ರಾಜ್ಯಾದ್ಯಂತ ಮುಂದುವರಿದ ಒಣ ಹವೆ: ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತ, ಹೇಗಿರಲಿದೆ ಹವಾಮಾನ?
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಸಂಪೂರ್ಣವಾಗಿ ಕಡಿಮೆಯಾದ ಬೆನ್ನಲ್ಲೇ, ಇದೀಗ ರಾಜ್ಯದಾದ್ಯಂತ ಒಣ ಹವೆ ಮುಂದುವರಿದಿದೆ. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ನಡುವಿನ ಈ ಇನ್ ಬಿಟ್ವೀನ್ ಫೇಸ್' ಅವಧಿಯಲ್ಲಿ ವಾತಾವರಣದಲ್ಲಿ ಗಣನೀಯ ಏರುಪೇರು ಕಂಡುಬರುತ್ತಿದ್ದು, ಮುಂದಿನ ಕೆಲ ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ತೀರಾ ವಿರಳ ಎಂದು ಹವಾಮಾನ ವರದಿಗಳು ತಿಳಿಸಿವೆ.
ಅದರಲ್ಲೂ ಹಗಲಿನ ವೇಳೆಯಲ್ಲಿ ಬಿಸಿಲಿನ ಝಳ ಕೊಂಚ ಹೆಚ್ಚಾಗುವ ಸಾಧ್ಯತೆಗಳಿದ್ದು, ಒಣ ಹವೆಯ ವಾತಾವರಣವೇ ಪ್ರಾಬಲ್ಯ ಸಾಧಿಸಲಿದೆ.

ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತ
ರಾಜ್ಯದಲ್ಲಿ ಒಣ ಹವೆ ಮುಂದುವರಿದಿರುವಾಗಲೇ, ದಕ್ಷಿಣ-ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಭಾಗದಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಿದೆ. ಈ ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ತೀರದತ್ತ ಸಾಗುವ ನಿರೀಕ್ಷೆಯಿದೆ.
ಈ ವಾಯುಭಾರ ಕುಸಿತವು ಚಂಡಮಾರುತವಾಗಿ ಅಥವಾ ತೀವ್ರ ಸ್ವರೂಪ ಪಡೆದುಕೊಳ್ಳಲಿದೆಯೇ ಎಂಬುದರ ಬಗ್ಗೆ ಹವಾಮಾನ ತಜ್ಞರು ನಿರಂತರ ನಿಗಾ ಇರಿಸಿದ್ದಾರೆ. ಸದ್ಯದ ಮಟ್ಟಿಗೆ ಈ ಹವಾಮಾನ ವ್ಯವಸ್ಥೆಯಿಂದ ಕರ್ನಾಟಕದ ಮೇಲೆ ತಕ್ಷಣದ ಯಾವುದೇ ನೇರ ಪರಿಣಾಮ ಬೀರುವ ಮುನ್ಸೂಚನೆಗಳಿಲ್ಲ.
ತಾಪಮಾನದಲ್ಲಿ ಏರಿಕೆ: ಕರ್ನಾಟಕ ಹವಾಮಾನ ವರದಿ
ಮುಂಗಾರು ನಿರ್ಗಮನದ ಬಳಿಕ ಕರ್ನಾಟಕದ ಹವಾಮಾನ ಸಂಪೂರ್ಣವಾಗಿ ಬದಲಾಗಿದ್ದು, ಚಳಿಗಾಲದ ಅಧಿಕೃತ ಆರಂಭಕ್ಕೂ ಮುನ್ನ ಬಿಸಿಲಿನ ತಾಪದಲ್ಲಿ ಏರಿಕೆಯಾಗಿದೆ. ಹವಾಮಾನ ತಜ್ಞರ ಮಾಹಿತಿಯ ಪ್ರಕಾರ, ಇಂದು (ಅಕ್ಟೋಬರ್ 30) ರಾಜ್ಯದಾದ್ಯಂತ ಒಣ ಹವೆಯೇ ಇರಲಿದ್ದು, ಹಗಲಿನ ಗರಿಷ್ಠ ತಾಪಮಾನವು ವಾಡಿಕೆಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಅದೇ ರೀತಿ ರಾತ್ರಿಯ ಕನಿಷ್ಠ ತಾಪಮಾನದಲ್ಲೂ ಕೊಂಚ ಬದಲಾವಣೆಯಾಗಲಿದ್ದು, ವಾಡಿಕೆಗಿಂತ -0.5 ರಿಂದ +1.5 ಡಿಗ್ರಿ ಸೆಲ್ಸಿಯಸ್‌ನಷ್ಟು ವ್ಯತ್ಯಾಸ ಕಂಡುಬರಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಹವಾಮಾನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೂಡ ಮುಂಜಾನೆ ಕೊಂಚ ತಂಪಾದ ವಾತಾವರಣವಿದ್ದರೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ಝಳ ಏರಿಕೆಯಾಗುತ್ತಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಕ್ಷೀಣಿಸಿದ್ದು, ಸಂಪೂರ್ಣವಾಗಿ ಒಣ ಹವೆ ಆವರಿಸಲಿದೆ.
ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಈ ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ ತಮ್ಮ ಬೆಳೆಗಳ ನಿರ್ವಹಣೆ ಹಾಗೂ ಕಟಾವು ಕಾರ್ಯಗಳನ್ನು ಮಾಡುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ತಮಿಳುನಾಡು ಕರಾವಳಿಗೆ ಅಪ್ಪಳಿಸಿದರೆ, ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಹಾಗೂ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದೆ.
ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ಹವಾಮಾನ ಮುನ್ಸೂಚನೆ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಮಲೆನಾಡು ಭಾಗದ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಹವಾಮಾನ ಒಣದಾಗಿಯೇ ಇರಲಿದೆ. ಹಗಲಿನಲ್ಲಿ ಹೆಚ್ಚು ತಾಪಮಾನವಿದ್ದರೂ, ಮುಂಜಾನೆ ಹಾಗೂ ತಡರಾತ್ರಿ ಇಬ್ಬನಿ ಬೀಳುವ ಸಾಧ್ಯತೆಯಿರುತ್ತದೆ.
ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಾಂತ್ಯವು ಮಳೆರಹಿತ, ಒಣ ಹವೆಯೊಂದಿಗೆ ಮುಕ್ತಾಯಗೊಳ್ಳುತ್ತಿದ್ದು, ನವೆಂಬರ್ ತಿಂಗಳ ಆರಂಭದಲ್ಲಿ ಅಂಡಮಾನ್ ಸಮುದ್ರದಲ್ಲಿನ ವಾಯುಭಾರ ಕುಸಿತದ ಚಲನೆಯ ಮೇಲೆ ರಾಜ್ಯದ ಮುಂದಿನ ಹವಾಮಾನದ ದಿಕ್ಕು ನಿರ್ಧಾರವಾಗಲಿದೆ.


Click it and Unblock the Notifications
