Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
ಬೆಂಗಳೂರು, ಏಪ್ರಿಲ್. 20: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಏಪ್ರಿಲ್ 26 ರಂದು ಮೊದಲನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತ್ತು ಮೇ 07 ರಂದು ಎರಡನೇ ಹಂತದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಇದೇ ವೇಳೆ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರ ಪಾರುಪತ್ಯ ಹೆಚ್ಚಾಗಿಯೇ ಇದೆ. ಇಲ್ಲಿ ತಮ್ಮ ಸಂಸದರು ಯಾರು ಎಂಬುದನ್ನು ನಿರ್ಣಯಿಸುವಲ್ಲಿ ಮಹಿಳೆಯರೇ ಪ್ರಮುಖ ಪಾತ್ರ ವಹಿಸಲಿದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರವಾಗಿ ಉಡುಪಿ-ಚಿಕ್ಕಮಗಳೂರು ಮೊದಲ ಸ್ಥಾನದಲ್ಲಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮಹಿಳಾ ಮತದಾರರು?
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪುರುಷರಿಗೆ ಹೋಲಿಸಿದರೆ ಶೇ.51.51 (8,10,362) ಮಹಿಳಾ ಮತದಾರರಿದ್ದಾರೆ. ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ ಅಲ್ಲಿ 51.17 ರಷ್ಟು ಅಂದರೆ 9,19,279 ಮಹಿಳಾ ಮತದಾರರು ಇದ್ದಾರೆ. ಬೆಳಗಾವಿಯಲ್ಲಿ 9,55,725 ಮಹಿಳಾ ಮತದಾರರು (50.19%), ಬಾಗಲಕೋಟೆಯಲ್ಲಿ ಮಹಿಳಾ ಮತದಾರರ ಸಂಖ್ಯೆ 9,02,239 (ಶೇ.50.40).
ರಾಯಚೂರಿನಲ್ಲಿ 10,05,246 ಮಹಿಳಾ ಮತದಾರರಿದ್ದಾರೆ (50.48%), ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 9,38,750 ಮಂದಿ ಮಹಿಳಾ ಮತದಾರರಿದ್ದರೇ, (50.69) ಬಳ್ಳಾರಿಯಲ್ಲಿ 9,45,191 (50.66%) ಮಹಿಳಾ ಮತದಾರರಿದ್ದಾರೆ. ದಾವಣಗೆರೆಯಲ್ಲಿ 8,47,662 (50.09%) ಮಹಿಳಾ ಮತದಾರರಿದ್ದಾರೆ.

ಶಿವಮೊಗ್ಗದಲ್ಲಿ 8,77,761 (ಶೇ.50.74) ಮಂದಿ ಮಹಿಳಾ ಮತದಾರರಿದ್ದಾರೆ. ಹಾಸನ ಕ್ಷೇತ್ರದಲ್ಲಿ 8,66,206 (ಶೇಕಡಾ 50.21), ಚಿತ್ರದುರ್ಗದಲ್ಲಿ 9,27,078 (ಶೇ.50.13), ತುಮಕೂರು ಕ್ಷೇತ್ರದಲ್ಲಿ 8,36,775 (ಶೇ 50.67), ಭಾರಿ ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯ ಕ್ಷೇತ್ರದಲ್ಲಿಯೂ 8,97,031 (ಶೇ.50.71) ಮಂದಿ ಮಹಿಳಾ ಮತದಾರರಿದ್ದಾರೆ.
ಇನ್ನು, ಮೈಸೂರು-ಕೊಡಗು ಕ್ಷೇತ್ರದಲ್ಲಿ 10,55,035 (50.91%), ಚಾಮರಾಜನಗರ ಕ್ಷೇತ್ರದಲ್ಲಿ 8,94,268 (50.56%), ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 9,89,369 (50.32%) ಮತ್ತು ಕೋಲಾರ ಕ್ಷೇತ್ರದಲ್ಲಿ 8,68,184 (50.53%) ಮಹಿಳಾ ಮತದಾರರಿದ್ದು, ಇವರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ತಂತ್ರಗಳನ್ನು ಹೆಣೆದಿವೆ.
ಈಗಾಗಲೇ ರಾಜಕೀಯ ನಾಯಕರು ಮಹಿಳಾ ಮತದಾರರನ್ನು ತಮ್ಮತ್ತ ಸೆಳೆಯಲು ಕಾರ್ಯಪ್ರವೃತ್ತವಾಗಿವೆ. ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ತಮ್ಮ ಮನೆಗಳಲ್ಲಿ ಮಹಿಳೆಯರನ್ನು ಭೇಟಿ ಮಾಡಿ, ಕಾರ್ನರ್ ಮೀಟಿಂಗ್ ಮತ್ತು ಮಹಿಳೆಯರ ಜೊತೆಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಮಹಿಳಾ ಸಾಧಕರು ಹಾಗೂ ಮಹಿಳಾ ಕ್ರೀಡಾ ಸಾಧಕರನ್ನು ಭೇಟಿ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಜಾರಿಗೊಳಿಸಿದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವತ್ತ ಗಮನಹರಿಸುತ್ತಿದ್ದಾರೆ.
ಇತ್ತ, ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಮೇಲೆ ಎಲ್ಲಾ ಗಮನ ಸೆಳೆಯುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಕಾಂಗ್ರೆಸ್ ತಂದಿರುವ ಯೋಜನೆಗಳನ್ನು ಒತ್ತಿ ಒತ್ತಿ ತಿಳಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಕುಟುಂಬಗಳು ತಿಂಗಳಿಗೆ ಕನಿಷ್ಠ 4,000 ರೂ.ಗಳನ್ನು ಪಡೆಯುತ್ತಿವೆ ಎಂದು ಹೇಳುತ್ತಿದೆ.
(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)












Click it and Unblock the Notifications