ರಾಜ್ಯದಲ್ಲಿನ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ
ಈಗಾಗಲೇ ರಾಜ್ಯದಲ್ಲಿ ಪರೀಕ್ಷೆಗಳೆಲ್ಲ ಮುಗಿದಿದ್ದು, ಇನ್ನೆ ಕೆಲವೇ ದಿನಗಳಲ್ಲಿ ಬೇಸಿಗೆ ರಜೆ ಪ್ರಾರಂಭವಾಗಿದೆ. ಈ ನಡುವೆಯೇ ಇದೀಗ ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಿಕ್ಷಣ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿಯೂ ಪ್ರತಿ ಅಧ್ಯಾಯ ಮುಗಿದ ಬಳಿಕ ಪರೀಕ್ಷೆ ನಡೆಸಲು ಹೊಸ ಮೌಲ್ಯಮಾಪನ ಪದ್ಧತಿ ಪ್ರಾರಂಭ ಮಾಡಲು ಸರ್ಕಾರಕ್ಕೆ ಹೊಸ ಯೋಜನೆ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

ಈ ಪ್ರಕಾರ, ಪ್ರತಿ ಪಾಠ ಮುಗಿದ ನಂತರ ವಿದ್ಯಾರ್ಥಿಗಳಿಗೆ ಸಣ್ಣ ಪರೀಕ್ಷೆಗಳು ಮತ್ತು ರಸಪ್ರಶ್ನೆಗಳನ್ನು ನೀಡಲಾಗುತ್ತದೆ. ಇವುಗಳನ್ನು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಸುಲಭವಾಗಿ ಮೌಲ್ಯಮಾಪನ ಮಾಡಲು ಅನುಕೂಲ ಆಗುವಂತೆ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಂದ ಕೂಡಿದ ಪರೀಕ್ಷೆಗಳನ್ನು ಓಎಂಆರ್ ಶೀಟ್ ಅಥವಾ ತತ್ಸಮಾನ ಶೀಟ್‌ನಲ್ಲಿ ನಡೆಸಲಾಗುವುದು.
ಇದಕ್ಕಾಗಿಯೇ ಶಾಲಾ ಶಿಕ್ಷಣ ಸಚಿವಾಲಯದ ವಿದ್ಯಾ ಸಮೀಕ್ಷಾ ಮೊಬೈಲ್ ಅಪ್ಲಿಕೇಶನ್ ಕೇಂದ್ರವನ್ನು ಶಾಲಾ ಶಿಕ್ಷಣ ಇಲಾಖೆ ಕಸ್ಟಮೈಸ್ ಮಾಡಲು ಆರಂಭಿಸಿದೆ. ಪ್ರಸ್ತುತ ಏಕಕಾಲದ ಮೌಲ್ಯಮಾಪನ ವಿಧಾನ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ಎಷ್ಟು ಕಲಿತಿದ್ದಾರೆ ಎಂಬುದನ್ನು ತಕ್ಷಣವೇ ತಿಳಿಯಲು ಯಾವುದೇ ವಿಧಾನ ಇಲ್ಲ.
ಆದ್ದರಿಂದ ಪ್ರತಿ ಪಾಠ ಮುಗಿದ ನಂತರ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅರ್ಥ ಮಾಡಿಕೊಳ್ಳಲು, ಗೊಂದಲ ಸರಿಪಡಿಸಿಕೊಳ್ಳಲು ಹೊಸ ವಿಧಾನದಿಂದ ಅನುಕೂಲ ಆಗುತ್ತದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿರುವ ರಚನಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನಗಳು ಮುಂದುವರೆಯಲಿದೆ.
ರಾಜ್ಯದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ತರಗತಿಗಳಿಗೆ ಹೊಸ ವ್ಯವಸ್ಥೆ ಅನ್ವಯ ಆಗಲಿದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಪರೀಕ್ಷೆ ಫಲಿತಾಂಶವನ್ನು ತಕ್ಷಣವೇ ನೀಡುವ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
2025-26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ: ರಾಜ್ಯ ಶಿಕ್ಷಣ ಇಲಾಖೆಯು 2025-26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಹಾಗಾದ್ರೆ ದಸರಾ ರಜೆ, ಬೇಸಿಗೆ ರಜೆ ಆರಂಭ ಮತ್ತು ಮುಕ್ತಾಯದ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು 2025-26ರ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಟಕ ಮಾಡಿದೆ. ಇದರಲ್ಲಿ ಶಾಲಾ ಕರ್ತವ್ಯದ ದಿನಗಳು ಮತ್ತು ರಜಾ ದಿನಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಇದು ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅನ್ವಯವಾಗಲಿದೆ.
ಶೀಘ್ರವೇ 2024-25ನೇ ಸಾಲಿನ ಚಟುವಟಿಕೆಗಳು ಮುಕ್ತಾಯ ಆಗಲಿವೆ. ಈ ಹಿನ್ನೆಲೆ 2025-26ನೇ ಸಾಲಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ 2025 ಮೇ 29ರಿಂದ ಶಾಲೆ ಪ್ರಾರಂಭಿಸಲು ಸೂಚನೆ ನೀಡಿದೆ. ಅದರಂತೆಯೇ ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯ ಆಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ಸೂಚಿಸಲಾಗಿದೆ. ಇಲ್ಲಿದ ನೋಡಿ ಮಾಹಿತಿ.
ಮೊದಲನೇ ಅವಧಿಯು 2025 ಮೇ 29ರಿಂದ ಸೆಪ್ಟೆಂಬರ್ 19ರ ವರೆಗೆ. ಎರಡನೇ ಅವಧಿಯು 2025 ಅಕ್ಟೋಬರ್ 8ರಿಂದ 2026 ಏಪ್ರಿಲ್ 10 ರವರೆಗೆ. ಇನ್ನು ದಸರಾ ರಜೆಯು 2025 ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರ ವರೆಗೆ. ಬೇಸಿಗೆ ರಜೆಯು 2026 ಏಪ್ರಿಲ್ 11 ರಿಂದ 2026 ಮೇ 5ರ ವರೆಗೆ ಇರಲಿದೆ.












Click it and Unblock the Notifications