ಮತ್ತೆ ಬಿಜೆಪಿಗೆ ಮರಳಲಿದ್ದಾರೆಯೇ ಜನಾರ್ಧನ ರೆಡ್ಡಿ? ಅಪಾಯದ ಮುನ್ಸೂಚನೆ ಪಡೆದ ಬಿಜೆಪಿ ನಾಯಕರಿಂದ ಮನವೊಲಿಕೆಗೆ ಯತ್ನ? ಇದನ್ನು ಓದಿ
ಬೆಂಗಳೂರು, ಜನವರಿ 23: ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಅವರು ಕಳೆದ ತಿಂಗಳು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು (ಕೆಆರ್‌ಪಿಪಿ) ಕಟ್ಟಿದ್ದಾರೆ. ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಅವರು ಗಂಗಾವತಿಯಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಬಳ್ಳಾರಿ ಕಡೆಯ ಬಿಜೆಪಿ ಮುಖಂಡರೂ ಸಹ ಜನಾರ್ಧನ ರೆಡ್ಡಿಗೆ ಬೆಂಬಲಿಸಿದ್ದಾರೆ. ಬಿಜೆಪಿ ತೊರೆದು ಕೆಆರ್‌ಪಿಪಿ ಪಕ್ಷಕ್ಕೆ ಸೇರಿದ್ದಾರೆ. ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ್ದ, ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿ ನಾಯಕರು ನನಗೆ ಮೋಸ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬಹಳ ಬೇಸರದಿಂದಲೇ ಬಿಜೆಪಿಯನ್ನು ತೊರೆಯುತ್ತಿರುವುದಾಗಿ ಅವರು ತಿಳಿಸಿದ್ದರು. ಕಳೆದ ಕೆಲ ತಿಂಗಳುಗಳಿಂದ ಗಂಗಾವತಿಯಲ್ಲಿ ಅವರು ಮನೆಯನ್ನೂ ನಿರ್ಮಿಸಿ, ಅಲ್ಲಿಯೇ ವಾಸವಾಗಿದ್ದಾರೆ. ಪ್ರಚಾರವನ್ನೂ ಮಾಡುತ್ತಿದ್ದಾರೆ. ಸಹೋದರರಾದ ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಆಪ್ತ ಸ್ನೇಹಿತ, ಸಚಿವ ಶ್ರೀರಾಮುಲು ಅವರು ಜನಾರ್ಧನ ರೆಡ್ಡಿ ಪಕ್ಷಕ್ಕೆ ಸೇರಿಲ್ಲ. ಶ್ರೀರಾಮುಲು ಅವರು ಗೆಳೆಯನಿಗೆ ಶುಭಾಶಯವನ್ನು ಕೋರಿದ್ದಾರೆ.

ಬಿಜೆಪಿ ನಾಯಕರನ್ನು ಭೇಟಿಯಾದ ಜನಾರ್ಧನ ರೆಡ್ಡಿ?
ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರಲಿದ್ದಾರೆ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಇದರ ಹಿಂದೆ ಕೆಲ ಅನುಮಾನಗಳೂ ಎದ್ದಿವೆ. ಜನಾರ್ಧನ ರೆಡ್ಡಿ ಅವರು ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿಯ ಯುವ ಮುಖಂಡರನ್ನು ಸೆಳೆಯುತ್ತಿದ್ದಾರೆ. ಹಲವು ಚರ್ಚೆ, ಸಭೆ ಹಾಗೂ ಸಮಾರಂಭಗಳನ್ನು ನಡೆಸಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ ಭಾಗದಲ್ಲಿ ಜನಾರ್ಧನ ರೆಡ್ಡಿ ಅವರು ಪಕ್ಷಕ್ಕೆ ಸೇರಿಲು ಹಲವು ಮುಖಂಡರು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಜನಾರ್ಧನ ರೆಡ್ಡಿ ಬಿಜೆಪಿಗೆ ಅಪಾಯ ತಂದೊಡ್ಡಬಹುದು ಎಂಬ ಅನುಮಾನಗಳು ಬಿಜೆಪಿಯ ನಾಯಕರಲ್ಲಿ ದಟ್ಟವಾಗಿವೆ. ಕಾರಣ, ಬಿಜೆಪಿಯ ರಾಜ್ಯ ಮಟ್ಟದ ನಾಯಕರು ಹಾಗೂ ರಾಷ್ಟ್ರೀಯ ನಾಯಕರು ಜನಾರ್ಧನ ರೆಡ್ಡಿ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಈ ಮೂಲಕ ಜನಾರ್ಧನ ರೆಡ್ಡಿ ಅವರನ್ನು ಬಿಜೆಪಿಗೆ ಮರಳಿ ಕರೆತರುವ ಯತ್ನಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.

ಈ ವಿಚಾರವಾಗಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿರುವ ಕೆಆರ್‌ಪಿಪಿ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ. ಪಕ್ಷ ಬಲವಾಗಿ ಸಂಘಟನೆಗೊಳ್ಳುತ್ತಿದ್ದು, ರೆಡ್ಡಿ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ' ಎಂದು ತಿಳಿಸಿದ್ದಾರೆ.

ಕರ್ನಾಟಕ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗ, ಮುಂದೆ ಯಾವ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಹೇಳುವುದು ಕಷ್ಟ. 2013ರ ಚುನಾವಣೆಯಲ್ಲಿ ಸಚಿವ ಶ್ರೀರಾಮುಲು ಬಿಜೆಪಿಯಿಂದ ಮುನಿಸಿಕೊಂಡು ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಅವರ ಪಕ್ಷವು ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಇದು ಬಿಜೆಪಿಗೆ ಹಲವು ರೀತಿಯಲ್ಲಿ ನಷ್ಟ ಉಂಟು ಮಾಡಿತ್ತು. ಅದೇ ರೀತಿ ಜನಾರ್ಧನ ರೆಡ್ಡಿ ಅಪಾಯ ತಂದೊಡ್ಡಲಿದ್ದಾರೆ ಎಂಬ ಸೂಚನೆಗಳು ಬಿಜೆಪಿಗೆ ದೊರೆತಿವೆ. ಆದರೆ, ಜನಾರ್ಧನ ರೆಡ್ಡಿಯವರ ನಿರ್ಧಾರ ಅಚಲವಾಗಿ ಇರುವುದೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications