ಇನ್ಮುಂದೆ SSLC, PUC ಅಂಕಪಟ್ಟಿಯ ಜೊತೆಗೆ ಟಿಸಿ ಕೂಡ ಡಿಜಿಟಲ್
ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸಿಹಿಸುದ್ದಿ ನೀಡಿದೆ. ಈವರೆಗೆ ಕೇವಲ ಡಿಜಿಟಲ್ ಅಂಕಪಟ್ಟಿಗಳನ್ನು ಮಾತ್ರ ಪಡೆಯುತ್ತಿದ್ದ ವಿದ್ಯಾರ್ಥಿಗಳು, ಇನ್ಮುಂದೆ ತಮ್ಮ ವರ್ಗಾವಣೆ ಪ್ರಮಾಣಪತ್ರ (TC) ವನ್ನೂ ಕೂಡ ಡಿಜಿಟಲ್ ರೂಪದಲ್ಲಿಯೇ ಪಡೆಯಲಿದ್ದಾರೆ.
ಹೌದು, ದ್ವಿತೀಯ ಪಿಯುಸಿ ತೇರ್ಗಡೆಯಾದ ಹೊಸ ವಿದ್ಯಾರ್ಥಿಗಳಿಗೆ ಈ ಬಾರಿ ಪ್ರಾಯೋಗಿಕವಾಗಿ ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಅನುಮತಿ ನೀಡಿ ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಯ ಪರೀಕ್ಷಾ ಫಲಿತಾಂಶದ ದತ್ತಾಂಶವನ್ನು ಬಳಸಿಕೊಂಡು, ತಂತ್ರಾಂಶವು ಸ್ವಯಂಚಾಲಿತವಾಗಿ ಈ ಡಿಜಿಟಲ್ ಟಿಸಿಯನ್ನು ನೀಡಲಿದೆ. ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ನೇರವಾಗಿ ತಮ್ಮ 'ಡಿಜಿಲಾಕರ್' ಖಾತೆಯ ಮೂಲಕ ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹೊಸ ಟಿಸಿಯಲ್ಲಿ ಏನೇನು ಬದಲಾವಣೆ?
ಹೊಸದಾಗಿ ಪರಿಚಯಿಸುತ್ತಿರುವ ಡಿಜಿಟಲ್ ಟಿಸಿಯಲ್ಲಿ ಹಳೆಯ ನಮೂನೆಯಲ್ಲಿದ್ದ ಹಲವು ಅನಗತ್ಯ ಕಾಲಂಗಳನ್ನು ಕೈಬಿಡಲಾಗಿದೆ. ಮುಖ್ಯವಾಗಿ ಶುಲ್ಕ ಬಾಕಿ, ವಿದ್ಯಾರ್ಥಿ ವೇತನ ಹಾಗೂ ಹಾಜರಾತಿ ಲೆಕ್ಕಾಚಾರದಂತಹ ಮಾಹಿತಿಗಳು ಇದರಲ್ಲಿ ಇರುವುದಿಲ್ಲ. ಬದಲಾಗಿ, ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳ ನಿಖರತೆಗಾಗಿ ಪರೀಕ್ಷಾ ನೋಂದಣಿ ಸಂಖ್ಯೆ, ಅಪಾರ್ ಐಡಿ (APAAR ID) ಹಾಗೂ ಸ್ಟೂಡೆಂಟ್ ಅಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ (SATS) ನಂಬರ್‌ಗಳನ್ನು ಕಡ್ಡಾಯವಾಗಿ ನಮೂದಿಸಲಾಗುತ್ತದೆ.
ಸ್ವಯಂಚಾಲಿತ 'ಉತ್ತಮ' ನಡತೆ
ಒಂದು ವೇಳೆ ವಿದ್ಯಾರ್ಥಿಗಳ ನಡತೆಯ ಕುರಿತು ಪ್ರಾಂಶುಪಾಲರು ನಿಗದಿತ ದಿನಾಂಕದೊಳಗೆ ಯಾವುದೇ ನಕಾರಾತ್ಮಕ ಅಂಶಗಳನ್ನು ದಾಖಲಿಸದಿದ್ದರೆ, ತಂತ್ರಾಂಶವು ಸ್ವಯಂಚಾಲಿತವಾಗಿ ವಿದ್ಯಾರ್ಥಿಯ ನಡತೆಯನ್ನು 'ಉತ್ತಮ' ಎಂದು ನೀಡುತ್ತದೆ. ಇದರಿಂದ ಪ್ರಾಂಶುಪಾಲರ ಭೌತಿಕ ಸಹಿಗಾಗಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಅಲೆಯುವುದು ತಪ್ಪುತ್ತದೆ.
ಈ ಡಿಜಿಟಲ್ ಟಿಸಿಗಳು ಅತ್ಯಂತ ಸುರಕ್ಷಿತವಾಗಿದ್ದು, ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತವೆ. ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಆಧಾರ ಕೇಂದ್ರಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಕ್ಷಣಾರ್ಧದಲ್ಲಿ ಟಿಸಿಯನ್ನು ಪರಿಶೀಲಿಸಬಹುದು. ಇದರಿಂದ ನಕಲಿ ಟಿಸಿಗಳ ಹಾವಳಿಗೆ ಶಾಶ್ವತ ಬ್ರೇಕ್ ಬೀಳಲಿದೆ.
ಮೊದಲ ಹಂತದಲ್ಲಿ ಯಾರಿಗೆ ಈ ಡಿಜಿಟಲ್ ಟಿಸಿ?
ಪ್ರಸಕ್ತ ಸಾಲಿನಲ್ಲಿ (2025-26) ಕೇವಲ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಯೋಗಿಕವಾಗಿ ಈ ಡಿಜಿಟಲ್ ಟಿಸಿ ಸೌಲಭ್ಯ ಲಭ್ಯವಿರಲಿದೆ. ಖಾಸಗಿ ಕಾಲೇಜು ವಿದ್ಯಾರ್ಥಿಗಳು, ರಿಪೀಟರ್ಸ್ ಹಾಗೂ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಪತ್ರ ಬಯಸುವ ವಿದ್ಯಾರ್ಥಿಗಳು ಈ ಹಿಂದಿನಂತೆಯೇ ಖುದ್ದಾಗಿ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಿ, ಭೌತಿಕ ಟಿಸಿಯನ್ನು ಪಡೆಯಬೇಕಾಗುತ್ತದೆ.
"ಡಿಜಿಲಾಕರ್ ಮೂಲಕ ನೀಡಲಾಗುವ ಈ ಡಿಜಿಟಲ್ ಟಿಸಿಗೆ ಪ್ರಾಂಶುಪಾಲರ ಭೌತಿಕ ಸಹಿಯ ಅಗತ್ಯವಿರುವುದಿಲ್ಲ. ಉನ್ನತ ಶಿಕ್ಷಣದ ಪ್ರವೇಶಾತಿಗೆ ಇದನ್ನು ಮಾನ್ಯತೆ ಪಡೆದ ಅಧಿಕೃತ ದಾಖಲೆಯೆಂದು ಪರಿಗಣಿಸಬೇಕು" ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಎನ್. ಪದ್ಮಿನಿ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಶಿಕ್ಷಣ ಇಲಾಖೆಯ ಈ ಡಿಜಿಟಲ್ ಹೆಜ್ಜೆಯು ವಿದ್ಯಾರ್ಥಿಗಳ ಹಾಗೂ ಪೋಷಕರ ಸಮಯ ಮತ್ತು ಶ್ರಮ ಎರಡನ್ನೂ ಉಳಿಸಲಿದೆ.












Click it and Unblock the Notifications