ಪದವಿ ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ಸರ್ಕಾರ: ಇನ್ಮುಂದೆ ಡಿಜಿಟಲ್ ಜೊತೆಗೆ ಭೌತಿಕ ಅಂಕಪಟ್ಟಿ ವಿತರಣೆ

ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ಕೇವಲ ಡಿಜಿಟಲ್ ಅಂಕಪಟ್ಟಿ ಮಾತ್ರವಲ್ಲದೆ, ಮೊದಲಿನಂತೆ ಭೌತಿಕ ಅಂಕಪಟ್ಟಿಯನ್ನ ಸಹ ಒದಗಿಸಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಕ್ತವಾಗಿದ್ದ ಬೇಡಿಕೆಗೆ ಕೊನೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಕಳೆದ ಕೆಲವು ವರ್ಷಗಳಿಂದ ನಕಲಿ ಅಂಕಪಟ್ಟಿಗಳ ಹಾವಳಿ ತಡೆಯುವ ಉದ್ದೇಶದಿಂದ, ಕಾಗದರಹಿತ ಹಾಗೂ ಪರಿಸರ ಸ್ನೇಹಿ ಕ್ರಮವಾಗಿ ಭೌತಿಕ ಅಂಕಪಟ್ಟಿ ಮುದ್ರಣವನ್ನ ನಿಲ್ಲಿಸಲಾಗಿತ್ತು. ಇದರ ಬದಲಾಗಿ, ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನ ಜಾರಿಗೆ ತರಲಾಗಿತ್ತು. ಆದರೆ, ಈ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಹಲವಾರು ಪ್ರಾಯೋಗಿಕ ಸಮಸ್ಯೆಗಳನ್ನ ತಂದೊಡ್ಡಿತ್ತು.

Karnataka Govt to Reintroduce Physical Marks Cards for Degree Students in All 40 Universities

ಡಿಜಿಟಲ್ ಅಂಕಪಟ್ಟಿಗಳಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ

ಓದು ಮುಗಿಸಿ ಉದ್ಯೋಗ ಹುಡುಕಿಕೊಂಡು ಖಾಸಗಿ ಕಂಪನಿಗಳಿಗೆ ಹೋದಾಗ ಅಥವಾ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಿದಾಗ, ಡಿಜಿಟಲ್ ಅಂಕಪಟ್ಟಿಯನ್ನ ಅನೇಕ ಕಡೆಗಳಲ್ಲಿ ಮಾನ್ಯ ಮಾಡುತ್ತಿರಲಿಲ್ಲ. ಡಿಜಿಟಲ್ ಪ್ರತಿಯಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳ ಭೌತಿಕ ಸಹಿ ಇರದೆ, ಕೇವಲ ಡಿಜಿಟಲ್ ಸಹಿ ಇರುತ್ತಿದ್ದ ಕಾರಣ ಈ ಗೊಂದಲ ಸೃಷ್ಟಿಯಾಗಿತ್ತು.

ಭೌತಿಕ ಅಂಕಪಟ್ಟಿ ಬೇಕೆಂದರೆ ವಿದ್ಯಾರ್ಥಿಗಳು ಮತ್ತೆ ವಿವಿಗೆ ಹೋಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ ಪಡೆಯಬೇಕಾದ ಅನಿವಾರ್ಯತೆ ಇತ್ತು. ಇದು ವಿದ್ಯಾರ್ಥಿಗಳ ಸಮಯ ಹಾಗೂ ಶ್ರಮ ಎರಡನ್ನೂ ವ್ಯರ್ಥ ಮಾಡುತ್ತಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಪದವಿ ವಿದ್ಯಾರ್ಥಿಗಳು ಭೌತಿಕ ಅಂಕಪಟ್ಟಿಗಾಗಿ ಪಟ್ಟು ಹಿಡಿದಿದ್ದರು.

ಕುಲಪತಿಗಳ ಸಲಹೆ

ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಪತಿಗಳು, ಡಿಜಿಟಲ್ ಅಂಕಪಟ್ಟಿಗಳು ಕೂಡ ಸುರಕ್ಷಿತವಲ್ಲ ಎಂಬ ಆತಂಕ ವ್ಯಕ್ತಪಡಿಸಿದರು.

ಡಿಜಿಟಲ್ ಸಹಿ ಹಾಗೂ ಅಂಕಗಳನ್ನ ತಿದ್ದಿ ಅಕ್ರಮ ಎಸಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಮೊದಲಿನಂತೆ ಭೌತಿಕ ಅಂಕಪಟ್ಟಿಯನ್ನು ನೀಡುವುದೇ ಸೂಕ್ತ ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ನಕಲಿ ಅಂಕಪಟ್ಟಿ ತಡೆಗೆ ಭದ್ರತಾ ವೈಶಿಷ್ಟ್ಯ

ಕುಲಪತಿಗಳ ಸಲಹೆಯನ್ನ ಒಪ್ಪಿಕೊಂಡಿರುವ ಸಚಿವ ಬಸವರಾಜ ರಾಯರೆಡ್ಡಿ ಅವರು, ಭೌತಿಕ ಅಂಕಪಟ್ಟಿ ನೀಡುವ ಪ್ರಕ್ರಿಯೆಯನ್ನ ಮತ್ತೆ ಆರಂಭಿಸಲು ಹಸಿರು ನಿಶಾನೆ ತೋರಿದ್ದಾರೆ. ಆದರೆ, ನಕಲಿ ಅಂಕಪಟ್ಟಿ ಹಾವಳಿಯನ್ನ ತಡೆಯಲು ಮುದ್ರಿತ ಅಂಕಪಟ್ಟಿಯಲ್ಲಿ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನ ಅಳವಡಿಸಲು ನಿರ್ಧರಿಸಲಾಗಿದೆ.

ಇದಕ್ಕೆ ತಗಲುವ ಆರ್ಥಿಕ ವೆಚ್ಚ ಹಾಗೂ ತಾಂತ್ರಿಕ ಸಿದ್ಧತೆಗಳ ಕುರಿತು ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯವರಿಗೆ ಸೂಚನೆ ನೀಡಲಾಗಿದೆ.

ಈ ಹೊಸ ನಿಯಮವು 2026-27ನೇ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದ 40ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಅದರಡಿ ಬರುವ ಎಲ್ಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳ್ಳಲಿದೆ. ಇದರಿಂದ ಉದ್ಯೋಗ ಹಾಗೂ ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ರಾಜ್ಯದ ಲಕ್ಷಾಂತರ ಯುವಜನತೆಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+