ʼಡ್ರಗ್ಸ್ ಈಗ ಅಲ್ಲೂ ಸಿಗ್ತಿದೆ..ʼ ಗೃಹ ಸಚಿವ ಪರಮೇಶ್ವರ್ ಶಾಕಿಂಗ್ ಹೇಳಿಕೆ
ಸರ್ಕಾರ ಹೇಳುವ ಪ್ರಕಾರ ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಬಂದಿದೆಯಂತೆ. ಆದರೆ, ಮತ್ತೊಂದು ಮಾರ್ಗದಲ್ಲಿ ಡ್ರಗ್ಸ್ ಹಾವಳಿ ತಲೆದೂರಿರುವ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಶಾಕಿಂಗ್ ಮಾಹಿತಿ ನೀಡಿದ್ದಾರೆ. ಆರೋಗ್ಯ ಕೆಟ್ಟಾಗ ಔಷಧ ಖರೀದಿಸಲು ಹೋಗುವ ಮೆಡಿಕಲ್ ಶಾಪ್‌ಗಳಲ್ಲಿಯೂ ಹೊಸ ಮಾದರಿಯ ಡ್ರಗ್ಸ್ ಮಾರಾಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರು, ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಹತ್ತಿಕ್ಕಲಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ದಂಧೆ ಕಡಿಮೆಯಾಗಿದೆ. ಆದರೆ, ಮೆಡಿಕಲ್ ಸ್ಟೋರ್ಗಳಲ್ಲಿ ಕೂಡ ಸಿಂಥೆಟಿಕ್ ಡ್ರಗ್ಸ್ ಸಿಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದು, ಇದು ಆತಂಕ ಮೂಡಿಸಿದೆ ಎಂದಿದ್ದಾರೆ.

ಡ್ರಗ್ಸ್‌ನಿಂದ ಯುವಜನರು ಹಾಳಾಗುತ್ತಿದ್ದು, ಈ ಮೆಡಿಕಲ್ ಸ್ಟೋರ್ಗಳಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲೇಬೇಕಾಗಿದೆ. ಅದು ಹೇಗೆ? ಎನ್ನುವ ಸಂಬಂಧ ಇಂದು ಸಭೆ ನಡೆಸಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.
ಮೆಡಿಕಲ್ ಸ್ಟೋರ್ಗಳಲ್ಲಿ ಡ್ರಗ್ಸ್ ಮಾರಾಟಕ್ಕೆ ಬೇರೆ ಕಾನೂನೇ ಬರುತ್ತದೆ. ನೇರವಾಗಿ ಕ್ರಮ ತೆಗೆದುಕೊಳ್ಳಲು ಹೋದರೆ ಅದನ್ನು ಔಷಧಿ ಎಂದು ಕರೆದುಬಿಡುತ್ತಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಗಂಭೀರವಾಗಿ ಚರ್ಚಿಸಿ, ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದಿದ್ದಾರೆ.

ಗಾಂಜಾ ಸೇರಿದಂತೆ ಇತರೆ ಡ್ರಗ್ಸ್ ದಂಧೆಗಳ ವಿರುದ್ಧ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಇಂತಹ ಪ್ರಕರಣಗಳು ಕಡಿಮೆಯಾಗಿವೆ. ಮೆಡಿಕಲ್ ಶಾಪ್‌ಗಳಲ್ಲಿ ವಿವಿಧ ಫಾರ್ಮಸಿ ಕಂಪನಿಗಳಿಂದ ಪೇನ್‌ಕಿಲ್ಲರ್ ಹಾಗೂ ಮಾತ್ರೆಗಳ ಹೆಸರಿನಲ್ಲಿ ಸಿಂಥೆಟಿಕ್ ಡ್ರಗ್ಸ್ ಮಾರಾಟವೂ ಜೋರಾಗಿದೆ. ಇದು ಜನರಿಗೆ ಸುಲಭವಾಗಿ ಸಿಗುತ್ತಿದ್ದು, ಇದನ್ನು ನಿಯಂತ್ರಿಸುತ್ತೇವೆ. ಈ ದಂಧೆಯನ್ನೂ ಹತ್ತಿಕ್ಕಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಶ್ವಾನದಳ ಅಲರ್ಟ್: ಈಗಾಗಲೇ ಬೆಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸರು ಅಲರ್ಟ್ ಆಗಿದ್ದಾರೆ. ಶ್ವಾನದಳಕ್ಕೂ ಸಹ ಈ ಸಂಬಂಧ ವಿಶೇಷ ತರಬೇತಿ ನೀಡಲಾಗಿದ್ದು, ರೇವ್ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಬಳಸುವ ಎಂಡಿಎಂಎ, ಎಲ್‌ಎಸ್‌ಡಿ ಮತ್ತು ಎಕ್ಸ್‌ಟೆಸಿ ಮಾತ್ರೆಗಳಂತ ಸಿಂಥೆಟಿಕ್ ಡ್ರಗ್ಸ್ ಪತ್ತೆ ಹಚ್ಚಲು ಶ್ವಾನಗಳೇ ನೆರವಾಗಲಿವೆ.

ನಾಯಿಗಳಿಗೆ ಈ ಹಿಂದೆ ಗಾಂಜಾದಂತಹ ಸಾಮಾನ್ಯ ಡ್ರಗ್ಸ್ ಪತ್ತೆ ಮಾಡಲು ತರಬೇತಿ ನೀಡಲಾಗಿತ್ತು. ಇದೀಗ ಸಿಂಥೆಟಿಕ್ ಡ್ರಗ್ಸ್ ಪತ್ತೆ ಮಾಡಲು ಕೂಡ ತರಬೇತಿ ನೀಡಲಾಗಿದೆ ಎಂದು ಹೇಳಲಾಗಿದೆ. ರೇವ್ ಪಾರ್ಟಿ ಸೇರಿದಂತೆ ಡ್ರಗ್ ಪೆಡ್ಲರ್‌ಗಳ ಜಾಲಗಳನ್ನು ಪತ್ತೆ ಹಚ್ಚುವುದು, ಹಾಗೂ ವಿವಿಧ ಕಾರ್ಯಾಚರಣೆಗಳಲ್ಲಿ ಶ್ವಾನಗಳು ಪೊಲೀಸರಿಗೆ ನೆರವಾಗಲಿವೆ.
ಕೊರಿಯರ್ ಕಂಪನಿಗಳು ಗೋಡೌನ್‌ಗಳು, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಶೋಧ ಕಾರ್ಯಾಚರಣೆಗೆ ಈ ಶ್ವಾನಗಳು ಈಗಾಗಲೇ ಅಲರ್ಟ್ ಆಗಿದ್ದು, ಇದನ್ನೇ ಈಗ ಮೆಡಿಕಲ್ ಶಾಪ್‌ನಲ್ಲಿ ನಡೆಯುತ್ತಿರುವ ಸಿಂಥೆಟಿಕ್ಸ್ ಡ್ರಗ್ ದಂಧೆ ಕಡಿವಾಣಕ್ಕೂ ಬಳಸುತ್ತಾರಾ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.












Click it and Unblock the Notifications