Microfinance: ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರದಿಂದ ಹೊಸ ಅಸ್ತ್ರ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರವು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಆರ್‌ಬಿಐ ನಿಯಮಾವಳಿ ಉಲ್ಲಂಘಿಸುವ, ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಜನರು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ರಾಜ್ಯದ ಜನರಲ್ಲಿ ವಿನಂತಿಸುತ್ತೇನೆ. ಮೈಕ್ರೋ ಫೈನಾನ್ಸ್‌ನಿಂದ ಜನರಿಗಾಗುತ್ತಿರುವ ತೊಂದರೆ ನಮ್ಮ ಗಮನದಲ್ಲಿದೆ. ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೆ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ ಎಂದು ಗುಡುಗಿದ್ದಾರೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ 28ರಿಂದ ಶೇ 30ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಿದ್ದೇವೆ. ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮೈಕ್ರೋ ಫೈನಾನ್ಸ್‌ನ ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಸದ್ಯದಲ್ಲೇ ಸುಗ್ರೀವಾಜ್ಞೆಯನ್ನು ಹೊರಡಿಸಲಿದೆ. ಕಿರುಕುಳ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅಭಯ ನೀಡಿದ್ದಾರೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಿ ಸಂದರ್ಭದಲ್ಲಿ ನೀಡುತ್ತಿರುವ ಕಿರುಕುಳಕ್ಕೆ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಕಡಿವಾಣ ಹಾಕಲು ನಿರ್ಧರಿಸಿದ್ದು, ಇದರಲ್ಲಿ ಕಠಿಣ ಹಾಗೂ ಸಂಪೂರ್ಣ ಕಾನೂನುಬದ್ಧವಾದ ನಿಯಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಕಾನೂನು ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಹಾಗೂ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ನಿನ್ನೆ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬಲಿಷ್ಠ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿ ಮಾಡಲಾಗುವುದು. ಈ ಕುರಿತು ಕಾನೂನು ಇಲಾಖೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡುವುದಾಗಿ ತಿಳಿಸಿದ್ದರು.
ಅಲ್ಲದೆ, ಕಾಯ್ದೆ ಸಂಪೂರ್ಣ ಸಂವಿಧಾನ ಬದ್ಧವಾಗಿದ್ದು, ಯಾವುದೇ ಲೋಪದೋಷಗಳನ್ನು ಹೊಂದಿರಬಾರದು. ಸಾಲಗಾರರು ಎದುರಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಸಾಲ ನೀಡಿದವರು ಬಲವಂತದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಬಲಿಷ್ಠ ಕಾಯ್ದೆ ರಚಿಸಲಾಗುವುದು. ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಅಮಾನವೀಯವಾಗಿ ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನುರಹಿತ ಪ್ರಕರಣ ದಾಖಲು ಸೇರಿದಂತೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಸಿಗುವಂತೆ ಕಾನೂನು ರೂಪಿಸಲಾಗುವುದು ಎಂದು ವಿವರಿಸಿದ್ದರು.
ನೋಂದಣಿಯಾಗದ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಲು ಕಠಿಣ ಕಾನೂನು ಜಾರಿ ಮಾಡಲಾಗುವುದು. ಪ್ರಸ್ತುತವಿರುವ ಕಾನೂನಿನಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ನಿಯಂತ್ರಿಸಲು ಹಲವು ಅವಕಾಶಗಳಿದ್ದು, ತಾತ್ಕಾಲಿಕವಾಗಿ ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು ಸಂತ್ರಸ್ತರು ದೂರು ದಾಖಲು ಮಾಡುವ ತನಕ ಕಾಯದೆ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದರು.












Click it and Unblock the Notifications