ಮಕ್ಕಳಾಗದ ದಂಪತಿಗೆ ಸರ್ಕಾರದಿಂದ ಗುಡ್‌ನ್ಯೂಸ್: ಇನ್ಮುಂದೆ ಆಯುಷ್ಮಾನ್ ಭಾರತ್ ಯೋಜನೆಯಡಿ IVF ಚಿಕಿತ್ಸೆ ಲಭ್ಯ
ಬೆಂಗಳೂರು: ತಾಯ್ತನದ ಕನಸು ಹೊತ್ತು, ಮಕ್ಕಳಾಗದೆ ವರ್ಷಗಟ್ಟಲೆ ಕಣ್ಣೀರಿಡುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ದಂಪತಿಗಳಿಗೆ ರಾಜ್ಯ ಸರ್ಕಾರವು ಮಹತ್ವದ ಸಿಹಿಸುದ್ದಿ ನೀಡಿದೆ. ಹಣದ ಕೊರತೆಯಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚದ ದುಬಾರಿ ಚಿಕಿತ್ಸೆ ಪಡೆಯಲಾಗದೆ ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಪೋಷಕರಿಗೆ ಆಸರೆಯಾಗಲು ವಿರ್ಧರಿಸಿದೆ.
ಹಾಗಾಗಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ' ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ' (AB-PMJAY-CM's ArK) ವಿಮಾ ಯೋಜನೆಯಡಿ ಐವಿಎಫ್ ಚಿಕಿತ್ಸೆಯನ್ನ ಸಹ ಸೇರ್ಪಡೆಗೊಳಿಸಲಾಗಿದೆ.

ಆಯುಷ್ಮಾನ್ ಭಾರತ್ ಐವಿಎಫ್ ಯೋಜನೆ
ಇತ್ತೀಚಿನ ದಿನಗಳಲ್ಲಿ ತಡವಾಗಿ ಮದುವೆಯಾಗುವುದು, ಕೆಲಸದ ತೀವ್ರ ಒತ್ತಡ, ಬದಲಾದ ಜೀವನಶೈಲಿ ಹಾಗೂ ಆರ್ಥಿಕ ಸಂಕಷ್ಟಗಳಂತಹ ನಾನಾ ಕಾರಣಗಳಿಂದ ಶೇ 20% ರಿಂದ 25% ರಷ್ಟು ಮಹಿಳೆಯರು ಗರ್ಭಧಾರಣೆ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಮಕ್ಕಳನ್ನ ಪಡೆಯಲು ಸಾಕಷ್ಟು ಪೋಷಕರು ಐವಿಎಫ್ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ.
ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡ. ಇಷ್ಟು ದೊಡ್ಡ ಹೊರೆ ಹೋರಲು ಬಡ ಕುಟುಂಬಗಳಿಗೆ ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಡ ತಾಯಂದಿರ ನೋವಿಗೆ ಸ್ಪಂದಿಸಿರುವ ಸರ್ಕಾರ, ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಐವಿಎಫ್ ಯೋಜನೆ ಅಡಿ ಚಿಕಿತ್ಸೆ ಪಡೆಯಲು 1,20,000 ರೂಪಾಯಿಯವರೆಗೆ ವಿಮಾ ಮೊತ್ತದ ಕ್ಯಾಪಿಂಗ್ ನಿಗದಿಪಡಿಸಿದೆ. ಆ ಮೂಲಕ ದುಬಾರಿ ಚಿಕಿತ್ಸೆಯನ್ನು ಬಡವರಿಗೂ ಕೈಗೆಟುಕುವಂತೆ ಮಾಡಲಾಗಿದೆ.
ಆರಂಭಿಕ ಹಂತದಲ್ಲಿ 120 ಕುಟುಂಬಗಳಿಗೆ ಉಚಿತ ಐವಿಎಫ್ ಚಿಕಿತ್ಸೆಯ ಲಾಭ
ವಿಧಾನ ಪರಿಷತ್ತಿನಲ್ಲಿ ಎಂಎಲ್‌ಸಿ ಡಾ. ಧನಂಜಯ್ ಸರ್ಜಿ ಅವರು ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಈ ಯೋಜನೆಯ ವಿವರಗಳನ್ನು ನೀಡಿದ್ದಾರೆ. ಈ ಉಚಿತ ಐವಿಎಫ್ ಚಿಕಿತ್ಸೆ ಕರ್ನಾಟಕ ಯೋಜನೆಯು ಪ್ರಾಯೋಗಿಕವಾಗಿ ಒಂದು ವರ್ಷದ ಅವಧಿಗೆ ಜಾರಿಗೆ ಬರಲಿದೆ.
ಆರಂಭಿಕ ಹಂತದಲ್ಲಿ, ಆದ್ಯತಾ ಕುಟುಂಬ ಹಾಗೂ ಬಡತನ ರೇಖೆಗಿಂತ ಕೆಳಗಿರುವ (BPL) 120 ಕಾರ್ಡ್‌ದಾರರಿಗೆ ಈ ಸೌಲಭ್ಯವನ್ನ ಒದಗಿಸಲಾಗುವುದು. ಐವಿಎಫ್, ಐಸಿಎಸ್‌ಐ ಮತ್ತು ಫ್ರೋಜನ್ ಎಂಬ್ರಿಯೊ ಟ್ರಾನ್ಸ್‌ಫರ್ ಮುಂತಾದ ಸುಧಾರಿತ ಎಆರ್‌ಟಿ ತಂತ್ರಜ್ಞಾನಗಳು ಈ ವಿಮಾ ಪ್ಯಾಕೇಜ್ ವ್ಯಾಪ್ತಿಯಲ್ಲಿ ಲಭ್ಯವಾಗಲಿವೆ.
ಕರ್ನಾಟಕ ಆರೋಗ್ಯ ಇಲಾಖೆ ಕೈಗೊಂಡ ಈ ಐವಿಎಫ್ ಚಿಕಿತ್ಸೆ ಎಂದರೇನು?
ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಾಗದ ದಂಪತಿಗಳಿಗೆ ವೈದ್ಯಕೀಯ ತಂತ್ರಜ್ಞಾನದ ಮೂಲಕ ನೆರವಾಗುವ ಪ್ರಕ್ರಿಯೆಯೇ ಐವಿಎಫ್. ಇದರಲ್ಲಿ ಮಹಿಳೆಯ ದೇಹದಿಂದ ಅಂಡಾಣು ಹಾಗೂ ಪುರುಷನಿಂದ ವೀರ್ಯಾಣುವನ್ನ ಪಡೆದು, ಲ್ಯಾಬ್‌ನಲ್ಲಿ ದೇಹದ ಹೊರಗೆ ಫಲೀಕರಣ ಮಾಡಲಾಗುತ್ತದೆ. ಭ್ರೂಣ ರೂಪುಗೊಂಡ ನಂತರ ಅದನ್ನು ಮತ್ತೆ ಮಹಿಳೆಯ ಗರ್ಭಾಶಯಕ್ಕೆ ಸೇರಿಸಿ ನೈಸರ್ಗಿಕವಾಗಿ ಮಗು ಬೆಳೆಯುವಂತೆ ಮಾಡಲಾಗುತ್ತದೆ.
ಇದು ಅತ್ಯಂತ ದುಬಾರಿ ಪ್ರಕ್ರಿಯೆಯಾಗಿದ್ದರೂ, ಕರ್ನಾಟಕ ಆರೋಗ್ಯ ಇಲಾಖೆ ಕೈಗೊಂಡ ಈ ಕ್ರಾಂತಿಕಾರಿ ನಿರ್ಧಾರದಿಂದಾಗಿ, ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಅತ್ಯಾಧುನಿಕ ಚಿಕಿತ್ಸೆ ಇನ್ಮುಂದೆ ಬಡ ಕುಟುಂಬಗಳಿಗೂ ಸಿಗಲಿದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಸಾವಿರಾರು ದಂಪತಿಯ ಬಾಳಿನಲ್ಲಿ ಸರ್ಕಾರ ಹೊಸ ಭರವಸೆ ಮೂಡಿಸಿದೆ.


Click it and Unblock the Notifications
