Karnataka weather: ಮಾರ್ಚ್ 28, 29ರಂದು ಎಲ್ಲೆಲ್ಲಿ ಮಳೆ?-ಹವಾಮಾನ ಇಲಾಖೆಯ ಮುನ್ಸೂಚನೆ ಏನು?
ಬೆಂಗಳೂರು, ಮಾರ್ಚ್, 28: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಕೆಲವೆಡೆ ಮಾತ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದ್ದರೆ, ಇನ್ನೂ ಕೆಲವೆಡೆ ಮಾತ್ರ ಮಂಜಿನಂತಹ ಮಳೆ ಬೀಳುತ್ತಿದೆ. ಹಾಗೆಯೇ ಇಂದಿನಿಂದ ಮುಂದಿನ ಎರಡು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದ್ದು, ಇನ್ನುಳಿದ ಕಡೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಲಿದೆ. ನಗರದಲ್ಲಿ ಆಗಾಗ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದೆ ಬಿಟ್ಟರೆ, ಮಳೆಯೇ ಇಲ್ಲದಂತಾಗಿದೆ. ಅಲ್ಲದೆ ಈಗಾಗಲೇ ನೀರಿನ ಅಭಾವ ತುಂಬಾ ಕಾಡತೊಡಗಿದೆ. ಇದೇ ವಾತಾವರಣ ಬಹುತೇಕ ಭಾಗಗಳಲ್ಲಿ ನಿರ್ಮಾಣವಾಗಿದೆ. ಈ ನಡುವೆಯೂ ಕೆಲವು ಕಡೆ ಮಾತ್ರ ಮಳೆಯಾಗಲಿದೆ ಎನ್ನುವ ಮುನ್ಸೂವನೆ ಇದೆ. ಹಾಗಾದರೆ ಎಲ್ಲೆಲ್ಲಿ ಮಳೆ ಹಾಗೂ ಎಲ್ಲೆಲ್ಲಿ ಬಿಸಿಲು ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇಂದು (ಮಾರ್ಚ್ 28) ರಾಜ್ಯದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಒಂದೆರಡು ಕಡೆಗಳಲ್ಲಿ ಚದುರಿದ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಗುಡುಗು ಮಿಂಚಿನ ಮುನ್ನೆಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ. ಇನ್ನುಳಿದಂತೆ ನಾಳೆ (ಮಾರ್ಚ್ 29) ಬೆಳಗ್ಗೆವರೆಗೂ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ತಿಳಿಸಿದೆ.
ಮಾರ್ಚ್ 29ರಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ. ಬೆಂಗಳೂರು ಹವಾಮಾನ ಕೇಂದ್ರದ ಮಳೆ ಮುನ್ಸೂಚನೆ ವರದಿ ಪ್ರಕಾರ, ಮಾರ್ಚ್ 29ರಂದು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಾತ್ರ ಇಂದು (ಮಾರ್ಚ್ 28) ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇನ್ನು ಮುಂದಿನ 5 ದಿನಗಳ ಅವಧಿಯಲ್ಲಿ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ನಿನ್ನೆ (ಮಾರ್ಚ್ 27) ರಾಯಚೂರು ಜಿಲ್ಲೆಯಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ರಾಜ್ಯದ ಗರಿಷ್ಠ ತಾಪಮಾನವಾಗಿದೆ. ಬೆಂಗಳೂರು ನಗರದಲ್ಲಿ ಇಂದು (ಮಾರ್ಚ್ 28) ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ನಿನ್ನೆ (ಮಾಮಾರ್ಚ್ 27) ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 35.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 35.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 19.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ತಿಳಿಸಿದೆ.












Click it and Unblock the Notifications