Krishi Bhagya Scheme: ಮತ್ತೆ ಕೃಷಿ ಭಾಗ್ಯ ಯೋಜನೆ ಜಾರಿಗೆ ಸರ್ಕಾರ ತೀರ್ಮಾನ; ರೈತರಿಗೇನು ಅನುಕೂಲ?
ಬೆಂಗಳೂರು, ನವೆಂಬರ್ 10: ರಾಜ್ಯ ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಕೃಷಿ ಭಾಗ್ಯ ಯೋಜನೆಯನ್ನ ಮತ್ತೆ ಪ್ರಾರಂಭಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಹೌದು, ಸಚಿವ ಸಂಪುಟ ಸಭೆಯ ಬಳಿಕ ಸಚಿವ ಹೆಚ್‌ಕೆ ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾಹಿತಿ ನೀಡಿದ ಅವರು, 2023-24ನೇ ಸಾಲಿನಡಿ 24 ಜಿಲ್ಲೆಗಳ 106 ತಾಲೂಕಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಸುಸ್ಥಿರ ಕೃಷಿಗೆ ಒತ್ತು ನೀಡುವ ಕೃಷಿ ಭಾಗ್ಯ ಯೋಜನೆ ಜಾರಿಗೆ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಕೃಷಿ ಭಾಗ್ಯ ಯೋಜನೆಯನ್ನ ಈ ಹಿಂದೆ 2013-2018 ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನ ರೈತರ ಅನುಕೂಲಕ್ಕಾಗಿ ಜಾರಿ ಮಾಡಲಾಗಿದ್ದ ಈ ಮಹತ್ವದ ಯೋಜನೆಯನ್ನು ಮತ್ತೆ ಜಾರಿ ಮಾಡಿ, ಕೃಷಿ ಹೊಂಡ ಹಾಗೂ ಇತರ ಘಟಕಗಳನ್ನು ಒಳಗೊಂಡು ಪ್ಯಾಕೇಜ್ ಮಾದರಿಯಲ್ಲಿಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಸಂಪುಟ ನಿರ್ಧರಿಸಿದೆ.
ಏನಿದು ಕೃಷಿ ಭಾಗ್ಯ ಯೋಜನೆ?
ಹೌದು, ಈ ವರ್ಷ ಆರಂಭದಿಂದಲೂ ಮಳೆಯಾಗದ ಹಿನ್ನಲೆ ರೈತರ ಬೆಳೆ ಹಾನಿಯಾಗಿದ್ದು, ರೈತರಿಗಾಗಿ ಅನುಕೂಲವಾಗಲೆಂದು ಈ ಯೋಜನೆ ಮತ್ತೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಮಳೆ ನೀರಿನ ಸಮರ್ಪಕ ನಿರ್ವಹಣೆ ಮತ್ತು ಉಪಯುಕ್ತ ಬಳಕೆ ಮೂಲಕ ಉತ್ಪಾದಕತೆ ಹೆಚ್ಚಿಸುವುದು, ಕೃಷಿ ಆದಾಯ ಹೆಚ್ಚಿಸುವುದು ಹಾಗೂ ಮಳೆ ನೀರು ವ್ಯರ್ಥವಾಗದಂತೆ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ರಕ್ಷಣಾತ್ಮಕ ನೀರಾವರಿ ಸೌಲಭ್ಯ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇನ್ನು ಕೃಷಿ ಭಾಗ್ಯ ಯೋಜನೆಯಲ್ಲಿ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣೆಗೆ ಹೊಂಡ ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಅಳವಡಿಸುವುದು, ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್ ಪೂರೈಕೆ, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಘಟಕ ಪೂರೈಕೆ ಹಾಗೂ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣವನ್ನು ಈ ಕೃಷಿ ಯೋಜನೆ ಒಳಗೊಂಡಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈಗಾಗಲೇ ಸಂಪುಟದಲ್ಲಿ ಚರ್ಚೆಯಾದಂತೆ ರಾಜ್ಯದ 5 ಒಣಹವೆ ಹವಾಮಾನ ವಲಯಗಳಲ್ಲಿ ತಾಲೂಕುವಾರು 152 ಕೃಷಿ ಹೊಂಡಗಳ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದ್ದು, ಪ್ರತಿ ತಾಲೂಕಿಗೆ 1.85 ಕೋಟಿ ರೂ.ನಂತೆ 106 ತಾಲೂಕುಗಳಲ್ಲಿ 16,062 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಿ ಹಂತಹಂತವಾಗಿ 300 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳಾಗಿ ಪರಿವರ್ತಿಸುವ ನಿರ್ಣಯವನ್ನು ಸಿದ್ದರಾಮಯ್ಯ ಸಂಪುಟ ಕೈಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಮೊದಲ ಹಂತದಲ್ಲಿ 100 ಹಬ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.












Click it and Unblock the Notifications