Eshwar Khandre Profile: ಕರ್ನಾಟಕದ ನೂತನ ಸಚಿವ ಈಶ್ವರ್ ಖಂಡ್ರೆ ಪರಿಚಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆದ್ದು ಭರ್ಜರಿ ಬಹುಮತ ಗಳಿಸಿದ ಕಾಂಗ್ರೆಸ್ ಇದೀಗ ರಾಜ್ಯದಲ್ಲಿ ನೂತನ ಸರ್ಕಾರ ರಚಿಸಿದೆ. ಶನಿವಾರ, ಮೇ 20ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ವೇಳೆ ಕರ್ನಾಟಕದ ನೂತನ ಸಚಿವರಾಗಿ ಈಶ್ವರ್ ಖಂಡ್ರೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಈಶ್ವರ್ ಖಂಡ್ರೆ ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಈ ಹಿಂದೆ 2016ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು.

ಈಶ್ವರ್ ಖಂಡ್ರೆ ಅವರು ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಭಾಲ್ಕಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ವಿರುದ್ಧ 27,706 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು.
ಈಶ್ವರ ಖಂಡ್ರೆ ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿದ್ದಾರೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರಭಾವಿ ರಾಜಕಾರಣಿ ಈಶ್ವರ್ ಖಂಡ್ರೆ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವಿಯಾಗಿದ್ದಾರೆ.

ಈಶ್ವರ್ ಖಂಡ್ರೆ ಪರಿಚಯ
ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಈಶ್ವರ್ ಖಂಡ್ರೆ ಅವರು ಜನವರಿ 15, 1962ರಂದು ಭಾಲ್ಕಿಯಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಮತ್ತು ಲಕ್ಷ್ಮೀಬಾಯಿ ದಂಪತಿಗೆ ಜನಸಿದರು.
1985ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದಿರುವ ಈಶ್ವರ್ ಖಂಡ್ರೆ, ಬೀದರ್ ಜಿಲ್ಲೆಯಲ್ಲಿ ವಿಧಾನಸಭೆಗೆ ಆಯ್ಕೆಯಾದ ಖಂಡ್ರೆ ಕುಟುಂಬದ ಮೂರನೇ ಸದಸ್ಯರಾಗಿದ್ದಾರೆ. ಅವರ ತಂದೆ ಭೀಮಣ್ಣ ಖಂಡ್ರೆ ನಂತರ ಸಹೋದರ ವಿಜಯ ಕುಮಾರ್ ಖಂಡ್ರೆ ಅವರು ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಈಶ್ವರ್ ಖಂಡ್ರೆ 2008ರಲ್ಲಿ ಬೀದರ್‌ನ ಭಾಲ್ಕಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದರು. ನಂತರ 2013ರಲ್ಲಿ ಭಾಲ್ಕಿ ಕ್ಷೇತ್ರದಿಂದ ಎರಡನೇ ಬಾರಿಗೆ ಗೆಲುವು ಸಾಧಿಸಿದರು. 2016ರಿಂದ 2018ರವರೆಗೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕರ್ನಾಟಕದ ಪೌರಾಡಳಿತ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿದ್ದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 6 ಸ್ಥಾನಗಳ ಪೈಕಿ 4ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದರು.
ಈಶ್ವರ್ ಭೀಮಣ್ಣ ಖಂಡ್ರೆ 2018ರ ಚುನಾವಣೆಯಲ್ಲಿ 84,673 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಂತರ ಪಕ್ಷದ ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿರುವ ಕಾರಣ ಈಶ್ವರ್ ಖಂಡ್ರೆ ಅವರನ್ನು ಜುಲೈ 4, 2018ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಇದೀಗ 2023ರಲ್ಲಿ ಗೆಲುವು ಸಾಧಿಸಿದ ಈಶ್ವರ್ ಖಂಡ್ರೆ ಅವರು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಯಾವ ಖಾತೆ ಸಿಗಲಿದೆ ಎಂಬುದಕ್ಕೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ.












Click it and Unblock the Notifications