Karnataka Weather: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಕೆಲವೆಡೆ ಕನಿಷ್ಠ ತಾಪಮಾನದಲ್ಲಿ ಏರಿಳಿತ ಕಂಡುಬಂದಿದೆ. ಹವಾಮಾನ ಇಲಾಖೆ ಮಾಹಿತಿಯಂತೆ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದಲ್ಲಿ 5 ಸೆಂ.ಮೀ. ಮಳೆಯಾದರೆ, ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ 2 ಸೆಂ.ಮೀ. ಮಳೆಯಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲ ಮತ್ತು ಪೊನ್ನಂಪೇಟೆಯಲ್ಲಿ ತಲಾ 1 ಸೆಂ.ಮೀ, ಹಾಸನ ಜಿಲ್ಲೆಯ ಕೊಣನೂರಿನಲ್ಲಿ 1 ಸೆಂ.ಮೀ. ಮಳೆ ದಾಖಲಾಗಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಫೆಬ್ರವರಿ 24ರ ಬೆಳಿಗ್ಗೆವರೆಗೆ ನೀಡಿರುವ ಮುನ್ಸೂಚನೆಯ ಪ್ರಕಾರ, ಬೆಂಗಳೂರು ಭಾಗದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಕೆಲವೆಡೆ ತುಸು ಮಳೆಯಾಗುವ ಸಾಧ್ಯತೆ ಇದೆ. ಬೆಳಗಿನ ಜಾವ ಮಂಜು ಕಾಣಿಸಬಹುದು. ಗರಿಷ್ಠ ತಾಪಮಾನ 31 ಡಿಗ್ರಿ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಹೇಳಿದೆ.

ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ?
ದಕ್ಷಿಣ ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಮುಂದುವರಿದಿದೆ. ಇದರ ಪರಿಣಾಮವಾಗಿ ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ-ಉತ್ತರ ಪಶ್ಚಿಮ ದಿಕ್ಕಿನಲ್ಲಿ ಚಲಿಸಿ ಬಳಿಕ ಈಶಾನ್ಯ ದಿಕ್ಕಿಗೆ ವಕ್ರವಾಗುವ ಸಾಧ್ಯತೆ ಇದೆ. ಈ ವ್ಯವಸ್ಥೆಯಿಂದ ರಾಜ್ಯದ ಕೆಲವು ಭಾಗಗಳಲ್ಲಿ ತುಸು ಮಳೆಯಾಗುವ ನಿರೀಕ್ಷೆ ಇದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಕೋಲಾರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಒಂದೆರಡು ಕಡೆ ತುಸು ಮಳೆಯ ಸಾಧ್ಯತೆ ಇದೆ.
ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶವು ಮುಂದುವರೆದಿದೆ. ಇದಕ್ಕೆ ಸಂಬಂಧಿಸಿದ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ವಿಸ್ತರಿಸಿದೆ. ಇದು ಆರಂಭದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವುದನ್ನು ಮುಂದುವರೆಸುವ ಸಾಧ್ಯತೆಯಿದೆ ಮತ್ತು ನಂತರ ಮುಂದಿನ 48 ಗಂಟೆಗಳಲ್ಲಿ ಕ್ರಮೇಣ ಈಶಾನ್ಯ ದಿಕ್ಕಿಗೆ ತಿರುಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶದಿಂದ ಮಧ್ಯ ತಮಿಳುನಾಡು ಮತ್ತು ಕರ್ನಾಟಕದ ಒಳನಾಡಿನಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಲಿಸುತ್ತದೆ ಎಂದು ವಿಶ್ಲೇಷಿಸಿದೆ.
ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ
ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಣಹವಾಮಾನ ಮುಂದುವರಿಯಲಿದೆ. ಇನ್ನು ದಾವಣಗೆರೆಯಲ್ಲಿ 16.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತಿ ಕಡಿಮೆ ತಾಪಮಾನವಾಗಿದೆ. ದಕ್ಷಿಣ ಒಳನಾಡಿನ ಹಾಸನದಲ್ಲಿ 12.7 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಇಳಿಕೆಯಾಗಿದೆ.
ಕರಾವಳಿ ಕರ್ನಾಟಕದ ಕೆಲವೆಡೆ ಹಾಗೂ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ 3ರಿಂದ 5 ಡಿಗ್ರಿವರೆಗೆ ಕಡಿಮೆಯಾಗಿದೆ. ಉಳಿದ ಭಾಗಗಳಲ್ಲಿ ತಾಪಮಾನ ಸಾಮಾನ್ಯ ಮಟ್ಟದಲ್ಲೇ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನಲ್ಲಿ ಏರಿಳಿತ ದಾಖಲಾಗಿದೆ. ದಕ್ಷಿಣ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಬೆಳಗಿನ ಜಾವ ಮಂಜು ಆವರಿಸಿದ್ದು, ವಾಹನ ಸಂಚಾರಕ್ಕೆ ತುಸು ಅಡಚಣೆ ಉಂಟಾಗಿದೆ. ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications