ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕರ ಕಳ್ಳಾಟ ಬಟಾಬಯಲು: 249 ಮಂದಿಯ Phd ನಕಲಿ, ಕ್ರಿಮಿನಲ್ ಕೇಸ್ ಸಂಕಷ್ಟ

ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ದೊಡ್ಡ ಕಳ್ಳಾಟವೊಂದು ರಾಜ್ಯದ ಜನಗಳ ಮುಂದೆ ಬಯಲಾಗಿದೆ ನೋಡಿ. ಕೆಲಸವನ್ನ ಉಳಿಸಿಕೊಳ್ಳುವ ಉದ್ದೇಶದಿಂದ ರಾಜ್ಯಾದ್ಯಂತ ಬರೋಬ್ಬರಿ 249 ಅತಿಥಿ ಉಪನ್ಯಾಸಕರು ತಮ್ಮ ನಕಲಿ ಪಿಎಚ್.ಡಿ ಪ್ರಮಾಣಪತ್ರವನ್ನ ಸಲ್ಲಿಸಿರುವ ವಿಷಯ ಕಾಲೇಜು ಮಟ್ಟದ ಸಮಿತಿಯ ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದೆ.

ಈ ಅಕ್ರಮವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ, ನಕಲಿ ದಾಖಲೆ ನೀಡಿದವರ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿದೆ. ಇದರ ಜೊತೆಗೆ, ಮುಂಬರುವ ಶೈಕ್ಷಣಿಕ ವರ್ಷದ ಯಾವುದೇ ನೇಮಕಾತಿ ಪ್ರಕ್ರಿಯೆಗಳಲ್ಲಿ ಇವರು ಭಾಗವಹಿಸದಂತೆ ಶಾಶ್ವತ ನಿರ್ಬಂಧ ವಿಧಿಸಲು ಇಲಾಖೆ ಮುಂದಾಗಿದೆ.

Karnataka

ನಕಲಿ ಪಿಎಚ್.ಡಿ ಪತ್ತೆ ಮಾಡಿದ್ದ ಹೇಗೆ?

ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ಅಂದರೆ ಯುಜಿಸಿ ನಿಯಮಗಳ ಪ್ರಕಾರ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಠ ಮಾಡಲು ಅಭ್ಯರ್ಥಿಗಳು ಕಡ್ಡಾಯವಾಗಿ ಆಯಾ ವಿಷಯಗಳಲ್ಲಿ ನೆಟ್, ಕೆ-ಸೆಟ್ ಅಥವಾ ಪಿಎಚ್.ಡಿ ಪದವಿಯನ್ನ ಪಡೆದಿರಬೇಕು. ಹಿಂದಿನ ವರ್ಷದ ನೇಮಕಾತಿ ಪ್ರಕ್ರಿಯೆಯಲ್ಲಿ ಕಾಲೇಜುಗಳಲ್ಲಿನ ಕಾರ್ಯಭಾರಕ್ಕೆ ಅನುಗುಣವಾಗಿ ಆನ್‌ಲೈನ್ ಕೌನ್ಸೆಲಿಂಗ್ ಮಾಡಿ ಉಪನ್ಯಾಸಕರನ್ನ ಆಯ್ಕೆ ಮಾಡಲಾಗಿತ್ತು.

ಈ ವೇಳೆ, ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಸಲ್ಲಿಸಿದ್ದ ವಿದ್ಯಾರ್ಹತೆ ಮತ್ತು ಪ್ರಮಾಣಪತ್ರಗಳ ನೈಜತೆಯನ್ನ ಆಯಾ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳಿಂದ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆಯು ಎಲ್ಲ ಪ್ರಾಂಶುಪಾಲರಿಗೆ ಸೂಚನೆ ನೀಡಿತ್ತು. 2025-26ನೇ ಸಾಲಿನಲ್ಲಿ ನೇಮಕಗೊಂಡವರ ದಾಖಲೆಗಳನ್ನ ಈ ಮಾನದಂಡದ ಅನ್ವಯ ಪರಿಶೀಲಿಸಿದಾಗ, ಬರೋಬ್ಬರಿ 249 ಮಂದಿ ತಮ್ಮ ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿರುವುದು ಅಧಿಕೃತವಾಗಿ ಬಹಿರಂಗಗೊಂಡಿದೆ.

ಕಲಬುರಗಿ ವಿಭಾಗದಲ್ಲಿ ಅತಿ ಹೆಚ್ಚು ನಕಲಿ ಪ್ರಮಾಣಪತ್ರ

ರಾಜ್ಯಾದ್ಯಂತ ಒಟ್ಟು 10,335 ಅತಿಥಿ ಉಪನ್ಯಾಸಕರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಇಲಾಖೆಯು ಪ್ರದೇಶವಾರು ನಕಲಿ ಪ್ರಮಾಣಪತ್ರ ಹೊಂದಿರುವವರ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಪಟ್ಟಿಯ ಪ್ರಕಾರ, 249 ನಕಲಿ ಪಿಎಚ್.ಡಿ ದಾರರ ಪೈಕಿ 153 ಮಂದಿ ಕೇವಲ ಕಲಬುರಗಿ ವಿಭಾಗಕ್ಕೆ ಸೇರಿದವರೇ ಆಗಿದ್ದಾರೆ. ಇನ್ನುಳಿದಂತೆ ಧಾರವಾಡ ವಿಭಾಗದಲ್ಲಿ 31, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 24, ಮೈಸೂರಿನಲ್ಲಿ 22, ಶಿವಮೊಗ್ಗದಲ್ಲಿ 17 ಹಾಗೂ ಮಂಗಳೂರು ವಿಭಾಗದಲ್ಲಿ 2 ನಕಲಿ ಪ್ರಕರಣಗಳು ಪತ್ತೆಯಾಗಿವೆ.

ಇನ್ನೂ, ಕಾಲೇಜುವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಯಾದಗಿರಿ ಜಿಲ್ಲೆಯ ಶಹಾಪುರ ಸರ್ಕಾರಿ ಪದವಿ ಕಾಲೇಜು ಒಂದರಲ್ಲೇ ಅತಿ ಹೆಚ್ಚು ಅಂದರೆ 20 ಮಂದಿ ನಕಲಿ ಪಿಎಚ್.ಡಿ ಪದವೀಧರರು ಪತ್ತೆಯಾಗಿದ್ದಾರೆ. ಬೀದರ್ ಪ್ರಥಮ ದರ್ಜೆ ಕಾಲೇಜಿನಲ್ಲಿ 19, ಕಲಬುರಗಿ ಮಹಿಳಾ ಕಾಲೇಜಿನಲ್ಲಿ 13 ಹಾಗೂ ಕೊಪ್ಪಳ ಮಹಿಳಾ ಕಾಲೇಜಿನಲ್ಲಿ 7 ಮಂದಿ ನಕಲಿ ದಾಖಲೆ ಸಲ್ಲಿಸಿ ಕೆಲಸ ಪಡೆದುಕೊಂಡಿರುವುದು ಗೊತ್ತಾಗಿದೆ.

ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ

ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ನಕಲಿ ದಾಖಲೆಗಳನ್ನ ಸೃಷ್ಟಿಸಿದ ಈ ಅತಿಥಿ ಉಪನ್ಯಾಸಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಕಲಿ ದಾಖಲೆ ನೀಡಿರುವ ಅಭ್ಯರ್ಥಿಗಳ ವಿರುದ್ಧ ಕೂಡಲೇ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಒಂದು ವಾರದೊಳಗಾಗಿ ಈ ಕುರಿತ ವರದಿಯನ್ನ ಇಲಾಖೆಯ ಆಯುಕ್ತರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇಷ್ಟೇ ಅಲ್ಲದೇ, ಮುಂಬರುವ ದಿನಗಳಲ್ಲಿ ಇವರನ್ನು ನೇಮಕಾತಿಯಿಂದ ಶಾಶ್ವತವಾಗಿ ಹೊರಗಿಡಲು ತೀರ್ಮಾನಿಸಲಾಗಿದೆ.

ಶಿಸ್ತು ಕ್ರಮದಿಂದ ತಪ್ಪಿಸಿಕೊಳ್ಳಲು ಕಳ್ಳಾಟ

ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಪ್ರಸ್ತುತ ಪತ್ತೆಯಾಗಿರುವ 249 ಮಂದಿಯ ಜೊತೆಗೆ ಇನ್ನೂ ಹಲವಾರು ಅತಿಥಿ ಉಪನ್ಯಾಸಕರು ನಕಲಿ ಪಿಎಚ್.ಡಿ ಪ್ರಮಾಣಪತ್ರವನ್ನ ಹೊಂದಿದ್ದಾರೆ ಎನ್ನುವ ಅನುಮಾನ ಇದೆ. ಕಾಲೇಜು ಮಟ್ಟದಲ್ಲಿ ನಡೆಯುತ್ತಿರುವ ಈ ಪ್ರಮಾಣಪತ್ರಗಳ ಪರಿಶೀಲನಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ, ಹಲವು ಉಪನ್ಯಾಸಕರು ದಿಢೀರನೆ ಅನಾರೋಗ್ಯದ ಕಾರಣ ನೀಡಿ ರಜೆ ಹಾಕಿದ್ದಾರೆ.

ಇನ್ನು ಕೆಲವರು ಈ ವರ್ಷದ ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸಿಲ್ಲ. ಆದರೆ, ರಜೆಯ ಮೇಲೆ ತೆರಳಿರುವ ಇಂತಹ ಅನುಮಾನಾಸ್ಪದ ಅತಿಥಿ ಉಪನ್ಯಾಸಕರ ಪಟ್ಟಿಯನ್ನ ಪರಿಶೀಲಿಸುವಲ್ಲಿ ಕೆಲವು ಕಾಲೇಜುಗಳ ಪ್ರಾಂಶುಪಾಲರು ಗಂಭೀರತೆ ತೋರಿಲ್ಲ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+