ಮಹಿಳಾ ಮತದಾರರ ಸೆಳೆಯಲು ಸೀರೆ ಕೊಟ್ಟರಂತೆ ಶಾಸಕ ಸುಧಾಕರ್!
ಚಿಕ್ಕಬಳ್ಳಾಪುರ, ಫೆಬ್ರವರಿ 23: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿ, ವಿಧಾನಸೌಧಕ್ಕೆ ಪಾಸ್ ಗಿಟ್ಟಿಸಿಕೊಂಡಿದ್ದ ಚಿಕ್ಕಬಳ್ಳಾಪುರದ ಶಾಸಕ ಡಾ.ಕೆ.ಸುಧಾಕರ್ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರ ಮತಗಳು ಪ್ರಮುಖ ಎನಿಸಿತೋ ಹೇಗೋ ಸೀರೆ ವಿತರಣೆಗೆ ಮುಂದಾಗಿದ್ದಾರೆ.
ಅಂದಹಾಗೆ, ಇದು ಚುನಾವಣೆ ಘೋಷಣೆ ಎದುರು ನೋಡುತ್ತಿರುವ ಪರ್ವ ಕಾಲ. ಇಂಥ ಸನ್ನಿವೇಶದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಸುಧಾಕರ್ ಸೀರೆ ಆಮಿಷ ಒಡ್ಡಿದ್ದಾರೆ. ಬಹಳ ಬಿರುಸಿನಿಂದ ಸೀರೆ ಹಂಚುತ್ತಿದ್ದು, ಇದರ ಕ್ವಾಲಿಟಿ ಸುಮಾರು ಅಂತ ಮತದಾರರೇ ಮಾತನಾಡಿಕೊಳ್ಳುತ್ತಿದ್ದಾರೆ.
ರಾತ್ರಿ ವೇಳೆ ಸೀರೆ ಹಂಚಿ, ಶಾಸಕರ ಬೆಂಬಲಿಗರು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂಬುದು ಸದ್ಯದ ಸುದ್ದಿ. ಇದು ರಾಜಕಾರಣದ ತಂತ್ರ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವೆಡೆ ಸೀರೆಯನ್ನು ಹಿಂತಿರುಗಿಸಲು ಮುಂಧಾಗಿದ್ದಾರೆ. ಇನ್ನು ಕೆಲವರು ಸೀರೆಗಳನ್ನೇ ಸುಟ್ಟು ಹಾಕಿದ್ದಾರೆ.

ಸಂಕ್ರಾಂತಿ ಸುಗ್ಗಿ ಹೆಸರಿನಲ್ಲಿ ಮಿಕ್ಸಿ ವಿತರಣೆಗೂ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸಹ ಇದೇ ರೀತಿ ಸಂಕ್ರಾಂತಿಗೆ ವಿಶೇಷ ಕೊಡುಗೆಗಳನ್ನು ಶಾಸಕರು ಕೊಟ್ಟಿದ್ದರು ಎಂಬುದು ಜನರದೇ ಮಾತು.












Click it and Unblock the Notifications