• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಅಸ್ಮಿತೆಯೇ ಕರ್ನಾಟಕದ ಹೆಗ್ಗುರುತು : ಸಿದ್ದರಾಮಯ್ಯ

By Mahesh
|

ನಾವು ಒಂದು ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳುವ ಮೂಲಕ ಕರ್ನಾಟಕಕ್ಕೆ ಒಂದು ಪ್ರತ್ಯೇಕ ನಾಡಧ್ವಜವನ್ನು ಅಳವಡಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಈ ನಾಡ ಧ್ವಜದ ವಿನ್ಯಾಸಕ್ಕೆ ಸಹಮತವನ್ನು ವ್ಯಕ್ತಪಡಿಸಿರುವ ಎಲ್ಲ ಹಿರಿಯ ಸಾಹಿತಿಗಳಿಗೆ, ಕನ್ನಡಪರ ಸಂಘಟನೆಗಳಿಗೆ ಹಾಗೂ ಎಲ್ಲ ಮುಖಂಡರುಗಳಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇವೆ ಎಂದು ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಅರ್ಪಿಸಿ ಫೇಸ್ ಬುಕ್ ಬರೆದುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರಾದೇಶಿಕ ಅನನ್ಯತೆ, ಒಕ್ಕೂಟ ವ್ಯವಸ್ಥೆ, ಸವಾಲುಗಳ ಬಗ್ಗೆ ಬರೆದುಕೊಂಡಿದ್ದಾರೆ.

ಕಳೆದ ವರ್ಷ, ಜುಲೈ ತಿಂಗಳಿನಲ್ಲಿ ದಿಲ್ಲಿಯ ಟಿವಿ ಸ್ಟುಡಿಯೋಗಳು ಏಕಾಏಕಿ ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದವು. ತನ್ನದೇ ನಾಡಧ್ವಜವನ್ನು ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದ್ದೇ ಅವುಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಭಾರತದ ಏಕತೆಯನ್ನೇ ದೊಡ್ಡ ಚಿಂತೆಯಾಗಿಸಿಕೊಂಡ ಸುದ್ದಿ ವಾಚಕರು ಕರ್ನಾಟಕಕ್ಕೆಪುಂಖಾನುಪುಂಖವಾಗಿ ರಾಷ್ಟ್ರೀಯತೆಯ ಪಾಠ ಬೋಧಿಸಲು ಮುಂದಾಗಿದ್ದರು. ಈ ವರ್ಷ, ಸಮಿತಿ ತನ್ನ ವರದಿ ಸಲ್ಲಿಸಿದೆ; ಮುಖ್ಯವಾಗಿ, ಕರ್ನಾಟಕ ತನ್ನದೇ ನಾಡಧ್ವಜವನ್ನು ಅಳವಡಿಸಿಕೊಳ್ಳುವಂತೆ ಶಿಫಾರಸ್ಸನ್ನೂ ಮಾಡಿದೆ.

ನಾಡ ಧ್ವಜ: ಸಿದ್ದು ಟ್ವೀಟಿಗೆ ಪ್ರತಾಪ್ ಹಾಗೂ ಪ್ರಜೆಗಳ ಪ್ರತಿಕ್ರಿಯೆ

ನಮ್ಮ ಸರ್ಕಾರ ಆ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಿರುವುದಲ್ಲದೇ, 'ಲಾಂಛನಗಳ ಮತ್ತು ಹೆಸರುಗಳ (ದುರುಪಯೋಗತಡೆಗಟ್ಟುವಿಕೆ) ಕಾಯ್ದೆ, 1956' ರಡಿಯಲ್ಲಿ ಕರ್ನಾಟಕದ ಹೊಸ ಧ್ವಜವನ್ನು ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದೆ. ಈ ಇಡೀ ಪ್ರಕರಣದಲ್ಲಿ ಒಂದು ಪ್ರಶ್ನೆ ಮುನ್ನೆಲೆಗೆ ಬರುತ್ತಿದೆ;

ಅದೇನೆಂದರೆ, ಕನ್ನಡಿಗರು ತಮ್ಮದೇ ನಾಡಧ್ವಜವನ್ನು ಅಳವಡಿಸಿಕೊಳ್ಳುವುದಾಗಲಿ ಅಥವಾ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕೊಟ್ಟುಕೊಳ್ಳುವುದಾಗಲಿ ಅಥವಾ ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ ತಮ್ಮ ನಾಡಿನ ಅಸ್ಮಿತೆಯ ಬದುಕನ್ನು ಅವರಿಚ್ಛೆಯಂತೆ ಬದುಕುವುದಾಗಲಿ, ಸದೃಢ ರಾಷ್ಟ್ರ ನಿರ್ಮಾಣದ ಆಶಯಕ್ಕೆ ಹೇಗೆ ಅಡ್ಡಿ ಉಂಟುಮಾಡುತ್ತದೆ?

ಕರ್ನಾಟಕ ಅಸ್ಮಿತೆಯೇ ಕರ್ನಾಟಕದ ಗುರುತು

ಕರ್ನಾಟಕ ಅಸ್ಮಿತೆಯೇ ಕರ್ನಾಟಕದ ಗುರುತು

1947ರಲ್ಲಿ ಭಾರತ ಆಗಷ್ಟೇ ಸ್ವಾತಂತ್ರ್ಯ ಪಡೆದ ಹಸುಗೂಸಾಗಿತ್ತು. ಅಂಥಾ ಸಂದರ್ಭದಲ್ಲಿ ನಮ್ಮನ್ನು ವಿಭಜಿಸುವ ಅಥವಾ ಪ್ರತ್ಯೇಕತೆಯನ್ನು ಪ್ರಚೋದಿಸುವಂತಹ ಶಕ್ತಿಗಳ ಬಗ್ಗೆ ನಾವು ಬಲು ಜಾಗರೂಕತೆ ವಹಿಸಬೇಕಾಗಿತ್ತು. ಹಾಗಾಗಿ, ಒಂದು ಪ್ರಬಲ ಕೇಂದ್ರದ ಸುತ್ತ, ಒಕ್ಕೂಟ ವ್ಯವಸ್ಥೆಯಾಗಿ ಭಾರತ ರೂಪತಳೆಯಿತು. ಸರ್ದಾರ್ ಪಟೇಲರು ರಾಜಾಡಳಿತವಿದ್ದ ಪ್ರಾಂತ್ಯಗಳನ್ನು ಏಕೀಕರಿಸಿ ಒಕ್ಕೂಟವನ್ನು ಕಟ್ಟಲು ಮುಂದಾದಾಗ, ಈ ಪ್ರಬಲ ಕೇಂದ್ರದ ಪರಿಕಲ್ಪನೆ ಹೆಚ್ಚು ಅರ್ಥಪೂರ್ಣವೆನಿಸಿದ್ದು ಸುಳ್ಳಲ್ಲ.

ಇವತ್ತು, ಅದೆಲ್ಲಾ ಘಟಿಸಿ 70 ವಸಂತಗಳೇ ಉರುಳಿ ಹೋಗಿವೆ, ನಾವೀಗ ಒಂದು ಗೌರವಾನ್ವಿತದೇಶವಾಗಿ ರೂಪುಗೊಂಡಿದ್ದೇವೆ.

ನಮ್ಮ ಸಂವಿಧಾನವು ಕೂಡ ಕಾಲವು ಒಡ್ಡಿದ ಸವಾಲುಗಳನ್ನೆಲ್ಲ ಮೆಟ್ಟಿ ನಿಂತಿದೆ. ಇದೇ ಅವಧಿಯಲ್ಲಿ, ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡಿನಲ್ಲಾದ ಪ್ರಕ್ಷಬ್ಧುತೆಯಿಂದ ಹಾಗೂ ಸ್ವಾಯತ್ತತೆಯ ಕೂಗು ಹಾಕುತ್ತಿರುವ ಪಂಜಾಬ್, ಅಸ್ಸಾಂನಂತಹ ರಾಜ್ಯಗಳಿಂದ ನಾವು ಒಂದಷ್ಟು ಪಾಠಗಳನ್ನೂ ಕಲಿತಿದ್ದೇವೆ. ಇಂದು ನಾವು ಒಕ್ಕೂಟ ವ್ಯವಸ್ಥೆಯಿಂದ ರಾಜ್ಯಗಳ ಸಂಯುಕ್ತ ವ್ಯವಸ್ಥೆಯತ್ತ ರೂಪಾಂತರವಾಗುತ್ತಿದ್ದೇವೆ.

ಹಾಗಾಗಿ, ತುಸು ಹೆಚ್ಚಿನ ಸಂಯುಕ್ತ ಸ್ವಾಯತ್ತೆಯನ್ನು ಮತ್ತು ಪ್ರಾದೇಶಿಕ ಅನನ್ಯತೆಯನ್ನು ಅಪೇಕ್ಷಿಸುವುದು ದೇಶಕ್ಕೆ ಮಾರಕವಾಗುತ್ತದೆ ಎಂದು ನನಗನ್ನಿಸುವುದಿಲ್ಲ.

ಪ್ರಾದೇಶಿಕ ಅನನ್ಯತೆಯಷ್ಟೇ ಆಳವಾಗಿ ನಂಬಿದ್ದೇವೆ

ಪ್ರಾದೇಶಿಕ ಅನನ್ಯತೆಯಷ್ಟೇ ಆಳವಾಗಿ ನಂಬಿದ್ದೇವೆ

ಕನ್ನಡದ ಅನನ್ಯತೆಯೇ ಕರ್ನಾಟಕದ ಹೆಮ್ಮೆ. ಕನ್ನಡ ಭಾಷೆಯಲ್ಲಿರುವ ಅತ್ಯಂತ ಹಳೆಯ ಶಾಸನ, ಹಾಸನ ಬಳಿಯ ಹಲ್ಮಿಡಿಯಲ್ಲಿ ದೊರಕಿದೆ. ಇದರ ಕಾಲ ಕ್ರಿ.ಶ.2ನೇ ಶತಮಾನ. ಅತ್ಯಂತ ಪುರಾತನ ಕನ್ನಡ ರಾಜಮನೆತನವಾದ ಬನವಾಸಿಯ ಕದಂಬರು ಕ್ರಿ.ಶ.4ನೇ ಶತಮಾನದಲ್ಲಿ ಆಡಳಿತ ನಡೆಸಿದ್ದಕ್ಕೆ ನಮ್ಮಲ್ಲಿ ಪುರಾವೆಗಳಿವೆ.

ನಾವು ಹಲವು ದಶಕಗಳಿಂದ ಕೆಂಪು, ಹಳದಿ ಬಾವುಟವನ್ನು ಬಳಸುತ್ತಾ ಬಂದಿದ್ದೇವೆ. ಆದಾಗ್ಯೂ, ನಮ್ಮ ರಾಷ್ಟ್ರಕವಿ ಕುವೆಂಪು ಹಾಡಿದಂತೆ, ಕರ್ನಾಟಕವು ಭಾರತೆಯ ತನುಜಾತೆ. ಇದನ್ನು ಪ್ರಾದೇಶಿಕ ಅನನ್ಯತೆಯಷ್ಟೇ ಆಳವಾಗಿ ನಂಬಿದ್ದೇವೆ, ಆಚರಿಸಿಕೊಂಡು ಬಂದಿದ್ದೇವೆ. ಇದನ್ನೆಲ್ಲ ಪರಿಗಣಿಸಿದಾಗ, ದಿಲ್ಲಿ ಸ್ಟುಡಿಯೋದಲ್ಲಿ ಕೂತು ನಮ್ಮ ಅನನ್ಯತೆ ಪ್ರತಿಪಾದನೆಯ ಬಗ್ಗೆ ಗಾಬರಿಯ ಮಾತುಗಳನ್ನು ಹೊರಚೆಲ್ಲಿದ್ದ ಟಿವಿ ನಿರೂಪಕರ ಆತಂಕವೆಲ್ಲ ಅರ್ಥಹೀನವಾದುದು.

ಒಕ್ಕೂಟ ವ್ಯವಸ್ಥೆಗೆ ನಮ್ಮ ಬದ್ಧತೆಯನ್ನು ಖಾತ್ರಿಪಡಿಸುತ್ತಲೇ, ನಮ್ಮ ದಿನವಹಿ ಬದುಕುಗಳನ್ನು ಬಾಧಿಸುತ್ತಿರುವಂತಹ ಸಂಯುಕ್ತ ವ್ಯವಸ್ಥೆಯ ಕೆಲ ಸವಾಲುಗಳನ್ನು ಚರ್ಚೆಗೆ ತರಲು ನಾನು ಬಯಸುತ್ತೇನೆ. ತುಲನಾತ್ಮಕವಾಗಿ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು, ಕೇಂದ್ರದಿಂದ ಅನುದಾನವನ್ನು ಪಡೆಯುತ್ತಿರುವುದಕ್ಕಿಂತಲೂ ಹೆಚ್ಚು ಪಾಲನ್ನು ತೆರಿಗೆರೂಪದಲ್ಲಿ ಕೇಂದ್ರಕ್ಕೆ ಸಂದಾಯ ಮಾಡುತ್ತಿವೆ.

ಕೇಂದ್ರೀಯ ತೆರಿಗೆಯ ವಿಕೇಂದ್ರಿಕರಣ

ಕೇಂದ್ರೀಯ ತೆರಿಗೆಯ ವಿಕೇಂದ್ರಿಕರಣ

ನಮಗೆ ಕೇಂದ್ರದಿಂದ ದಕ್ಕುತ್ತಿರುವುದೆಲ್ಲಾ, ಕೇಂದ್ರೀಯ ತೆರಿಗೆಯ ವಿಕೇಂದ್ರಿಕರಣದ ತರುವಾಯ ರಾಜ್ಯಕ್ಕೆ ಸಿಗುವ ಪಾಲಿನ ರೂಪದಲ್ಲಿ ಸಿಗುತ್ತಿದೆ ಮತ್ತು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಅನುದಾನದ ರೂಪದಲ್ಲಿ ಮಾತ್ರ ಬರುತ್ತಿದೆ. ಈ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳ ಅನುದಾನಗಳೂ ಹಲವು ಮಿತಿಗಳನ್ನು ಜೊತೆಗೇ ಹೊತ್ತುತರುತ್ತವೆ. ಈ ಯೋಜನೆಗಳನ್ನು ಇಡೀ ದೇಶವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುತ್ತೆ.

ಆದರೂ ನಾವು ನಮ್ಮ ರಾಜ್ಯದಲ್ಲಿ ಅನುಷ್ಠಾನ ಮಾಡಬೇಕು ಹಾಗೂ ಆ ಯೋಜನೆಗೆ ನಮ್ಮ ಪಾಲಿನ ಮೊತ್ತವನ್ನು ಸಂದಾಯ ಮಾಡಲೇಬೇಕು. ನಮ್ಮ ರಾಜ್ಯಗಳಿಂದ ಸಂಗ್ರಹವಾದ ತೆರಿಗೆ ಹಣದಲ್ಲಿ ನಮಗೇ ಹೆಚ್ಚಿನ ಪಾಲು ಸಿಗುವಂತಹ ಒಂದು ವ್ಯವಸ್ಥೆ ಜಾರಿಗೆ ಬರಬೇಕಿದೆ. ಅದರಲ್ಲಿ ಕೇಂದ್ರದಿಂದ ಪ್ರಾಯೋಜಿತವಾದ ಯೋಜನೆಗಳ ಪಾಲುದಾರಿಕೆ ಕಡಿಮೆ ಇರಬೇಕು. ಒಂದೊಮ್ಮೆ ಕೇಂದ್ರದ ಯೋಜನೆಗಳು, ತೀರಾ ಅನಿವಾರ್ಯ ಅನ್ನಿಸಿದರೆ, ಅವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಅವಕಾಶವಾದರೂ ಇರಬೇಕು.

ಹಾಗೆ ನೋಡಿದರೆ, ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳಿಗೆ ಅನೇಕ ರೀತಿಯ ಆರ್ಥಿಕ ನೆರವು ನೀಡುತ್ತಿವೆ. ವಿಂಧ್ಯಾ ಪರ್ವತಗಳಿಂದ ದಕ್ಷಿಣಕ್ಕಿರುವ ಆರು ರಾಜ್ಯಗಳು ತೆರಿಗೆ ರೂಪದಲ್ಲಿ ಹೆಚ್ಚಿನದನ್ನು ಕೊಟ್ಟರೂ ಅವುಗಳಿಗೆ ಅನುದಾನವಾಗಿ ದಕ್ಕುತ್ತಿರುವುದು ತೀರಾ ಕಡಿಮೆ ಮೊತ್ತ. ಉದಾಹರಣೆಗೆ, ಉತ್ತರ ಪ್ರದೇಶ ತಾನು ಸಂದಾಯ ಮಾಡುವ ಪ್ರತಿ 1 ರೂಪಾಯಿ ತೆರಿಗೆಗೆ ಪ್ರತಿಯಾಗಿ 1.79 ರೂಪಾಯಿ ಅನುದಾನವನ್ನು ಪಡೆಯುತ್ತಿದೆ.

ಕೇಂದ್ರದಿಂದ ಕೇವಲ 0.47 ರೂಪಾಯಿ ಅನುದಾನ

ಕೇಂದ್ರದಿಂದ ಕೇವಲ 0.47 ರೂಪಾಯಿ ಅನುದಾನ

ಆದರೆ ಕರ್ನಾಟಕದ ಪ್ರತಿ 1 ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರದಿಂದ ಬರುತ್ತಿರುವುದು ಕೇವಲ 0.47 ರೂಪಾಯಿ ಅನುದಾನ! ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸಬೇಕೆನ್ನುವುದನ್ನು ನಾನು ಒಪ್ಪುತ್ತೇನೆ, ಆದರೆ ಅಭಿವೃದ್ಧಿಗೆ ಪ್ರೋತ್ಸಾಹ ಎಲ್ಲಿ? ದಕ್ಷಿಣದ ರಾಜ್ಯಗಳು ಜನಸಂಖ್ಯೆ ಬೆಳವಣಿಗೆಯಲ್ಲಿ ಹೆಚ್ಚೂ-ಕಮ್ಮಿ ವ್ಯಕ್ತಿ ಪರ್ಯಾಯದ ಹಂತವನ್ನುತಲುಪಿವೆ. (ಪ್ರತಿ ದಂಪತಿಗೆ ಎರಡು ಮಕ್ಕಳು ಇರಬೇಕು ಎನ್ನುವ ಅಂದಾಜು ಹಾಗೂ ಹುಟ್ಟು ಮತ್ತು ಸಾವಿನ ಪ್ರಮಾಣದಲ್ಲಿ ಸಮತೋಲನವನ್ನು ಸಾಧಿಸುವ ಅಂದಾಜು) ಆದಾಗ್ಯೂ, ಕೇಂದ್ರೀಯ ತೆರಿಗೆಗಳನ್ನು ವಿತರಿಸುವಾಗ ಜನಸಂಖ್ಯೆಯೇ ಪ್ರಧಾನ ಆಧಾರವಾಗಿ ಉಳಿದಿದೆ. ಇನ್ನೂ ಎಷ್ಟು ದಿನ ನಾವು ಜನಸಂಖ್ಯಾ ಏರಿಕೆಯ ತಾಪ ಅನುಭವಿಸುತ್ತಲೇ ಇರಬೇಕು?

ಭಾರತವು ಹೊರ ರಾಷ್ಟ್ರಗಳೊಂದಿಗೆ ನಡೆಸುವ ವ್ಯವಹಾರದ ಮೇಲೆ ಪ್ರಭಾವ ಬೀರುವ ಆರ್ಥಿಕ ನೀತಿಗಳು, ದೇಶದ ಒಳಗೆ ಇರುವ ರಾಜ್ಯಗಳ ಮೇಲೂ ಪರಿಣಾಮ ಉಂಟುಮಾಡುತ್ತವೆ.

ಆದರೂ ಸಹಾ, ದೇಶದ ಆರ್ಥಿಕ ನೀತಿಯನ್ನು ರೂಪಿಸುವಾಗ ರಾಜ್ಯಗಳ ಧ್ವನಿಗೆ ಆಸ್ಪದವೇ ಇಲ್ಲ.

ಉದಾಹರಣೆಗೆ, ದಕ್ಷಿಣ ಏಷ್ಯಾ ಮುಕ್ತ ಮಾರುಕಟ್ಟೆ ಒಪ್ಪಂದವು ವಿಯೆಟ್ನಾಂನ ಮೆಣಸನ್ನು ಶ್ರೀಲಂಕಾದ ಮೂಲಕ ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ ಇದರಿಂದ ಕರ್ನಾಟಕ ಮತ್ತು ಕೇರಳದ ಮೆಣಸು ಬೆಳೆಯುವ ರೈತರ ಬದುಕು ಆತಂಕಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರದ ವ್ಯಾಪಾರ ನೀತಿಯು ಕೃಷಿ ಉತ್ಪನ್ನಗಳನ್ನು ಹೊರಗಡೆಯಿಂದ ಆಮದು ಮಾಡಿಕೊಳ್ಳುವುದಕ್ಕೆ ಒತ್ತು ನೀಡುತ್ತಿದೆ.

ಕೃಷಿ ಪತನವನ್ನು ರಾಜ್ಯಗಳು ಏಕಾಂಗಿ

ಕೃಷಿ ಪತನವನ್ನು ರಾಜ್ಯಗಳು ಏಕಾಂಗಿ

ಆದರೆ ನಮ್ಮ ಕೃಷಿ ಉತ್ಪನ್ನಗಳನ್ನು ಹೊರದೇಶಗಳಿಗೆ ರಫ್ತು ಮಾಡುವುದನ್ನು ಆ ನೀತಿ ಪ್ರೋತ್ಸಾಹಿಸುತ್ತಿಲ್ಲ. ಇದು ಅಪಾರ ಬೆಳೆ ಬೆಳೆದು ಮಾರುಕಟ್ಟೆಯ ನಿರೀಕ್ಷೆಯಲ್ಲಿರುವ ನಮ್ಮ ರೈತರ ಆದಾಯಕ್ಕೆ ದೊಡ್ಡ ಏಟು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕೇಂದ್ರದ ನೀತಿಗಳಿಂದ ಉಂಟಾದ ಕೃಷಿ ಪತನವನ್ನು ರಾಜ್ಯಗಳು ಏಕಾಂಗಿಯಾಗಿ ಸರಿಪಡಿಸಲಾರವು.

ಜಿಎಸ್ ಟಿ ಮಂಡಳಿಯ ಸರಣಿಯಲ್ಲೇ, ವ್ಯಾಪಾರ ನೀತಿಗಳ ಬಗ್ಗೆ ಚರ್ಚಿಸಲು ಮತ್ತು ನಮ್ಮ ರೈತರಿಗೆ ಅನುಕೂಲವಾಗುವಂತಹ ಕೃಷಿ ನೀತಿಗಳನ್ನು ರೂಪಿಸಲು ಒಂದು ಸ್ಥಾಯಿ ವ್ಯವಸ್ಥೆ ನಮ್ಮ ರಾಜ್ಯಗಳಿಗೂ ಬೇಕಿದೆ.

ನೀತಿ ಆಯೋಗವು ಈ ಮೊದಲಿದ್ದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು (ಎನ್‍ಡಿಸಿ) ಪರಿಣಾಮಕಾರಿಯಾಗಿ ಭಗ್ನಗೊಳಿಸಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಒಂದು ಪರಿಣಾಮಕಾರಿ ಸಮಾಲೋಚನಾ ವ್ಯವಸ್ಥೆ ರೂಪುಗೊಂಡಿಲ್ಲ. ಎನ್‍ಡಿಸಿ ಒಂದು ಮಾತಿನ ಮಂಟಪವೇ ಆಗಿದ್ದಿರಬಹುದು. ಆದರೆ, ದೇಶದ ನೀತಿಗಳನ್ನು ರೂಪಿಸುವಲ್ಲಿ ರಾಜ್ಯಗಳ ದನಿಗೂ ಅವಕಾಶ ಸಿಗುವಂತಹ ಒಂದು ವ್ಯವಸ್ಥೆ ಆದಷ್ಟು ತುರ್ತಾಗಿ ರೂಪತಳೆಯಬೇಕಿದೆ.

ಕರ್ನಾಟಕವು ಯುರೋಪ್ ಖಂಡದ ಹಲವು ದೇಶಗಳಿಗಿಂತ ದೊಡ್ಡದು. ನಮ್ಮದೇಶದ ಬಹುಪಾಲು ರಾಜ್ಯಗಳು ಅಲ್ಲಿನ ಕೆಲ ದೇಶಗಳಿಗಿಂತ ದೊಡ್ಡದಿವೆ. ಭಾರತ ಅಭಿವೃದ್ಧಿಯಾಗಬೇಕೆಂದರೆ ಇಲ್ಲಿನ ರಾಜ್ಯಗಳು ಏಳಿಗೆಯಾಗಬೇಕು. ಇವತ್ತು, ರಾಜ್ಯಗಳಿಗೆ ತಮ್ಮ ತಮ್ಮ ಸಾಮರ್ಥ್ಯ ಮತ್ತು ನೈಪುಣ್ಯತೆಯ ಆಧಾರದಲ್ಲಿ ಮುಕ್ತವಾಗಿ ಪ್ರಗತಿ ಹೊಂದಲು ಅವಕಾಶ ನೀಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.

ಸಾಮಾನ್ಯ ನಾಗರಿಕತೆ ಮತ್ತು ಒಂದು ಸಮಾನ ಗುರಿಗೆ

ಸಾಮಾನ್ಯ ನಾಗರಿಕತೆ ಮತ್ತು ಒಂದು ಸಮಾನ ಗುರಿಗೆ

ಅವುಗಳ ಅನನ್ಯತೆಯ ಪ್ರತಿಪಾದನೆಯನ್ನು ಧಕ್ಕೆ ಎಂದು ಭಾವಿಸಿಕೊಂಡು ರಾಜ್ಯಗಳ ಏಳಿಗೆಗೆ ಅಡ್ಡಿಯಾಗಬಾರದು. ತಮ್ಮದೇ ಆರ್ಥಿಕ ನೀತಿಗಳನ್ನು ನಿಭಾಯಿಸಲು, ನೆರವು ನೀಡುವವರ ವಿಶ್ವಾಸಗಳಿಸಿ ಅಂತಾರಾಷ್ಟ್ರೀಯ ವೇದಿಕೆಗಳಿಂದ ಸಹಾಯ ಪಡೆಯಲು, ಕೇಂದ್ರದ ವಿಪರೀತವೆನಿಸುವ ಅನುಮತಿಗಳಿಲ್ಲದೆ ತನ್ನ ಅನುಕೂಲಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಸುಧಾರಿಸಿಕೊಳ್ಳಲು ಮತ್ತು ತಮಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡಬೇಕಾದ ಕಾಲ ಬಂದಿದೆ.

ಈಗ ನಾವಿದನ್ನು ಒಪ್ಪಲಿ ಅಥವಾ ಬಿಡಲಿ, ವಾಸ್ತವದಲ್ಲಿ ಭಾರತದ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ಪುನರ್ ರಚಿಸಲಾಗಿದೆ. ಬಹಳಷ್ಟು ಭಾಷೆ ಮತ್ತು ಸಂಸ್ಕೃತಿಗಳು ಭಾರತದ ಅನನ್ಯತೆ ಉದಯಿಸುವುದಕ್ಕೂ ಮೊದಲೇ ತಮ್ಮ ಐತಿಹಾಸಿಕ ಛಾಪು ಮೂಡಿಸಿದಂತವು. ಆದಾಗ್ಯೂ, ನಾವು ಭಾರತೀಯರು ಒಂದು ಸಮಾನ ಇತಿಹಾಸ, ಸಾಮಾನ್ಯ ನಾಗರಿಕತೆ ಮತ್ತು ಒಂದು ಸಮಾನ ಗುರಿಗೆ ಬದ್ಧರಾಗಿದ್ದೇವೆ.

ಕನ್ನಡಿಗನಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದರೆ, ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡುವುದಿಲ್ಲ ಎಂದರ್ಥವಲ್ಲ. ಹಾಗಾಗಿ, ನಾವು ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆಯ ಬಗ್ಗೆ ಮಾತಾಡಿದಾಗ, ಹಿಂದಿ ಹೇರಿಕೆಯನ್ನು ಪ್ರತಿರೋಧಿಸಿದಾಗ ಅಥವಾ ನಮ್ಮದೇ ಸ್ವಂತ ನಾಡಧ್ವಜ ಅಳವಡಿಸಿಕೊಳ್ಳಲು ಮುಂದಾದಾಗ, ನಾವು ಒಂದು ಸದೃಢ ಭಾರತ ನಿರ್ಮಾಣದ ಹಾದಿಯಲ್ಲೇ ಇರುತ್ತೇವೆ, ಅದಕ್ಕೆ ಬೇಕಾದ ಕೊಡುಗೆಯನ್ನೂ ನೀಡುತ್ತಿರುತ್ತೇವೆ; ಸದೃಢ ಭಾರತಾಂಬೆ ತನ್ನೆಲ್ಲ ಮಕ್ಕಳ ಅನನ್ಯತೆ ಬಗ್ಗೆ ಅಚಲ ನಿಲುವನ್ನೇ ಹೊಂದಿರುತ್ತಾಳೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka prides in Kannada identity. Having established our place firmly in the union, let me raise certain issues of federalism that affect us on a day to day basis wrote CM Siddaramaiah on his Facebook wall

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more