Ditwah Cyclone: ದಿತ್ವಾ ಚಂಡಮಾರುತದಿಂದ ಕರ್ನಾಟಕಕ್ಕೂ ಕಾದಿದೆ ಕಂಟಕ, ಎಲ್ಲೆಲ್ಲಿ ಮಳೆ?
ಶ್ರೀಲಂಕಾದ ಕರಾವಳಿ ಮತ್ತು ಪಕ್ಕದ ನೈರುತ್ಯ ಬಂಗಾಳ ಕೊಲ್ಲಿಯ ಮೇಲೆ ಬೀಸುತ್ತಿರುವ ಚಂಡಮಾರುತ ದಿತ್ವಾ ಚಂಡಮಾರುತವು ಪಕ್ಕದ ಆಂಧ್ರ ಹಾಗೂ ತಮಿಳುನಾಡು ಕರಾವಳಿಗಳಿಗೆ ಅಪ್ಪಳಿಸಲಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನವೆಂಬರ್ 30ರವರೆಗೆ ಕರ್ನಾಟಕ ಸೇರಿ ನೆರೆಯ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ಹವಾಮಾನ ವೈಪರೀತ್ಯದಿಂದ ಕೊರೆಯುವ ಚಳಿ ತೀವ್ರಗೊಂಡಿದ್ದು, ಜನ ಮನೆಯಿಂದ ಹೊರಬರಲಾರದ ಸ್ಥಿತಿ ಇದೆ. ಇದರೊಂದಿಗೆ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.
ಶ್ರೀಲಂಕಾದ ಕರಾವಳಿ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಬೀಸುತ್ತಿರುವ ದಿತ್ವಾ ಚಂಡಮಾರುತ ಗಂಟೆಗೆ 13 ಕಿ.ಮೀ ವೇಗದಲ್ಲಿ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸಿ ಕೇಂದ್ರೀಕೃತವಾಗಿದೆ. ಇದು ಶ್ರೀಲಂಕಾ ಕರಾವಳಿ ಮತ್ತು ಪಕ್ಕದ ನೈರುತ್ಯ ಬಂಗಾಳ ಕೊಲ್ಲಿಯ ಮೂಲಕ ಉತ್ತರ-ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ನವೆಂಬರ್ 30ರಂದು ಬೆಳಗಿನ ಜಾವದ ವೇಳೆಗೆ ಉತ್ತರ ತಮಿಳುನಾಡು, ಪುದುಚೇರಿ ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶ ಕರಾವಳಿಯ ಬಳಿ ನೈರುತ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮತ್ತೊಂದೆಡೆ ಮಲಕ್ಕಾ ಜಲಸಂಧಿಯ ಮೇಲೆ ವಾಯುಭಾರ ಕುಸಿತದಿಂದ ಸಂಭವಿಸಿರು "ಸೆನ್ಯಾರ್" ಚಂಡಮಾರುತ ಕೂಡ ಗಂಟೆಗೆ 17 ಕಿ.ಮೀ ವೇಗದಲ್ಲಿ ಪೂರ್ವಕ್ಕೆ ಸರಿದು ಮಲಕ್ಕಾ ಜಲಸಂಧಿ ಮತ್ತು ಪಕ್ಕದ ಮಲೇಷ್ಯಾದ ಮೇಲೆ ಕೇಂದ್ರೀಕೃತವಾಗಿತ್ತು. ಇದು ಮುಂದಿನ ಎರಡು ದಿನಗಳಲ್ಲಿ ಪೂರ್ವಕ್ಕೆ ಸರಿದು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ?
ರಾಜ್ಯದಾದ್ಯಂತ ಈಶಾನ್ಯ ಮಾನ್ಸೂನ್ ದುರ್ಬಲವಾಗಿದ್ದು, ಒಣ ಹವೆ ಇತ್ತು. ಆದರೆ ಸೈಕ್ಲೋನ್‌ನಿಂದಾಗಿ ಕೆಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಭಾಗದಲ್ಲಿ ಒಣ ಹವೆ ಇರಲಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳು, ಉಡುಪಿ ಮತ್ತು ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಭಾಗದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಭಾರೀ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು ಬೀಳುವ ಸಾಧ್ಯತೆ ಹೆಚ್ಚು ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಹಾಗೂ 17 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಹೆಚ್ಚು. ಡಿಸೆಂಬರ್ 3ರವರೆಗೆ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ.












Click it and Unblock the Notifications