Mysuru Dasara 2026: ಅರಮನೆ ನಗರಿಗೆ ಮರಳಿದ ಕ್ಯಾಪ್ಟನ್ ಅಭಿಮನ್ಯು: 8 ಕೆ.ಜಿ. ತೂಕದ ವಿಶೇಷ ಪೇಟ ತೊಡಿಸಿ ಭವ್ಯ ಸ್ವಾಗತ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿರುವಂತೆಯೇ, ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ಕ್ಯಾಪ್ಟನ್ ಖ್ಯಾತಿಯ ಅಭಿಮನ್ಯು ಆನೆ ಸೋಮವಾರ ಸಾಂಸ್ಕೃತಿಕ ನಗರಿಗೆ ಆಗಮಿಸಿದೆ. ಅರಮನೆ ಆವರಣದಲ್ಲಿ ಆತನಿಗೆ ಸಾಂಪ್ರದಾಯಿಕ ಹಾಗೂ ಭವ್ಯವಾದ ಸ್ವಾಗತವನ್ನು ಕೋರಲಾಯಿತು.
ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನ ಹೊತ್ತಿದ್ದ ಅಭಿಮನ್ಯು, ಈ ಬಾರಿ ನಿಶಾನೆ ಆನೆಯಾಗಿ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಲಿದ್ದಾನೆ.

ನಿಶಾನೆ ಆನೆಯಾಗಿ ಕ್ಯಾಪ್ಟನ್ ಅಭಿಮನ್ಯು ಕಂಬ್ಯಾಕ್
60 ವರ್ಷವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ನಿಯಮಗಳು ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಅಭಿಮನ್ಯುವನ್ನ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಗಿತ್ತು. ಆದರೆ, ಆತನ ಗಾಂಭೀರ್ಯ, ಶಿಸ್ತು ಹಾಗೂ ಜಂಬೂಸವಾರಿಯಲ್ಲಿ ಆತನ ಹೆಜ್ಜೆಗಳನ್ನ ನೋಡಲು ಕಾತುರರಾಗಿದ್ದ ಲಕ್ಷಾಂತರ ಅಭಿಮಾನಿಗಳು, ಆತನಿಗೆ ದಸರಾದಲ್ಲಿ ಸೂಕ್ತ ಮತ್ತು ಗೌರವಾನ್ವಿತ ವಿದಾಯ ನೀಡಬೇಕು ಎಂದು ಆಗ್ರಹಿಸಿದ್ದರು.
ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಒತ್ತಾಯದ ಮೇರೆಗೆ, ರಾಜ್ಯ ಸರ್ಕಾರವು ಈ ಬಾರಿಯ ದಸರಾದಲ್ಲಿ ಅಭಿಮನ್ಯುವನ್ನ ಜಂಬೂಸವಾರಿಯ ಮುಂಚೂಣಿಯಲ್ಲಿ ಸಾಗುವ ನಿಶಾನೆ ಆನೆಯಾಗಿ ಆಯ್ಕೆ ಮಾಡಿದೆ.
8 ಕೆ.ಜಿ. ತೂಕದ ವಿಶೇಷ ಮೈಸೂರು ಪೇಟ ಉಡುಗೊರೆ
ಸೋಮವಾರ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಪ್ರವೇಶಿಸಿದ ಅಭಿಮನ್ಯುವಿಗೆ ಅರಮನೆ ಮಂಡಳಿ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅದ್ಧೂರಿ ಸ್ವಾಗತ ನೀಡಲಾಯಿತು. ವಿಶೇಷವೆಂದರೆ, ಅಭಿಮನ್ಯುವಿನ ಅಪಾರ ಅಭಿಮಾನಿಗಳು ಆತನಿಗೆ ಕೆಂಪು ಮತ್ತು ಚಿನ್ನದ ಬಣ್ಣದ ವಿಶೇಷವಾದ ಬೃಹತ್ ಮೈಸೂರು ಪೇಟವನ್ನ ಉಡುಗೊರೆಯಾಗಿ ನೀಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಪೇಟದ ಮಾದರಿಯಲ್ಲೇ ಈ ಆಕರ್ಷಕ ಪೇಟವನ್ನ ವಿನ್ಯಾಸಗೊಳಿಸಲಾಗಿದ್ದು, ಇದು ಬರೋಬ್ಬರಿ 8 ಕೆ.ಜಿ. ತೂಕವಿದೆ. ಈ ಪೇಟವನ್ನು ತೊಟ್ಟು ಅತ್ಯಂತ ಗಾಂಭೀರ್ಯದಿಂದ ನಿಂತಿದ್ದ ಆನೆಯನ್ನ ಕಂಡು ಸಾರ್ವಜನಿಕರು ಕಣ್ತುಂಬಿಕೊಂಡರು.
ಫಿರಂಗಿ ತಾಲೀಮಿನಲ್ಲಿ ಭಾಗಿ
ಈ ಕುರಿತು ಮಾಹಿತಿ ನೀಡಿದ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಭುಗೌಡ, "ಸರ್ಕಾರದ ಸೂಚನೆಯಂತೆ ಅಭಿಮನ್ಯುವನ್ನ ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದ್ದು, ಇಂದು ಆತನಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬರಮಾಡಿಕೊಂಡಿದ್ದೇವೆ. ಅಭಿಮನ್ಯುವಿಗೆ ಹೆಚ್ಚಿನ ತರಬೇತಿಯ ಅಗತ್ಯವಿಲ್ಲ, ಏಕೆಂದರೆ ಆತ ಈಗಾಗಲೇ ದಸರಾದ ಎಲ್ಲಾ ಶಬ್ದ, ಜನಸಂದಣಿ ಹಾಗೂ ವಾತಾವರಣಕ್ಕೆ ಸಂಪೂರ್ಣವಾಗಿ ಒಗ್ಗಿಕೊಂಡಿದ್ದಾನೆ. ಮಂಗಳವಾರದಿಂದ ಆತ ಎಂದಿನಂತೆ ತಾಲೀಮಿನಲ್ಲಿ ಭಾಗವಹಿಸಲಿದ್ದಾನೆ. ಅಕ್ಟೋಬರ್ 7, 9 ಮತ್ತು 12 ರಂದು ಫಿರಂಗಿ ಸಿಡಿಸುವ ತಾಲೀಮು ನಡೆಯಲಿದೆ. ಸಾರ್ವಜನಿಕರು ಸುರಕ್ಷಿತ ಅಂತರ ಕಾಯ್ದುಕೊಂಡು ಗಜಪಡೆಯನ್ನ ವೀಕ್ಷಿಸಬೇಕು. ಯಾರೂ ಆನೆಗಳ ಸಮೀಪಕ್ಕೆ ಹೋಗಬಾರದು," ಎಂದು ಮನವಿ ಮಾಡಿದರು.
ಅಭಿಮನ್ಯು ಇಲ್ಲದ ದಸರಾ ಅಪೂರ್ಣ
ಅಭಿಮನ್ಯುವಿನ ಆಗಮನದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ ಚಾಮರಾಜ ಕ್ಷೇತ್ರದ ಶಾಸಕ ವಿ. ಶ್ರೀವತ್ಸ, "ಕ್ಯಾಪ್ಟನ್ ಅಭಿಮನ್ಯು ಇಲ್ಲದೆ ಮೈಸೂರು ದಸರಾ ಅಪೂರ್ಣ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೂ ಆತ ದಸರಾಗೆ ಮರಳಿ ಬಂದಿದ್ದಾನೆ. ಆತನನ್ನ ನಿಶಾನೆ ಆನೆಯನ್ನಾಗಿ ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ನಾನು ಸಹ ಇಂದು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಆತನನ್ನು ನೋಡಿ ನನಗೆ ತೀವ್ರ ಸಂತೋಷವಾಗಿದೆ," ಎಂದು ಹರ್ಷ ವ್ಯಕ್ತಪಡಿಸಿದರು.


Click it and Unblock the Notifications
