ಧರ್ಮಸ್ಥಳ ಕೇಸ್‌ಗೆ ಮಹಿಳಾ ಆಯೋಗ ಎಂಟ್ರಿ, SIT ತನಿಖೆಗೆ ಆಗ್ರಹಿಸಿ ಸಿಎಂಗೆ ಪತ್ರ
ಧರ್ಮಸ್ಥಳ ವ್ಯಾಪ್ತಿಯಲ್ಲಿ ಸಂಚಲನ ಸೃಷ್ಟಿಸಿರುವ ಅಸಹಜ ಸಾವುಗಳ ಪ್ರಕರಣವು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಈ ಭಾಗದಲ್ಲಿ ನೂರಾರು ಹೆಣ್ಣುಮಕ್ಕಳು, ಮಹಿಳೆಯರ ಶವ ಹೂತಿರುವ ಬಗ್ಗೆ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದು, ಈ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮತ್ತೊಂದೆಡೆ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂಬ ಕೂಗು ಕೂಡ ಕೇಳಿಬಂದಿದ್ದು, ಇದೀಗ ಈ ಪ್ರಕರಣಕ್ಕೆ ರಾಜ್ಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ. ಅಸಹಜ ಸಾವುಗಳ ಕುರಿತು ಎಸ್‌ಐಟಿ ತನಿಖೆಗೆ ಮನವಿ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಹಲವು ವಿವಾದಗಳಿಗೆ ಕಾರಣವಾಗಿರುವ ಹಾಗೂ ಸಂಚಲನ ಮೂಡಿಸುತ್ತಿರುವ ಧರ್ಮಸ್ಥಳ ವ್ಯಾಪ್ತಿಯ ಅಸಹಜ ಸಾವುಗಳ ಕುರಿತು SIT ತನಿಖೆಗೆ ಮನವಿ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ಪತ್ರದಲ್ಲೇನಿದೆ?
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಮಾಧ್ಯಮಗಳು ಮನುಷ್ಯರೊಬ್ಬರ ತಲೆಬುರುಡೆ ದೊರಕಿರುವ ಬಗ್ಗೆ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆಯ ವರದಿ ಪ್ರಸಾರವಾಗಿರುವುದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಮಾಧ್ಯಮ ವರದಿ ಮತ್ತು ಶವಗಳನ್ನು ಹೂತಿರುವ ವ್ಯಕ್ತಿಯ ಹೇಳಿಕೆಯು ಕಳೆದ 20ಕ್ಕೂ ಹೆಚ್ಚು ವರ್ಷ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅ*ತ್ಯಾಚಾರ, ಅಸ್ವಾಭಾವಿಕವಾದ ಸಾವು ಮತ್ತು ನಾಪತ್ತೆ ಪ್ರಕರಣಗಳು ಹಲವು ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ನಡೆದಿರುವ ಬಗ್ಗೆ ಹೇಳಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಅನೇಕ ಕುಟುಂಬಗಳು ತಮ್ಮ ಮಕ್ಕಳ ನಾಪತ್ತೆ, ಸಾವಿನ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಕೂಡ ಆರೋಪ ಮಾಡಿರುತ್ತಾರೆ. ಹಾಗಾಗಿ ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು, ಕೊ*ಲೆ ಪ್ರಕರಣಗಳು ಮತ್ತು ಅ*ತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಪತ್ರದಲ್ಲಿ ಕೋರಿದ್ದಾರೆ.
ದಕ್ಷಿಣ ಕನ್ನಡ ಪೊಲೀಸರಿಗೂ ಪತ್ರ
ಮಾಧ್ಯಮಗಳಲ್ಲಿ ಪ್ರಸಾರವಾದಂತೆ ಮನುಷ್ಯರೊಬ್ಬರ ತಲೆಬುರುಡೆ ದೊರಕಿದ ಬಗ್ಗೆ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆಯನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಅನೇಕ ಕುಟುಂಬಗಳು ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ಎಷ್ಟು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ? ಅವರಲ್ಲಿ ಎಷ್ಟು ಜನರ ಪತ್ತೆ ಮಾಡಲಾಗಿದೆ? ಪತ್ತೆ ಮಾಡಲಾಗದ ಪ್ರಕರಣಗಳು ಎಷ್ಟು? ಅಸ್ವಾಭಾವಿಕವಾದ ಸಾವು, ಕೊಲೆ ಪ್ರಕರಣಗಳಲ್ಲಿ ಕೈಗೊಂಡ ಕ್ರಮ ಮತ್ತು ಅತ್ಯಾಚಾರ ಪ್ರಕರಣಗಳ ವಿವರವನ್ನು ಈ ಪತ್ರ ತಲುಪಿದ 7 ದಿನದೊಳಗೆ ಮಹಿಳಾ ಆಯೋಗಕ್ಕೆ ಕಳುಹಿಸುವಂತೆ ಮಹಿಳಾ ಆಯೋಗ ಸೂಚನೆ ನೀಡಿದೆ.












Click it and Unblock the Notifications