ಸಿದ್ದು ಸರ್ಕಾರದಿಂದ ಇನ್ಮುಂದೆ ಸಿಗಲಿದೆ ವಸ್ತ್ರ ಭಾಗ್ಯ
ಮೈಸೂರು, ಜನವರಿ 30 : ಅನ್ನಭಾಗ್ಯದಿಂದ ಆರಂಭವಾಗಿ ಕ್ಷೀರಭಾಗ್ಯ, ಕೃಷಿ ಭಾಗ್ಯ, ಆರೋಗ್ಯ ಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ ಹೀಗೆ ಹತ್ತಾರು ಭಾಗ್ಯಗಳನ್ನು ಆರ್ಥಿಕ ದುರ್ಬಲ ಕುಟುಂಬಗಳಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ಚುನಾವಣೆಯ ಹೊಸ್ತಿಲಿನಲ್ಲಿರುವಾಗ ವಸ್ತ್ರ ಭಾಗ್ಯವನ್ನು ನೀಡಲು ಮುಂದಾಗಿದ್ದಾರೆ.
ಇಂದಿರಾ ಕ್ಯಾಂಟೀನ್, ಇಂದಿರಾ ಮೊಬೈಲ್ ಕ್ಯಾಂಟೀನ್, ಇಂದಿರಾ ಕ್ಲಿನಿಕ್ ಹೀಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಯಶಸ್ಸಿನ ಬೆನ್ನಲ್ಲೇ ಇಂದಿರಾ ವಸ್ತ್ರ ಭಾಗ್ಯ ವನ್ನು ನೀಡುವ ಚಿಂತನೆ ನಡೆದಿದೆ.
ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಈ ಯೋಜನೆಯನ್ನು ಜಾರಿಗೆ ತರಲು ಚಿಂತಿಸಲಾಗಿದ್ದು, ಚುನಾವಣೆಗೂ ಮೊದಲೇ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ಈ ಸಂಬಂಧ ಈಗಾಗಲೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳಿಗೆ ಉಚಿತವಾಗಿ ಪುರುಷರಿಗೆ 1 ಪಂಚೆ ಮತ್ತು 1 ಅಂಗಿ (ಶರ್ಟ್) ಬಟ್ಟೆ ಹಾಗೂ ಮಹಿಳೆಯರಿಗೆ ಒಂದು ಸೀರೆ ಮತ್ತು ಕುಪ್ಪಸ ವಸ್ತ್ರವನ್ನು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಯನ್ನು ಫೆಬ್ರವರಿ(ಫೆ.15)ಯಲ್ಲಿ ಮುಖ್ಯಮಂತಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 13ನೇ ಬಜೆಟ್ (2018-19ನೇ ಸಾಲಿನ ಬಜೆಟ್)ನಲ್ಲಿ ಘೋಷಣೆ ಮಾಡಿ, ತಕ್ಷಣದಿಂದಲೇ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಯೋಗದೊಂದಿಗೆ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆಗಳು ನಡೆದಿವೆ.
ನೇಕಾರರಿಗೆ ಅನುಕೂಲ
ಇಂದಿರಾ ವಸ್ತ್ರ ಭಾಗ್ಯ ಯೋಜನೆ ಜಾರಿಗೆ ತರುವುದರಿಂದ ರಾಜ್ಯದಲ್ಲಿನ ನೇಕಾರರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ರಾಜ್ಯದಲ್ಲಿ 1.50 ಲಕ್ಷ ವಿದ್ಯುತ್ ಮಗ್ಗಗಳಿವೆ. ಅಲ್ಲದೇ 25 ಸಾವಿರ ಅಸಂಘಟಿತ ವಲಯದ ನೇಕಾರರ ಕುಟುಂಬಗಳಿವೆ. ಇಂದಿರಾ ವಸ್ತ್ರ ಭಾಗ್ಯ ಯೋಜನೆಯಿಂದ ನೇಕಾರರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಿ ದಂತಾಗುತ್ತದೆ ಎನ್ನುವುದು ಕೂಡ ಸರ್ಕಾರದ ಲೆಕ್ಕಾಚಾರ.
ಒಂದು ಕುಟುಂಬಕ್ಕೆ 500 ರೂ.ಗಳಂತೆ ಈ ಯೋಜನೆಯ ಅನುಷ್ಠಾನಕ್ಕೆ ಒಟ್ಟು ವಾರ್ಷಿಕ 550 ಕೋಟಿ ರೂ. ಅಗತ್ಯವಿದ್ದು, ಆ ಅನುದಾನವನ್ನು 2018-19ರ ಬಜೆಟ್ ನಲ್ಲಿ ಘೋಷಿಸಿ, ಹಣ ಒದಗಿಸಲು ಸಚಿವ ರುದ್ರಪ್ಪ ಲಮಾಣಿ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಸದ್ಯ 1.10 ಕೋಟಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿವೆ. ಪ್ರತಿ ಕುಟುಂಬದ ಪತಿ-ಪತ್ನಿಯನ್ನು ಲೆಕ್ಕ ಹಾಕಿದರೆ ಈ ಯೋಜನೆಯಲ್ಲಿ 2.20 ಕೋಟಿ ಫಲಾನುಭವಿಗಳಾಗುತ್ತಾರೆ.
ಯಾರಿಗೆ ಎಷ್ಟು ಬಟ್ಟೆ ?
ಪುರುಷರಿಗೆ ಎರಡು ಮೀಟರ್ ನ ದು ಖಾಲಿ ಪ್ರತಿ ಪಂಚೆಗೆ 150 ರೂ 2 ಮೀಟರ್ ಪಾಲಿಸ್ಟರ್ಸ್ ಶರ್ಟ್ ಬಟ್ಟೆಗೆ 100 ರೂ, ಮಹಿಳೆಯರಿಗೆ 5.5 ಮೀಟರ್ ಪಾಲಿಯೆಸ್ಟರ್ ಸೀರೆಗೆ 200 ರೋ. 80 ಮೀಟರ್ ಪಾಲಿ ಹತ್ತಿ ರವಿಕೆ ಬಟ್ಟೆಗೆ 50 ರೂ ನಿಗದಿ ಪಡಿಸಿದೆ.












Click it and Unblock the Notifications