವರದಿಯಂತಹ ಹತ್ತಾರು ಗಂಭೀರ ಸಮಸ್ಯೆಗಳಿವೆ. ಸದನದಲ್ಲಿ ಇವುಗಳ ಬಗ್ಗೆ ಚರ್ಚಿಸಿ ಜನರಿಗೆ ಪರಿಹಾರ ಒದಗಿಸುವ ಬದಲು, ಇಲ್ಲದ ವಿಚಾರಗಳನ್ನ ಮುಂದಿಟ್ಟುಕೊಂಡು ವಿಧಾನಸಭೆಯ ಅಮೂಲ್ಯ ಸಮಯವನ್ನು ಬಿಜೆಪಿ ಹಾಗೂ ಜೆಡಿಎಸ್ ವ್ಯರ್ಥ ಮಾಡಿವೆ," ಎಂದು ಮಧು ಬಂಗಾರಪ್ಪ ತೀವ್ರ ಅಸಮಾಧಾನ ಹೊರಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+