KSRTC: ಕರ್ನಾಟಕ ಮೊಬಿಲಿಟಿ ಆಪ್ ಸೇವೆ; ವಾಟ್ಸಾಪ್ ಮೂಲಕವೂ ಬಸ್ ಟಿಕೆಟ್ ಬುಕ್ ಮಾಡ್ಬಹುದು, ಹೇಗೆ?
ಬೆಂಗಳೂರು; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( KSRTC) ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಸೇವೆಗಳನ್ನು ವಿಸ್ತರಣೆ ಮಾಡಿದ್ದು, ನೀವು ಇನ್ನು ಮುಂದೆ ವಾಟ್ಸಾಪ್ ಮೂಲಕವೂ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣದ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ.
ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರಕ್ಕೆ100 ದಿನ ಪೂರ್ಣ ಹಿನ್ನೆಲೆ ನಡೆದ ಸಂಭ್ರಮ ಸಮಾರಂಭ ಅಂಗವಾಗಿ ದಿನಾಂಕ 10-09-2026 ರಂದು ನವೀಕೃತ ಮೊಬೈಲ್ ಆಪ್ ಹಾಗೂ ವಾಟ್ಸಾಪ್ ಟಿಕೆಟಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿದರು.

ಬಳಕೆದಾರ ಸ್ನೇಹಿ ಇಂಟರ್‌ಫೇಸ್: 4 ಸಂಸ್ಥೆಯ ಸೇವೆಗೆ ಒಂದೇ ವೇದಿಕೆ
ಕರ್ನಾಟಕ ಮೊಬಿಲಿಟಿ ಆಪ್ ಸೇವೆ ಕುರಿತು ಅಧಿಕೃತ ಮಾಹಿತಿ ನೀಡಿರುವ KSRTC ಸಂಸ್ಥೆಯು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಾರಿಗೆ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒಗ್ಗೂಡಿಸುವ ಏಕ ವ್ಯವಸ್ಥೆ ಇದಾಗಿದೆ. ಆಧುನಿಕ ಹಾಗೂ ಬಳಕೆದಾರ ಸ್ನೇಹಿ ಇಂಟರ್‌ಫೇಸ್ ಹೊಂದಿರುವ ಈ ವೇದಿಕೆಯು ಪ್ರಯಾಣಿಕರಿಗೆ ಏಕೀಕೃತ ಹಾಗೂ ಸುಗಮ ಪ್ರಯಾಣ ಅನುಭವವನ್ನು ಒದಗಿಸುವ ಉದ್ದೇಶ ಹೊಂದಿದೆ.
ಮೊಬೈಲ್ ಆಪ್‌ನ ಪ್ರಮುಖ ಸೌಲಭ್ಯಗಳು
ಸುರಕ್ಷಿತ ಲಾಗಿನ್ ವ್ಯವಸ್ಥೆಯ ಮೂಲಕ ಪ್ರಯಾಣಿಕರ ಗುರುತಿನ ದೃಢೀಕರಣ, ಹಿಂದಿನ ಬುಕ್ಕಿಂಗ್‌ಗಳ ವಿವರ ವೀಕ್ಷಣೆ ಹಾಗೂ ವಹಿವಾಟುಗಳ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಯಾಣಿಕರ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ದೂರುಗಳ ಸ್ಥಿತಿಯನ್ನು ಪರಿಶೀಲಿಸುವುದು, ಅಗತ್ಯವಿದ್ದಲ್ಲಿ ಮೇಲ್ದರ್ಜೆಗೆ ಕಳುಹಿಸುವುದು ಹಾಗೂ ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡುವ ಸೌಲಭ್ಯ ದೊರೆಯಲಿದೆ.
ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುವ ಡಿಜಿಟಲ್ ಮಾಸಿಕ ಪಾಸ್ ವ್ಯವಸ್ಥೆಯ ಮೂಲಕ ಆನ್‌ಲೈನ್‌ನಲ್ಲಿ ಬಸ್ ಪಾಸ್ ಬುಕ್ಕಿಂಗ್, ವಿತರಣೆ ಹಾಗೂ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ. QR ಕೋಡ್ ಆಧಾರಿತ ಡಿಜಿಟಲ್ ಪರಿಶೀಲನೆಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು KSRTC ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಟ್ಸಾಪ್ ಮೂಲಕ ಟಿಕೆಟ್ ಬುಕ್ಕಿಂಗ್!
ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಮೂಲಕ KSRTC, NWKRTC ಹಾಗೂ KKRTC ಬಸ್‌ಗಳ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣಿಕರು +91 6364940880 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ಕಿಂಗ್ ಆರಂಭಿಸಬಹುದು. ನಂತರ ವಾಟ್ಸಾಪ್‌ನಲ್ಲಿಯೇ ಲಭ್ಯವಾಗುವ ಸಂವಾದಾತ್ಮಕ ವ್ಯವಸ್ಥೆಯು ಟಿಕೆಟ್ ಕಾಯ್ದಿರಿಸುವಿಕೆಯ ಸಂಪೂರ್ಣ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲಿದೆ.
ವಾಟ್ಸಾಪ್ ಬಸ್ ಟಿಕೆಟ್ ಬುಕಿಂಗ್ ವಿಧಾನಗಳು ಇಲ್ಲಿವೆ.
* ಪ್ರಯಾಣ ಆರಂಭದ ಸ್ಥಳ, ಗಮ್ಯಸ್ಥಾನ ಹಾಗೂ ಪ್ರಯಾಣದ ದಿನಾಂಕ ಆಯ್ಕೆ ಮಾಡಿ ಲಭ್ಯವಿರುವ ಬಸ್ ಸೇವೆಗಳನ್ನು ಹುಡುಕಬೇಕು.
* ನಿಮ್ಮ ಪ್ರಯಾಣದ ಆದ್ಯತೆಗೆ ಅನುಗುಣವಾಗಿ ಸೂಕ್ತವಾದ ಬಸ್ ಆಯ್ಕೆ ಮಾಡಬೇಕು.
* ನಂತರ ಹಂತದಲ್ಲಿ ಪ್ರಯಾಣಿಕರ ವಿವರಗಳನ್ನು ನಮೂದಿಸಬೇಕು.
* ಟಿಕೆಟ್ ವಿವರಗಳನ್ನು ಪರಿಶೀಲಿಸಿ ಹಣ ಪಾವತಿ ಪೂರ್ಣಗೊಳಿಸಿದರೆ ಟಿಕೆಟ್ ಬುಕಿಂಗ್ ದೃಢವಾಗಲಿದೆ.
ಹಣ ಪಾವತಿ ಹೇಗೆ? ವಾಟ್ಸಾಪ್, ಇ-ಮೇಲ್ ರಿಪ್ಲೈ
ಟಿಕೆಟ್ ಬುಕ್ ಬಳಿಕ ಹಣ ಪಾವತಿಗಾಗಿ ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್‌ಗಳು ಸೇರಿದಂತೆ ವಿವಿಧ ಪಾವತಿ ವಿಧಾನ ಬಳಕೆಗೆ ಅವಕಾಶ ಇದೆ. ಪಾವತಿ ಯಶಸ್ವಿಯಾದ ನಂತರ ಬುಕ್ಕಿಂಗ್ ದೃಢೀಕರಣ ಹಾಗೂ ಇ-ಟಿಕೆಟ್ ಅನ್ನು ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಪ್ರಯಾಣಿಕರಿಗೆ ಹಂಚಿಕೊಳ್ಳಲಾಗುತ್ತದೆ.
ವಾಟ್ಸಾಪ್ ಮೂಲಕವೇ ಟಿಕೆಟ್ ರದ್ದತಿಗೆ ಅವಕಾಶ!
ಒಂದು ವೇಳೆ ಟಿಕೆಟ್ ಬುಕ್ ಮಾಡಿದ ಬಳಿಕ ಪ್ರಯಾಣ ರದ್ದುಗೊಳಿಸಲು ಇಚ್ಛಿಸಿದರೆ ವಾಟ್ಸಾಪ್ ಮೂಲಕ ಬುಕ್ ಮಾಡಿರುವ ಟಿಕೆಟ್‌ಗಳನ್ನು ಇದೇ ವಾಟ್ಸಾಪ್ ಸಂಖ್ಯೆಯ ಮೂಲಕ ರದ್ದುಪಡಿಸಬಹುದಾಗಿದೆ. ಟಿಕೆಟ್ ರದ್ದುಪಡಿಸಲು ಪ್ರಯಾಣಿಕರು ವಾಟ್ಸಾಪ್‌ನಲ್ಲಿ ಯಾವುದೇ ಒಂದು ಸಂದೇಶವನ್ನು ಕಳುಹಿಸಿ 'Ticket Cancellation' ಆಯ್ಕೆ ಒತ್ತಬೇಕು. ನಂತರ ಕೇಳಲಾಗುವ PNR ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಬುಕ್ಕಿಂಗ್ ಸಮಯದಲ್ಲಿ ಪಡೆದ Transaction Password ಅನ್ನು ನಮೂದಿಸಿದರೆ ಸಾಕು ಟಿಕೇಟ್ ರದ್ದು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಭವಿಷ್ಯದ ಏಕೀಕೃತ ಮೊಬಿಲಿಟಿ ವ್ಯವಸ್ಥೆಗೆ ಬುನಾದಿ
ಒಂದು ಕರ್ನಾಟಕ ಮೊಬಿಲಿಟಿ ಆಪ್ ಭವಿಷ್ಯದಲ್ಲಿ ಇತರೆ ಸಾರ್ವಜನಿಕ ಸಾರಿಗೆ ಹಾಗೂ ಮೊಬಿಲಿಟಿ ಸೇವೆಗಳನ್ನು ಏಕೀಕರಿಸಲು ಅಗತ್ಯವಾದ ಬುನಾದಿಯನ್ನು ನಿರ್ಮಿಸಲಿದೆ. ಇದರ ಮೂಲಕ ರಾಜ್ಯದಲ್ಲಿ ಏಕೀಕೃತ, ಸುಲಭವಾಗಿ ಲಭ್ಯವಾಗುವ ಹಾಗೂ ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಸಹಾಯವಾಣಿ ಕೇಂದ್ರ 080-26252625 (24x7) ಅಥವಾ AWATAR ಸೆಲ್ ಅನ್ನು 7760990034 / 7760990035 (ಬೆಳಿಗ್ಗೆ 7.00 ರಿಂದ ರಾತ್ರಿ 10.00 ಗಂಟೆವರೆಗೆ) ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.


Click it and Unblock the Notifications
