ಸಾರಿಗೆ ನೌಕರರ ಬಂದ್ ಬಗ್ಗೆ ಕಾಂಗ್ರೆಸ್ ಕೊಟ್ಟ ಉತ್ತರವೇನು?
ಸರ್ಕಾರದ ವಿರುದ್ಧ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ತಿರುಗಿಬಿದ್ದಿದ್ದು, ಡಿಸೆಂಬರ್ 30ರ ಒಳಗೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯವ್ಯಾಪಿ ಸರ್ಕಾರಿ ಬಸ್ ಸೇವೆ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಜೆಡಿಎಸ್‌ಗೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ಜೆಡಿಎಸ್ ಪಕ್ಷದವರೇ, ಎಂದಾದರೂ ಸಾರಿಗೆ ನೌಕರರಿಗೆ ಒಳ್ಳೆಯದನ್ನು ಮಾಡುವ ಯಾವುದೇ ನೀತಿ, ಕಾರ್ಯಕ್ರಮ ತಮ್ಮ ಆಡಳಿತಾವಧಿಯಲ್ಲಿ ನಡೆದಿದೆಯೇ ದಯವಿಟ್ಟು ತಿಳಿಸಿ ಎಂದು ಕೇಳಿದೆ.
ತಾವು ಚುನಾವಣೆಗೆ ಮುನ್ನ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡಿ, ಈ ರೀತಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಅರಿವು ಮೂಡಿಸದೆ, ಅದನ್ನೇ ಸಾರಿಗೆ ನೌಕರರು ನಿಜವೆಂದು ತಿಳಿದು, ನಂತರದ ದಿನಗಳಲ್ಲಿ 15 ದಿವಸ ಸಾರಿಗೆ ಮುಷ್ಕರ ಆಗಲು ಪರೋಕ್ಷವಾಗಿ ತಾವು ಕೂಡ ಕಾರಣ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದೆ.

ತಮ್ಮ ಮಿತ್ರ ಪಕ್ಷ ಬಿಜೆಪಿ ಸರ್ಕಾರ ಬಿಟ್ಟು ಹೋಗಿದ್ದ 5,900 ಕೋಟಿ ರೂಪಾಯಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ, ಖರೀದಿ ಸಾಮಗ್ರಿಗಳ ಹಣ ಸೇರಿ ಎಲ್ಲ ಬಾಕಿಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂದು ಸಮರ್ಥಿಸಿಕೊಂಡಿದೆ.
ತಮ್ಮ ಮಿತ್ರ ಪಕ್ಷ 2023 ಮಾರ್ಚ್‌ನಲ್ಲಿ 38 ತಿಂಗಳುಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗಳಿಗೆ ನೀಡಿರಲಿಲ್ಲ. ಅದಕ್ಕೆ ಬೇಕಾದ ಅನುದಾನವನ್ನು ನೀಡದೆ, ನಿವೃತ್ತಿ ಹೊಂದಿದ 11,694 ಸಿಬ್ಬಂದಿಗೆ ಉಪಧನ ಮತ್ತು ಗಳಿಕೆ ರಜೆ ಬಾಕಿ ಹಣವನ್ನು ನೀಡದೆ ನಾವು ಕಳೆದ ವಾರ 224.05 ಕೋಟಿ ರೂಪಾಯಿ ಪಾವತಿಸಿದ್ದೇವೆ ಎಂದು ಹೇಳಿದೆ.
ತಾವು ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರ ಕಡೆ ತಿರುಗಿ ಸಹ ನೋಡದೆ, ಈಗ ಟ್ವೀಟ್ ಮೂಲಕ ಮೊಸಳೆ ಕಣ್ಣೀರು ಸುರಿಸುವ ತಮ್ಮ ನಡೆ ವಿಷಾದನೀಯ. ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರವು ಕೆಎಸ್ಆರ್ಟಿಸಿಗೆ 2,481 ಕೋಟಿ ರೂಪಾಯಿ, ಬಿಎಂಟಿಸಿಗೆ 1,126 ಕೋಟಿ ರೂಪಾಯಿ, ವಾಯುವ್ಯ ಸಾರಿಗೆಗೆ 1,613 ಕೋಟಿ ರೂಪಾಯಿ, ಕಲ್ಯಾಣ ಕರ್ನಾಟಕ ಸಾರಿಗೆಗೆ 1,321 ಕೋಟಿ ರೂಪಾಯಿ ಅನುದಾನ ಸೇರಿದಂತೆ ಒಟ್ಟು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 6,543 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ 2023ರ ಜೂನ್ನಿಂದ 2024ರ ನವೆಂಬರ್ವರೆಗೆ ಬಿಡುಗಡೆ ಮಾಡಿದೆ ಎಂದು ಲೆಕ್ಕ ನೀಡಿದೆ.
ತಮ್ಮ ಮಿತ್ರ ಪಕ್ಷದವರನ್ನು (ಬಿಜೆಪಿ) ಕೂಡ ಸಾರಿಗೆ ಸಂಸ್ಥೆಗಳಲ್ಲಿ ಬಿಟ್ಟು ಹೋಗಿರುವ 5,900 ಕೋಟಿ ರೂಪಾಯಿ ಸಾಲ, ಭವಿಷ್ಯ ನಿಧಿ ಹಣಪಾವತಿ ಬಾಕಿ, ಗ್ರಾಚ್ಯುಟಿ ಹಣ ಬಾಕಿ, ಶೂನ್ಯ ನೇಮಕಾತಿ, ಶೂನ್ಯ ಹೊಸ ಬಸ್ಸುಗಳ ಸೇರ್ಪಡೆ, ಶೂನ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನಿಸುವ ಎದೆಗಾರಿಕೆ ತೋರಿಸುತ್ತಿರಾ ಎಂಬ ಆಶಾವಾದ ನಮ್ಮದಾಗಿದೆ ಎಂದು ವ್ಯಂಗ್ಯವಾಡಿದೆ.












Click it and Unblock the Notifications