PUC Results: ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿಎಂ ಕಿವಿಮಾತು
ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಒಟ್ಟು 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ರಾಜ್ಯಾದ್ಯಂತ ಶೇ 73.45ರಷ್ಟು ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಪರಿಶ್ರಮ ಮತ್ತು ನಿರಂತರ ಅಭ್ಯಾಸ ನಿಮ್ಮನ್ನು ಯಶಸ್ಸಿನ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದ್ದಾರೆ.
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳು ನಿರಾಶೆ, ಆತಂಕಕ್ಕೆ ಒಳಗಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಬದುಕು ದೊಡ್ಡದು, ಮತ್ತೆ ಪರೀಕ್ಷೆ ಎದುರಿಸಿ ಹೆಚ್ಚಿನ ಅಂಕದ ಜೊತೆಗೆ ಪಾಸಾಗುವ ಅವಕಾಶ ಖಂಡಿತ ಸಿಗಲಿದೆ. ಹಾಗಾಗಿ ಹತಾಶೆಯ ಕೈಗೆ ಬುದ್ದಿ ಕೊಡದೆ ಸಂಯಮದಿಂದ ವರ್ತಿಸಿ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದಿರುವ ಎಲ್.ಆರ್.ಸಂಜನಾ ಬಾಯಿ, ಅಮೂಲ್ಯ ಕಾಮತ್, ದೀಕ್ಷಾ ಆರ್ ಹಾಗೂ ದೀಪಶ್ರೀ ಈ ನಾಲ್ವರು ಹೆಣ್ಣುಮಕ್ಕಳಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಇತರರಿಗೆ ಸ್ಪೂರ್ತಿಯಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ದ್ವಿತೀಯ ಪಿಯು ವಿದಾರ್ಥಿಗಳನ್ನು ಅಭಿನಂದಿಸಿದ್ದಾರೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಅನುತ್ತೀರ್ಣಗೊಂಡವರು ಆತಂಕ ಪಡದೆ ಮತ್ತೆ ಪರೀಕ್ಷೆ ಎದುರಿಸಿ. ಸೋಲೇ ಗೆಲುವಿಗೆ ಸೋಪಾನ ಎನ್ನುವುದನ್ನು ಮರೆಯದಿರಿ. ನಿಮ್ಮ ಮುಂದಿನ ಶೈಕ್ಷಣಿಕ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ.
ಉಡುಪಿಗೆ ಮೊದಲ ಸ್ಥಾನ: ಲಕ್ಷ್ಮಿ ಹೆಬ್ಬಾಳ್ಕರ್ ಸಂತಸ
ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇ.93.90 ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಖುಷಿಯ ಸಂಗತಿ ಎಂದು ಹೇಳಿದ್ದಾರೆ. ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ.

ಫೇಲಾದ ವಿದ್ಯಾರ್ಥಿಗಳಿಗೆ ಗೆಲುವು ಖಚಿತ: ವಿಜಯೇಂದ್ರ
ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಅಭಿನಂದನೆ ತಿಳಿಸಿದ್ದಾರೆ. ಪರೀಕ್ಷೆ ಹಾಗೂ ಫಲಿತಾಂಶಗಳು ಶೈಕ್ಷಣಿಕ ಜೀವನದ ಒಂದು ಮಹತ್ವದ ಘಟ್ಟ. ಈ ನಿಟ್ಟಿನಲ್ಲಿ ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಸಾಧನೆಯ ಗುರಿ ತಲುಪಿ, ಶಿಕ್ಷಣದ ತಿರುವಿನ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಟ್ಟು, ಉತ್ತೀರ್ಣರಾದ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಅಳುಕಬೇಕಿಲ್ಲ, ಮರಳಿ ಪ್ರಯತ್ನದಲ್ಲಿ ನಿಮಗೆ ಮಹತ್ವದ ತಿರುವು ಸಿಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಆತ್ಮವಿಶ್ವಾಸದ ಹೆಜ್ಜೆ ಇಡಿ, ಗೆಲುವು ನಿಮ್ಮನ್ನು ಹಿಂಬಾಲಿಸಲಿದೆ. ಅವಕಾಶಗಳ ಬಾಗಿಲು ತೆರೆದು ನಿಮಗಾಗಿ ಕಾಯುತ್ತಿವೆ. ವಿದ್ಯಾರ್ಥಿಗಳೆಲ್ಲರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications