B.Y.Vijayendra: ಯಾವ ಮುಖ ಇಟ್ಕೊಂಡು ಗ್ಯಾರಂಟಿಗಳ ಜಂಬ ಕೊಚ್ಚಿಕೊಳ್ತೀರಿ?
ಕರ್ನಾಟಕ ಸರ್ಕಾರವು ನಾಲ್ಕೂ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಏರಿಸಿದೆ. ಇದಕ್ಕೆ ಬಿಜೆಪಿ ನಾಯಕರಿಂದ ಭಾರಿ ವಿರೋಧ ಕಂಡುಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಹೊರೆ ಖಚಿತ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಯಾವ ಮುಖವಿಟ್ಟುಕೊಂಡು ನೀವು ರಾಜ್ಯದ ಜನತೆಗೆ ಪಂಚಭಾಗ್ಯ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತೀರಿ? ಶಕ್ತಿ ಯೋಜನೆಗೆ ಹಣ ಒದಗಿಸಲು ವಿಫಲವಾಗಿರುವ ನೀವು, ಸಾರಿಗೆ ಸಂಸ್ಥೆಯು ನಷ್ಟದ ಹಾದಿಯನ್ನು ತುಳಿಯಲು ಕಾರಣರಾಗಿದ್ದೀರಿ ಎಂದು ಆರೋಪಿಸಿದ್ದಾರೆ. ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಹೊರೆ ಖಚಿತ ಎಂಬುದನ್ನು ಇದೀಗ ಶೇ 15ರಷ್ಟು ಬಸ್ ಪ್ರಯಾಣ ದರ ಏರಿಸುವ ಮೂಲಕ ಸಾರಿಗೆ ವ್ಯವಸ್ಥೆ ಆಶ್ರಯಿಸಿರುವ ಜನರಿಗೆ ಬರೆ ಎಳೆದಿದ್ದೀರಿ ಎಂದಿದ್ದಾರೆ.

ಶಕ್ತಿ ಯೋಜನೆ ಹೇಗಾಗಿದೆ ಎಂದರೆ ವಾಣಿಜ್ಯ ಉತ್ಪನ್ನಗಳ ಮಾರಾಟದ ಆಕರ್ಷಣೆಗೆ ಮಳಿಗೆಗಳಲ್ಲಿ Buy-1 Get-1 (ಒಂದು ಖರೀದಿಸಿದರೆ-ಒಂದು ಉಚಿತ) ಬೋರ್ಡ್ ಪ್ರದರ್ಶಿಸುವ ಮಾದರಿಯಲ್ಲಿ ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿದ್ದೀರಿ ಎಂದು ಕಿಡಿಕಾರಿದ್ದಾರೆ. ಶೇ.15 ರಷ್ಟು ಸಾರಿಗೆ ದರ ಹೆಚ್ಚಳದ ಕರ್ನಾಟಕ ಸರ್ಕಾರದ ನಿರ್ಧಾರ ಅವೈಜ್ಞಾನಿಕ ಹಾಗೂ ಜನವಿರೋಧಿಯಾಗಿದ್ದು ಇದನ್ನು ವಿರೋಧಿಸಿ ರಾಜ್ಯ ಬಿಜೆಪಿಯು ಜನರ ಪರ ಧ್ವನಿ ಎತ್ತಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಬಸ್ ದರವನ್ನು ಶೇ 15ರಷ್ಟು ಏರಿಕೆ ಮಾಡಿದೆ. ಸಿಎಂ ಸಿದ್ದರಾಮಯ್ಯನವರೇ, ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದೀರಲ್ಲ? ನಿಮ್ಮ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆತ್ತಬೇಕು? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಆಕ್ರೋಶ ಹೊರಹಾಕಿದ್ದಾರೆ.

ಅಸಮರ್ಥ ಸಿಎಂ ಸಿದ್ದರಾಮಯ್ಯ ಅವರ ದುರಾಡಳಿತದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಅನಿವಾರ್ಯ, ಆಸ್ತಿ ತೆರಿಗೆ ಏರಿಕೆ ಅನಿವಾರ್ಯ, ಮುದ್ರಾಂಕ ದರ ಏರಿಕೆ ಅನಿವಾರ್ಯ, ನೀರಿನ ದರ ಏರಿಕೆ ಅನಿವಾರ್ಯ, ಜನನ ಮರಣ ಪ್ರಮಾಣಪತ್ರ ಶುಲ್ಕ ಏರಿಕೆ ಅನಿವಾರ್ಯ, ಹಾಲಿನ ದರ ಏರಿಕೆ ಅನಿವಾರ್ಯ, ಬಸ್ ದರ ಏರಿಕೆ ಅನಿವಾರ್ಯ, ಶೀಘ್ರದಲ್ಲೇ ಕನ್ನಡಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವುದೂ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಕನ್ನಡಿಗರ ಜೇಬಿಗೆ ಮತ್ತೊಮ್ಮೆ ಕನ್ನ ಹಾಕಿದೆ ಪಿಕ್ ಪಾಕೆಟ್ ಕಾಂಗ್ರೆಸ್ ಸರ್ಕಾರ. ಬಸ್ ಪ್ರಯಾಣದ ದರವನ್ನು ಶೇ.15ರಷ್ಟು ಏರಿಸಿರುವುದು ಹೊಸ ವರ್ಷದ ಆರಂಭದಲ್ಲಿ ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ. ಸಿಎಂ ಸಿದ್ದರಾಮಯ್ಯ ಅವರೇ, ಎಲ್ಲ ವಸ್ತುಗಳ ದರವನ್ನು ಏರಿಸುವುದೇ ನಿಮ್ಮ ಅಸಲಿ ಕರ್ನಾಟಕ ಮಾಡೆಲ್ ಆಗಿದೆಯೇ? ಮಹಾನ್ ಸುಳ್ಳುಗಾರ ರಾಮಲಿಂಗಾರೆಡ್ಡಿ ಅವರೇ, ಸಾರಿಗೆ ಸಂಸ್ಥೆಗಳು ಹೆಚ್ಚಿನ ಲಾಭದಲ್ಲಿವೆ ಎಂದಾದ ಮೇಲೆ ಬಸ್ ಪ್ರಯಾಣ ದರವನ್ನು ಏರಿಸಿರುವುದು ಯಾವ ಪುರುಷಾರ್ಥಕ್ಕಾಗಿ? ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications