ಮೇ 10ರಂದು ಚುನಾವಣೆ; ಮತದಾರರೇ ದಯವಿಟ್ಟು ಗಮನಿಸಿ
ಬೆಂಗಳೂರು, ಮೇ 09; ಕರ್ನಾಟಕ ವಿಧಾನಸಭೆ ಚುಣಾವಣೆ 2023ರ ಮತದಾನ ಮೇ 10ರ ಬುಧವಾರ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಚುನಾವಣಾ ಆಯೋಗ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತಗಟ್ಟೆಗಳತ್ತ ತೆರಳುತ್ತಿದ್ದಾರೆ.
ಎಲ್ಲ ಅರ್ಹ ಮತದಾರರು ಬುಧವಾರ ತಪ್ಪದೇ ಮತದಾನ ಮಾಡಬೇಕು ಎಂದು ಚುನಾವಣಾ ಆಯೋಗ ಕರೆ ನೀಡಿದೆ. ಚುನಾವಣಾ ಆಯೋಗ ಮತದಾರರೇ ದಯವಿಟ್ಟು ಗಮನಿಸಿ ಎಂದು ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ. ಮತಗಟ್ಟೆಗೆ ತೆರಳುವ ಜನರಿಗೆ ಸಹಾಯಕವಾಗುವ ಅಂಶಗಳನ್ನು ಇದರಲ್ಲಿ ವಿವರಿಸಲಾಗಿದೆ.

ಕರ್ನಾಟಕದ ಒಟ್ಟು ಮತದಾರರು 5,30,85,566. ಪುರುಷರು 2,66,82,156. ಮಹಿಳೆಯರು 2,63,98,483. ಇತರೆ 4,927. ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರು 11,71,558. ಪುರುಷರು 6,45,140, ಮಹಿಳೆಯರು 5,26,237, ಇತರೆ 181.
ಮತದಾರರೇ ದಯವಿಟ್ಟು ಗಮನಿಸಿ
* ಮತದಾನಕ್ಕಾಗಿ ಮತಗಟ್ಟೆಗೆ ಹೋಗುವಾಗ ನಿಮ್ಮ ಗುರುತಿನ ಚೀಟಿ ತಪ್ಪದೇ ಜೊತೆಗಿರಲಿ
* ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಹಾಕಲು ನಿಮ್ಮಆಯ್ಕೆಯ ಪಕ್ಷ/ ಅಭ್ಯರ್ಥಿ ಚಿಹ್ನೆ ಪಕ್ಕದ ನೀಲಿ ಬಟನ್ ಒತ್ತಬೇಕು.
* ಮತಯಂತ್ರಕ್ಕೆ ಜೋಡಿಸಿರುವ ವಿವಿಪ್ಯಾಟ್ ಮೂಲಕ ನೀವು ಯಾವ ಪಕ್ಷ/ ಅಭ್ಯರ್ಥಿಗೆ ಮತ ಹಾಕಿರುವ ಬಗ್ಗೆ ಮುದ್ರಿತ ಕಾಗದದಲ್ಲಿ ನೀವು ನೋಡಬಹುದಾಗಿದೆ.
* ವಿಕಲಚೇತನ ಮತದಾರರು ಮತ ಚಲಾವಣೆ ಮಾಡಲು ಎಲ್ಲಾ ಅಗತ್ಯ ನೆರವು ನೀಡಲಾಗುತ್ತದೆ.
* ದೃಷ್ಟಿ ಹೀನರು ಮತ್ತು ವಿಕಲಚೇತನ ಮತದಾರರು ತಮ್ಮ ಜೊತೆಗಾರ ನೆರವಿನಿಂದ ಮತ ಚಲಾಯಿಸಬಹುದಾಗಿದೆ.
* ಮತದಾನ, ಮತದಾರರ ಅಭಿಪ್ರಾಯಕ್ಕೆ ಒದಗಿಸುವ ಅಮೂಲ್ಯ ಅವಕಾಶ, ತಪ್ಪದೇ ಮತ ಚಲಾಯಿಸಿ.
* ಮತದಾನ ಜವಾಬ್ದಾರಿಯುತ ನಾಗರಿಕರ ಕರ್ತವ್ಯ
ಸಾರ್ವತ್ರಿಕ ರಜೆ ಘೋಷಣೆ; ಮೇ 10ರ ಬುಧವಾರ ಮತದಾನ ನಡೆಯುವುದರಿಂದ ಮತದಾನ ಮಾಡಲು ಅನುಕೂಲವಾಗುವಂತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಆಯಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಖಾಸಗಿ ಸಂಸ್ಥೆಗಳಿಗೆ ತುರ್ತು ಸೇವೆಗಳನ್ನು ಹೊರತುಪಡಿಸಿ ಸರ್ಕಾರವು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿರುತ್ತದೆ.
ಮತದಾನ ಸಂರ್ಭದಲ್ಲಿ ಕಾನೂನು ಮತ್ತು ಸುವ್ಯಸ್ಥೆ ಕಾಪಾಡಲು ಮೇ 8ರ ಸಾಯಂಕಾಲ 6 ಗಂಟೆಯಿಂದ ಮೇ 10ರ ಸಾಯಂಕಾಲ 6 ಗಂಟೆಯವರೆಗೆ ಹಾಗೂ ಮೇ 13ರಂದು ಬೆಳಿಗ್ಗೆ 6 ಗಂಟೆಯಿಂದ ಮೇ 14ರ ಬೆಳಗ್ಗೆ 6 ಗಂಟೆಯವರೆಗೆ ಸಿ. ಆರ್. ಪಿ. ಸಿ. 1973ರ ಕಲಂ 144ರ ಅಡಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.












Click it and Unblock the Notifications