ಕಾಂಗ್ರೆಸ್ ಆಂತರಿಕ ಚುನಾವಣೆ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಫೆ.26 : ಲೋಕಸಭೆ ಟಿಕೆಟ್ ಗಾಗಿ ಪೈಪೋಟಿ ಉಂಟಾಗಿರುವ ಬೆಂಗಳೂರು ಉತ್ತರ ಮತ್ತು ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆಂತರಿಕ ಚುನಾವಣೆ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮಾರ್ಚ್ 13ರಂದು ಬೆಂಗಳೂರು ಉತ್ತರದಲ್ಲಿ ಮತ್ತು ಮಾರ್ಚ್ 9ರಂದು ಮಂಗಳೂರಿನಲ್ಲಿ ಚುನಾವಣೆ ನಡೆಯಲಿದೆ.
ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಕೆಪಿಸಿಸಿ, ಬೆಂಗಳೂರು ಉತ್ತರ ಮತ್ತು ಮಂಗಳೂರು ಕ್ಷೇತ್ರದಲ್ಲಿ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಲಾಗಿದ್ದು, ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದೆ. ಇಬ್ಬರು ಅಭ್ಯರ್ಥಿಗಳಿರುವ ಮಂಗಳೂರು ಮತ್ತು ನಾಲ್ಕಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. [ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿರುವ ಕ್ಷೇತ್ರ]

ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣೆಗಾಗಿ ಮತದಾರರ ನೋಂದಣಿ ಕಾರ್ಯ ಮಾರ್ಚ್ 1ರಿಂದ ಮಾ. 3ರವರೆಗೂ ನಡೆಯಲಿದ್ದು, ಮಾ. 6 ಮತ್ತು 7ರಂದು ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ. ಇದಾದ ನಂತರ ಮಾ.7ರಂದೇ ಚುನಾವಣೆ ಅಧಿಸೂಚನೆ ಹೊರಬೀಳದಿದ್ದು, 13ರಂದು ಮತದಾನ ನಡೆಸಲಾಗುವುದು ಎಂದು ತಿಳಿಸಲಾಗಿದೆ. [ಆಂತರಿಕ ಚುನಾವಣೆ]
ಅಂದಹಾಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿ.ಎಲ್. ಶಂಕರ್, ಸಿ. ನಾರಾಯಣಸ್ವಾಮಿ, ಸಿ.ಜೆ. ಚಂದ್ರಶೇಖರ್, ಕೆ.ಸಿ. ರಾಮಮೂರ್ತಿ, ರಮೇಶ್ ಜಿ. ಗೌಡ ಮತ್ತು ರಾಜೀವಗೌಡ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. [ದಕ್ಷಿಣಕನ್ನಡದಲ್ಲಿ ಹಳೆ ಹುಲಿಯೋ, ಹೊಸ ಮುಖವೋ]
ಮಂಗಳೂರು : ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಮಂಗಳೂರು ಕ್ಷೇತ್ರದ ಟಿಕೆಟ್ ಆಂಕಾಕ್ಷಿಗಳು. ಕ್ಷೇತ್ರದಲ್ಲಿ ಮಾರ್ಚ್ 9ರಂದು ಚುನಾವಣೆ ನಡೆಯಲಿದ್ದು, ಚುನಾವಣಾಧಿಕಾರಿಗಳು ಭೇಟಿ ನೀಡಿ ಮತದಾರರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. [ಪೂಜಾರಿ ಪರ ಬೆಂಗಳೂರಿನಲ್ಲಿ ಬ್ಯಾಟಿಂಗ್]
ಆಂಧ್ರಪ್ರದೇಶದ ಭವಾನಿ ಮಹೇಂದ್ರ ಪ್ರಸಾದ್ ಹಾಗೂ ಕೇರಳದ ಅರುಣ್ ಆ್ಯಂಟನಿ ಚುನಾವಣಾಧಿಕಾರಿಗಳಾಗಿ ಮಂಗಳೂರಿಗೆ ಆಗಮಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ.ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಮತದಾರರ ನೋಂದಾಣಿ ಪ್ರಕ್ರಿಯೆ ಮಂಗಳೂರಿನಲ್ಲಿ ಆರಂಭವಾಗಿದೆ. ಆಂತರಿಕ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಎಐಸಿಸಿಯಿಂದ ಮಾರ್ಗಸೂಚಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶದ 15 ಲೋಕಸಭಾ ಕ್ಷೇತ್ರಗಳಲ್ಲಿ ಅಮೆರಿಕಾ ಮಾದರಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಂತರಿಕ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಈ ಚುನಾವಣೆಗೆ ಎಐಸಿಸಿ ಮಾರ್ಗಸೂಚಿಗಳನ್ನು ಕಳುಹಿಸಿದೆ. ಸುಮಾರು 700 ರಿಂದ 800 ಜನರು ಮತದಾನ ಮಾಡಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮುಖಂಡರು, ಪ್ರದೇಶ ಕಾಂಗ್ರೆಸ್ ಮುಖಂಡರು, ಯುವ ಕಾಂಗ್ರೆಸ್ ಮತ್ತು ಎನ್ಎಸ್ ಯುಐ ಮುಖಂಡರು ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾನ ಮಾಡಲಿದ್ದಾರೆ.












Click it and Unblock the Notifications