SSLC ವಿದ್ಯಾರ್ಥಿಗಳಿಗೆ ಗಮನಕ್ಕೆ: ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆ ಬರೆದಿರುವ ಹಾಗೂ ಬರೆಯಲಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಮಾಹಿತಿ ನೀಡಿದೆ. 2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಕೇವಲ ಗ್ರೇಡ್ ನೀಡುವ ಬದಲು, ಕಡ್ಡಾಯವಾಗಿ ಅಂಕಗಳನ್ನು ನೀಡುವಂತೆ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ತೃತೀಯ ಭಾಷೆಗಳಿಗೆ ಅಂಕಗಳ ಬದಲಾಗಿ ಕೇವಲ ಗ್ರೇಡಿಂಗ್ ವ್ಯವಸ್ಥೆಯನ್ನು ಅಳವಡಿಸಿರುವುದನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ವಿದ್ಯಾರ್ಥಿನಿ ಸಹನಾ ಆರ್. ನಾಯ್ಕ್ ಸೇರಿದಂತೆ ಒಟ್ಟು ಮೂವರು ವಿದ್ಯಾರ್ಥಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠವು ಬುಧವಾರ ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ನ್ಯಾಯಾಲಯದಲ್ಲಿ ಅರ್ಜಿದಾರ ವಿದ್ಯಾರ್ಥಿಗಳ ಪರವಾಗಿ ಹಿರಿಯ ವಕೀಲರಾದ ಆರ್.ವಿ. ನಾಯ್ಕ್ ಅವರು ವಾದ ಮಂಡಿಸಿದರು. ವಿದ್ಯಾರ್ಥಿಗಳು ವರ್ಷಪೂರ್ತಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆಯುತ್ತಾರೆ. ಆದರೆ, ಪ್ರಥಮ ಮತ್ತು ದ್ವಿತೀಯ ಭಾಷೆಗಳಿಗೆ ಅಂಕಗಳನ್ನು ನೀಡಿ, ತೃತೀಯ ಭಾಷೆಯಾದ ಹಿಂದಿ ಅಥವಾ ಇತರೆ ಭಾಷೆಗಳಿಗೆ ಕೇವಲ ಗ್ರೇಡ್ ನೀಡಿದರೆ ವಿದ್ಯಾರ್ಥಿಗಳ ನೈಜ ಪ್ರತಿಭೆಗೆ ತಕ್ಕ ಬೆಲೆ ಸಿಕ್ಕಂತಾಗುವುದಿಲ್ಲ. ಅಲ್ಲದೆ, ಇದು ವಿದ್ಯಾರ್ಥಿಗಳ ಒಟ್ಟು ಶೇಕಡಾವಾರು ಅಂಕಗಳ ಮೇಲೆ ಪ್ರಭಾವ ಬೀರಲಿದ್ದು, ಅವರ ಮುಂದಿನ ಶೈಕ್ಷಣಿಕ ಭವಿಷ್ಯದ ಮೇಲೂ ಪರಿಣಾಮ ಬೀರಬಹುದು ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು.
ವಕೀಲರ ಈ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಪೀಠ, ರಾಜ್ಯ ಸರ್ಕಾರದ ಗ್ರೇಡಿಂಗ್ ಪದ್ಧತಿಯನ್ನು ಬದಿಗೊತ್ತಿದೆ. 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ಎಲ್ಲ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲಿಗೆ ನಿಖರವಾದ ಅಂಕಗಳನ್ನೇ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ, ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಹೈಕೋರ್ಟ್‌ನ ಈ ಮಹತ್ವದ ತೀರ್ಪಿನಿಂದಾಗಿ ರಾಜ್ಯದ ಲಕ್ಷಾಂತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ನಿರಾಳರಾಗಿದ್ದಾರೆ. ತೃತೀಯ ಭಾಷೆಗೂ ನಿಖರವಾದ ಅಂಕ ಸಿಗುವುದರಿಂದ ವಿದ್ಯಾರ್ಥಿಗಳ ಒಟ್ಟು ಶೇಕಡಾವಾರು ಅಂಕಗಳಲ್ಲಿ ಏರಿಕೆಯಾಗುವ ಮತ್ತು ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆಯಿದೆ. ಶಿಕ್ಷಣ ಇಲಾಖೆಯು ಜಾರಿಗೆ ತಂದಿದ್ದ ಗ್ರೇಡಿಂಗ್ ವ್ಯವಸ್ಥೆಯು ಅನೇಕ ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಅಸಮಾಧಾನ ಮೂಡಿಸಿತ್ತು. ಇದೀಗ ನ್ಯಾಯಾಲಯದ ಆದೇಶದಿಂದಾಗಿ ಅಂಕಪಟ್ಟಿಯಲ್ಲಿ ತೃತೀಯ ಭಾಷೆಗೂ ಸಮಾನವಾದ ಮಾನ್ಯತೆ ಹಾಗೂ ಅಂಕಗಳು ಲಭ್ಯವಾಗಲಿದ್ದು, ಈ ಎಲ್ಲಾ ಗೊಂದಲಗಳಿಗೆ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ.













Click it and Unblock the Notifications