ಭಾನುವಾರ ರಜೆಯಿದ್ದರೂ ಶಾಲೆಗಳಲ್ಲಿ ನ.1ರಂದೇ ರಾಜ್ಯೋತ್ಸವ ಕಡ್ಡಾಯ: ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ
ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಸುತ್ತೋಲೆಯನ್ನ ಹೊರಡಿಸಿದೆ. ಅದೆನೆಂದರೆ, ನವೆಂಬರ್ 01 ಭಾನುವಾರ ಬಂದಿದ್ದರೂ ಸಹ, ದಿನಾಂಕವನ್ನ ಮುಂದೂಡದೆ ಅಂದೇ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಕಡ್ಡಾಯವಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಬೇಕೆಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಾಳ್ಕರ್ ಅವರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ (ಖಾಸಗಿ) ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ನಿಯಮ ಅನ್ವಯವಾಗಲಿದೆ.

ಸಾಮಾನ್ಯವಾಗಿ ಭಾನುವಾರ ಶಾಲೆಗಳಿಗೆ ರಜಾದಿನವಾಗಿರುವುದರಿಂದ ಕಾರ್ಯಕ್ರಮ ಮುಂದುಡುವ ಸಾಧ್ಯತೆಗಳಿರುತ್ತವೆ. ಆದರೆ ರಾಜ್ಯೋತ್ಸವದ ಐತಿಹಾಸಿಕ ಮಹತ್ವವನ್ನ ಗಮನದಲ್ಲಿಟ್ಟುಕೊಂಡು, ಯಾವುದೇ ಕಾರಣಕ್ಕೂ ದಿನಾಂಕ ಬದಲು ಮಾಡದೆ ನವೆಂಬರ್ 1ರಂದೇ ಕಾರ್ಯಕ್ರಮಗಳನ್ನ ಆಯೋಜಿಸಬೇಕು ಎಂದು ಇಲಾಖಾ ಅಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ.
ಕರ್ನಾಟಕ ಶಾಲೆಗಳಲ್ಲಿ ಕನ್ನಡದ ಹಬ್ಬದ ಸಡಗರ
ಪ್ರತಿ ವರ್ಷ ನವೆಂಬರ್ 1ರಂದು ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ಧ್ವಜಾರೋಹಣ, ನಾಡಗೀತೆ ಗಾಯನ, ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡದ ಹಿರಿಮೆಯನ್ನ ಮಕ್ಕಳಿಗೆ ಪರಿಚಯಿಸಲಾಗುತ್ತದೆ.
ಭಾನುವಾರ ರಜೆ ಎಂಬ ಕಾರಣಕ್ಕೆ ಈ ಸಂಭ್ರಮಕ್ಕೆ ಅಡ್ಡಿಯಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ. ಶಿಕ್ಷಕರು, ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ಪೋಷಕರು ಒಟ್ಟಾಗಿ ಸೇರಿ ನಿಯಮಾನುಸಾರ, ಶಿಸ್ತುಬದ್ಧವಾಗಿ ಮತ್ತು ಗೌರವಪೂರ್ವಕವಾಗಿ ಹಬ್ಬವನ್ನ ಆಚರಿಸಲು ಶಾಲೆಗಳು ಅಗತ್ಯ ಸಿದ್ಧತೆಗಳನ್ನ ಕೈಗೊಳ್ಳಬೇಕಿದೆ.
ವಿಕಾಸ್ ಕಿಶೋರ್ ಸುರಾಳ್ಕರ್ ಅವರ ಕಟ್ಟುನಿಟ್ಟಿನ ಆದೇಶ
ಇಲಾಖಾ ಆಯುಕ್ತರು ತಮ್ಮ ಆದೇಶದಲ್ಲಿ ಪ್ರತಿಯೊಂದು ಶಾಲೆಯೂ ಈ ಸುತ್ತೋಲೆಯನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರು (DDPI) ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ನವೆಂಬರ್ 1ರಂದೇ ಆಚರಣೆ ನಡೆಯುತ್ತಿದೆಯೇ ಎಂಬುದನ್ನ ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆ ನಡೆಸಲಿದ್ದಾರೆ.
ಶಾಲಾ ಹಂತದಲ್ಲಿ ಕೇವಲ ಔಪಚಾರಿಕ ಆಚರಣೆಗೆ ಸೀಮಿತವಾಗದೆ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿನ ಪರಂಪರೆಯನ್ನ ಬಿಂಬಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಪ್ರೋತ್ಸಾಹಿಸಲಾಗಿದೆ.
ಕನ್ನಡ ನಾಡು-ನುಡಿಯ ಅಭಿಮಾನವನ್ನ ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲೇ ಬೆಳೆಸುವ ನಿಟ್ಟಿನಲ್ಲಿ ಶಾಲೆಗಳ ಪಾತ್ರ ಅತ್ಯಂತ ದೊಡ್ಡದಾಗಿದೆ. ಹೀಗಾಗಿ ಭಾನುವಾರದ ರಜೆಯನ್ನು ಲೆಕ್ಕಿಸದೆ, ನವೆಂಬರ್ 1 ರಂದೇ ಶಾಲೆಗಳಲ್ಲಿ ಕನ್ನಡದ ಬಾವುಟ ಹಾರಾಡಲಿದ್ದು, ರಾಜ್ಯೋತ್ಸವದ ದಿನಾಚರಣೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳಿಗೆ ಮುನ್ನುಡಿ ಬರೆದಿದೆ.


Click it and Unblock the Notifications
