KEA Recruitment: 11,249 ಹುದ್ದೆಗಳಿಗೆ ಬರೋಬ್ಬರಿ 16.51 ಲಕ್ಷ ಅರ್ಜಿ, ಕಾನ್‌ಸ್ಟೇಬಲ್ ಆಗಲು ಹೊರಟ ಎಂ.ಟೆಕ್ ಪದವೀಧರರು

ಇತ್ತೀಚಿನ ದಿನಗಳಲ್ಲಿ ಯುವಜನತೆ ಖಾಸಗಿ ಕೆಲಸಗಳಿಗಿಂತ ಸರ್ಕಾರಿ ಉದ್ಯೋಗದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎನ್ನುವುದರ ಜೊತೆಗೆ ರಾಜ್ಯದಲ್ಲಿ ಯುವಜನರು ಎಷ್ಟು ನಿರುದ್ಯೋಗಿಗಳಿದ್ದಾರೆ ಎಂಬುದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳೇ ಉದಾಹರಣೆ.

ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯುವ ಪೈಪೋಟಿ ಮತ್ತಷ್ಟು ಹೆಚ್ಚಾಗಿದ್ದು, ವಿವಿಧ 15 ಇಲಾಖೆಗಳ 11,249 ಖಾಲಿ ಹುದ್ದೆಗಳ ನೇಮಕಾತಿಗೆ ಬರೋಬ್ಬರಿ 16,51,210 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

KEA Recruitment 16 51 Lakh Candidates Apply for 11 249 Govt Jobs Huge Competition for VAO and Police

ಹೌದು, ಜೂನ್ 5 ರಿಂದ ಸೆಪ್ಟೆಂಬರ್ 9 ರವರೆಗೆ ಕೆಇಎ ಹೊರಡಿಸಿದ ವಿವಿಧ ನೇಮಕಾತಿ ಅಧಿಸೂಚನೆಗಳಿಗೆ ಈ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗಿವೆ. ಅಂದರೆ, ಪ್ರತಿ ಒಂದು ಖಾಲಿ ಇರುವ ಹುದ್ದೆಗೆ ಸರಾಸರಿ 146 ಅಭ್ಯರ್ಥಿಗಳು ಅರ್ಜಿ ಹಾಖಿದ್ದಾರೆ. ಕಂದಾಯ, ಪೊಲೀಸ್, ತೋಟಗಾರಿಕೆ ಹಾಗೂ ಕಾನೂನು ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳ ಹುದ್ದೆಗಳು ಉದ್ಯೋಗಾಕಾಂಕ್ಷಿಗಳ ಗಮನ ಸೆಳೆದಿವೆ.

ಒಂದು ಕಾಲದಲ್ಲಿ ವೃತ್ತಿಪರ ಕೋರ್ಸ್, ಇಂಜಿನಿಯರಿಂಗ್ ಮಾಡಿದವರು ಸಾಫ್ಟ್‌ವೇರ್ ಕಂಪನಿಗಳತ್ತ ಮಾತ್ರ ಆಕರ್ಷಿತರಾಗುತ್ತಿದ್ದರು. ಸರ್ಕಾರಿ ನೌಕರರಿಗಿಂತ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಕೈತುಂಬಾ ಸಂಬಳ ಪಡೆಯುತ್ತಾರೆ ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ, ಈಗ ಟ್ರೆಂಡ್ ಬದಲಾಗಿದೆ. ಇಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್ ಮುಗಿಸಿದವರೂ ಕೂಡ ಸರ್ಕಾರಿ ಕೆಲಸದತ್ತ ಮುಖ ಮಾಡುತ್ತಿದ್ದಾರೆ.

ಎಂ.ಟೆಕ್ ಪದವೀಧರರು ಸಹ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರುವುದು ಈ ಬದಲಾವಣೆಗೆ ಒಂದೊಳ್ಳೆ ಉದಾಹರಣೆ. ಖಾಸಗಿ ವಲಯದ ಕೆಲಸದಲ್ಲಿರುವ ವಿಪರೀತ ಮಾನಸಿಕ ಒತ್ತಡ, ಟಾರ್ಗೆಟ್ ಹಾಗೂ ಉದ್ಯೋಗದ ಅಭದ್ರತೆ ಯುವಜನರನ್ನು ಹೈರಾಣಾಗಿಸಿದೆ. ಹೀಗಾಗಿಯೇ, ನೆಮ್ಮದಿಯ ಹಾಗೂ ಭದ್ರತೆಯ ಬದುಕಿಗಾಗಿ ಎಂತಹದ್ದೇ ಹುದ್ದೆಯಾದರೂ ಸರಿ, ಸರ್ಕಾರಿ ನೌಕರಿ ಹಿಡಿಯಲೇಬೇಕು ಎಂಬ ಕಠಿಣ ನಿರ್ಧಾರಕ್ಕೆ ಇಂದಿನ ಯುವಜನತೆ ಬಂದಿದ್ದಾರೆ.

ವಿಎಒ ಮತ್ತು ಪೊಲೀಸ್ ಹುದ್ದೆಗಳಿಗೆ ಭಾರಿ ಪೈಪೋಟಿ

ಅರ್ಜಿಗಳ ಅಂಕಿ-ಅಂಶಗಳನ್ನ ಗಮನಿಸಿದರೆ, ಅತಿ ಹೆಚ್ಚು ಬೇಡಿಕೆ ಇರುವುದು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ. ಕೇವಲ 572 ವಿಎಒ ಹುದ್ದೆಗಳಿಗೆ ಬರೋಬ್ಬರಿ 4,92,534 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ಹುದ್ದೆಗೆ ನೂರಾರು ಮಂದಿ ಸ್ಪರ್ಧಿಸುತ್ತಿದ್ದಾರೆ.

ಅದೇ ರೀತಿ, 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ 4,54,532 ಅರ್ಜಿಗಳು ಬಂದಿವೆ. 1,789 ಕೆಎಸ್‌ಆರ್‌ಪಿ (KSRP) ಹುದ್ದೆಗಳಿಗೆ 1,79,996 ಅರ್ಜಿಗಳು ಮತ್ತು 1,600 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ 1,74,391 ಅರ್ಜಿಗಳು ಸಲ್ಲಿಕೆಯಾಗುವ ಮೂಲಕ ಪೊಲೀಸ್ ಇಲಾಖೆಯತ್ತ ಯುವಜನರ ಒಲವು ಎದ್ದು ಕಾಣುತ್ತಿದೆ.

ಕಲ್ಯಾಣ ಕರ್ನಾಟಕ ನೇಮಕಾತಿ ಅರ್ಜಿಗಳ ವಿವರ

ಒಟ್ಟು ಸಲ್ಲಿಕೆಯಾಗಿರುವ ಅರ್ಜಿಗಳನ್ನ ವಿಭಾಗವಾರು ವಿಂಗಡಿಸಿದರೆ, ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ 2,544 ಹುದ್ದೆಗಳಿಗೆ 3,46,511 ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಉಳಿದಂತೆ ರಾಜ್ಯದ ಇತರ ಭಾಗಗಳ 8,705 ಹುದ್ದೆಗಳಿಗೆ 13,04,699 ಅರ್ಜಿಗಳು ಸಲ್ಲಿಕೆಯಾಗಿವೆ.

ಖಾಸಗಿ ವಲಯದ ಒತ್ತಡದಿಂದ ಸರ್ಕಾರಿ ಹುದ್ದೆಗಳತ್ತ ಮುಖ?

ಇಷ್ಟು ದೊಡ್ಡ ಮಟ್ಟದಲ್ಲಿ ಅರ್ಜಿಗಳು ಸಲ್ಲಿಕೆಯಾಗಲು ಪ್ರಮುಖ ಕಾರಣ ಕೋವಿಡ್-19 ಸಾಂಕ್ರಾಮಿಕದ ನಂತರ ಉಂಟಾದ ನೇಮಕಾತಿ ವಿಳಂಬ. ನ್ಯಾಯಾಲಯದ ತೀರ್ಪು ಹಾಗೂ ತಾಂತ್ರಿಕ ಕಾರಣಗಳಿಂದ ಕಳೆದ ಎರಡು-ಮೂರು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆದಿರಲಿಲ್ಲ.

ಇದಲ್ಲದೆ, ಐಟಿ ಮತ್ತು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಆಗುತ್ತಿರುವ ಮಾನಸಿಕ ಒತ್ತಡ ಹಾಗೂ ಉದ್ಯೋಗ ಭದ್ರತೆಯಿಲ್ಲದಿರುವುದು ಇಷ್ಟು ದೊಡ್ಡ ಪ್ರಮಾಣದಲ್ಲಿ ಅರ್ಜಿ ಬರಲು ಕಾರಣ.

ಮುಂಬರುವ 9,340 ಸರ್ಕಾರಿ ಹುದ್ದೆಗಳ ನೇಮಕಾತಿ

ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಸಿಹಿಸುದ್ದಿ ಎಂದರೆ, ರಾಜ್ಯ ಸರ್ಕಾರವು ಮುಂದಿನ ಎರಡು ವರ್ಷಗಳಲ್ಲಿ ಸುಮಾರು 75 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಿದೆ. "ಈಗಾಗಲೇ ನಾಲ್ಕು ಪ್ರಮುಖ ಇಲಾಖೆಗಳು ಒಟ್ಟು 9,340 ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು" ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+