Karnataka SSLC Exam 2022 : ವಿದ್ಯಾರ್ಥಿ ಮತ್ತು ಪರೀಕ್ಷಾ ಕೇಂದ್ರಗಳಿಗೆ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು, ಮಾ. 15: ಪ್ರಸಕ್ತ ಸಾಲಿನ 2021-22 ನೇ ಸಾಲಿನ ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆ ಮಾ. 28 ರಿಂದ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಕೋವಿಡ್ ಸುರಕ್ಷತಾ ಮಾರ್ಗಸೂಚಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.
ಎಸ್ಓಪಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸಂಬಂಧ ಪಟ್ಟ ಜಿಲ್ಲಾ ಉಪ ನಿರ್ದೇಶಕರು ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರ:
ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆ ಮುನ್ನ ಮತ್ತು ನಂತರ ಶೇ. 1 ರಷ್ಟು ಸೋಡಿಯಂ ಹೈಪೋಕ್ಲೋರೈಟ್ ಸೆಲ್ಯೂಷನ್ ಸೋಂಕು ನಿವಾರಕ ದ್ರಾವಣ ಹಾಕಿ ಸ್ವಚ್ಚಗೊಳಿಸಿರಬೇಕು. ಪರೀಕ್ಷಾ ಕೇಂದ್ರದ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಬೇಕು. ಕೊಠಡಿಗೆ ಗರಿಷ್ಠ 20 ಮಕ್ಕಳಷ್ಟೇ ಇರಬೇಕು. ಪರೀಕ್ಷೆ ಮುನ್ನ ವಿದ್ಯಾರ್ಥಿಗಳಿಗೆ ಕೊಠಡಿಯ ವಿವರ ನೀಡಬೇಕು. ವಿದ್ಯಾರ್ಥಿಗಳು ತಮ್ಮದೇ ನೀರಿನ ಬಾಟಲ್ ಪರೀಕ್ಷೆಗೆ ತೆಗೆದುಕೊಂಡು ಹೋಗಿರಬೇಕು. ಕೆಮ್ಮು, ನೆಗಡಿ , ಜ್ವರ ಇರುವ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳು ಹೋಗುವಾಗ ಅಂತರ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿ ಗಳು ಬಟ್ಟೆ ಮಾಸ್ಕ್ ಅಥವಾ N 95 ಮಾಸ್ಕ್ ಧರಿಸಿರಬೇಕು. ವಿದ್ಯಾರ್ಥಿಗಳ ಹ್ಯಾಂಡ್ ಸಾನಿಟೈಸ್ ಮಾಡಬೇಕು.

ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ:
ಪರಿಕ್ಷಾರ್ಥಿಗಳು ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಆರೋಗ್ಯ ತಪಾಸಣಾ ಕೌಂಟರ್‌ಗೆ ಹೋಗಬೇಕು. ಥರ್ಮಲ್ ಸ್ಕ್ಯಾನರ್ ನಿಂದ ಪರೀಕ್ಷೆಗೆ ಒಳಪಡಬೇಕು. ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿಗಳ ಗುಂಪು ಕೂಡಬಾರದು. ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದ ಬಳಿ ಆರೋಗ್ಯ ತಪಾಸಣಾ ಕೇಂದ್ರವನ್ನು ಸ್ಥಾಪಿಸಬೇಕು. ಬೆಳಗ್ಗೆ 8.30 ರಿಂದಲೇ ಆರೋಗ್ಯ ತಪಾಸಣಾ ಕೌಂಟರ್ ಕಾರ್ಯ ನಿರ್ವಹಿಸಬೇಕು. ನೆಗಡಿ, ಜ್ವರ, ಕೆಮ್ಮುನಿಂದ ಬಳಲುತ್ತಿರುವ ಮಕ್ಕಳನ್ನು ಪಲ್ಸ್ ಆಕ್ಸಿಮೀಟರ್ ನಿಂದ ಪರೀಕ್ಷೆಗೆ ಒಳಪಡಿಸಬೇಕು.

ಪರಿಕ್ಷಾ ಕೇಂದ್ರದ ಅಧಿಕಾರಿಗಳಿಗೆ :
ಪರೀಕ್ಷಾ ಕೇಂದ್ರಗಳ ಅಧೀಕ್ಷಕರು ಮತ್ತು ಸಿಬ್ಬಂದಿ ಆರೋಗ್ಯವಂತರಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಕೊಡುವಾಗ ಪರೀಕ್ಷಾ ಸಿಬ್ಬಂದಿ ಕೈಗಳನ್ನು ಸಾನಿಟೈಸ್ ಮಾಡಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ನಿಕಟ ಸಂಪರ್ಕಕ್ಕೆ ಬರಬಾರದು. ಪರೀಕ್ಷೆಯಲ್ಲಿ ಭಾಗಿಯಾಗುವ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು.

ಕೋವಿಡ್ ಪಾಸಿಟೀವ್ ಇರುವ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರಾಕರಣೆ ಮಾಡುವಂತಿಲ್ಲ. ಪ್ರತಿ ತಾಲೂಕಿನಲ್ಲಿ ಒಂದು ಕೋವಿಡ್ ಕೆರ್ ಸೆಂಟರ್ ಗುರುತಿಸುವುದು. ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಕೋವಿಡ್ ಇರುವ ವಿದ್ಯಾರ್ಥಿಗಳ ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿವರಗಳನ್ನು ಸಲ್ಲಿಸಬೇಕು. ಕೋವಿಡ್ ಪಾಸಿಟೀವ್ ಇರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಮರ್ಥರು ಎಂಬುದಕ್ಕೆ ವೈದ್ಯರು ದೃಢೀಕರಿಸಬೇಕು. ಪೋಷಕರು ಕೂಡ ರಿಸ್ಕ್ ಕನ್ಸೆಂಟ್ ಪತ್ರವನ್ನು ನೀಡಬೇಕು. ಕೋವಿಡ್ ಪಾಸಿಟೀವ್ ಇರುವ ವಿದ್ಯಾರ್ಥಿ ಕಡ್ಡಾಯವಾಗಿ ಎನ್ 95 ಕಡ್ಡಾಯವಾಗಿ ಧರಿಸಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.











Click it and Unblock the Notifications