ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಬಜೆಟ್‌ನಲ್ಲಿ ಘೋಷಣೆ
ಸ್ಮಾರ್ಟ್‌ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ವ್ಯಸನದಿಂದ ಮಕ್ಕಳನ್ನು ಮುಕ್ತಗೊಳಿಸಲು ಕರ್ನಾಟಕ ಸರ್ಕಾರವು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ. 2026-27ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಕಾನೂನು ಜಾರಿಯಾದಲ್ಲಿ, ಭಾರತದಲ್ಲೇ ಇಂತಹ ಕಟ್ಟುನಿಟ್ಟಿನ ನಿಯಮ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.
ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಏಕಾಗ್ರತೆ ಕುಂಠಿತವಾಗುತ್ತಿದೆ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಅಪ್ರಾಪ್ತರು ಆನ್‌ಲೈನ್ ಕಿರುಕುಳ, ಅಶ್ಲೀಲ ವಿಷಯಗಳು ಮತ್ತು ಸೈಬರ್ ವಂಚನೆಗಳಿಗೆ ಬಲಿಯಾಗುವುದನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕೇಂದ್ರದಿಂದಲೂ ಪ್ರಸ್ತಾವ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈಗಾಗಲೇ ಸಾಮಾಜಿಕ ಜಾಲತಾಣ ಕಂಪನಿಗಳೊಂದಿಗೆ ವಯಸ್ಸಿನ ಮಿತಿ ಹೇರುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾದ ಮಾದರಿಯನ್ನು ಭಾರತದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಕೇಂದ್ರ ಗಂಭೀರವಾಗಿದೆ. ನೆರೆಯ ಆಂಧ್ರಪ್ರದೇಶ ಕೂಡ ಇದೇ ರೀತಿಯ ಕಾನೂನು ತರಲು ಸಜ್ಜಾಗಿದೆ. ಗೃಹ ಸಚಿವೆ ವಂಗಲಪುಡಿ ಅನಿತಾ ಅವರು ವಿಧಾನಸಭೆಯಲ್ಲಿ ತಿಳಿಸಿದಂತೆ, ಸುಳ್ಳು ಸುದ್ದಿ ಮತ್ತು ದ್ವೇಷಪೂರಿತ ಪೋಸ್ಟ್‌ಗಳನ್ನು ನಿಯಂತ್ರಿಸಲು ಶಾಲಾ ವಿದ್ಯಾರ್ಥಿಗಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧಿಸುವುದು ಅನಿವಾರ್ಯ ಎಂದಿದ್ದರು.
ಕಾನೂನು ಜಾರಿಯಾದರೆ ಏನಾಗಬಹುದು?
ವಯಸ್ಸಿನ ದೃಢೀಕರಣ ಕಡ್ಡಾಯ: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್‌ನಂತಹ (ಟ್ವಿಟ್ಟರ್)ವೇದಿಕೆಗಳಿಗೆ ಲಾಗ್-ಇನ್ ಆಗುವಾಗ ಆಧಾರ್ ಅಥವಾ ಇತರ ಗುರುತಿನ ಚೀಟಿ ಮೂಲಕ ವಯಸ್ಸನ್ನು ಕಡ್ಡಾಯವಾಗಿ ದೃಢೀಕರಿಸಬೇಕಾಗಬಹುದು. 16 ವರ್ಷದೊಳಗಿನ ಮಕ್ಕಳಿಗೆ ಖಾತೆ ತೆರೆಯಲು ಅವಕಾಶ ನೀಡುವ ಕಂಪನಿಗಳ ಮೇಲೆ ಭಾರಿ ದಂಡ ವಿಧಿಸುವ ಅವಕಾಶ ಈ ಕಾನೂನಿನಲ್ಲಿರಲಿದೆ. ಮಕ್ಕಳ ಡಿಜಿಟಲ್ ಚಟುವಟಿಕೆಗಳ ಮೇಲೆ ನಿಗಾ ಇಡಲು ಪೋಷಕರಿಗೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬಹುದು.
ಸರ್ಕಾರದ ಈ ಪ್ರಸ್ತಾಪವನ್ನು ಸ್ವಾಗತಿಸಿದ್ದಾರೆ. ಮಕ್ಕಳ ಮೆದುಳಿನ ಬೆಳವಣಿಗೆಯ ಹಂತದಲ್ಲಿ ಸೋಷಿಯಲ್ ಮೀಡಿಯಾದ ಪ್ರಚೋದನೆ ಅಪಾಯಕಾರಿ. ಈ ನಿಷೇಧವು ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳತ್ತ ಮರಳುವಂತೆ ಮಾಡುತ್ತದೆ ಎನ್ನುವುದು ಮನಶ್ಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರ ಅಭಿಪ್ರಾಯ. ತಂತ್ರಜ್ಞಾನವನ್ನು ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸಿ, ಮನರಂಜನೆಯ ಹೆಸರಿನಲ್ಲಿ ನಡೆಯುವ ಸಮಯ ವ್ಯರ್ಥವನ್ನು ತಡೆಯಲು ಈ ಕ್ರಮ ಪೂರಕವಾಗಲಿದೆ. ಕರ್ನಾಟಕ ಸರ್ಕಾರವು ತಂತ್ರಜ್ಞಾನದ ಲಾಭ ಮತ್ತು ಹಾನಿಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ಹೆಜ್ಜೆ ಇಟ್ಟಿದೆ. ಇದು ಕೇವಲ ಘೋಷಣೆಯಾಗಿ ಉಳಿಯದೆ, ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು.












Click it and Unblock the Notifications