ಕರ್ನಾಟಕದಲ್ಲಿ ಡಿಸೆಂಬರ್ 3ರಿಂದ ಎರಡು ದಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಬೆಂಗಳೂರು, ಡಿಸೆಂಬರ್ 02: ಕರ್ನಾಟಕದಲ್ಲಿ ಡಿಸೆಂಬರ್ 3 ರಿಂದ 5ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ದಕ್ಷಿಣ ಒಳನಾಡಿನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ತುಮಕೂರು, ಮೈಸೂರು, ರಾಮನಗರ, ಮಂಡ್ಯದಲ್ಲಿಮಳೆಯಾಗಲಿದೆ.
4 ದಿನಗಳ ಹಿಂದೆಯಷ್ಟೇ ನಿವಾರ್ ಚಂಡಮಾರುತ ದಕ್ಷಿಣ ಭಾರತದಲ್ಲಿ ಅಬ್ಬರಿಸಿದ ಬೆನ್ನಲ್ಲಿಯೇ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಮುಂದಿನ ಮೂರು ದಿನಗಳ ಕಾಲ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ವರ್ಷಧಾರೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳ ಕೊಲ್ಲಿಯ ಅಂಡಮಾನ್ ದ್ವೀಪದ ದಕ್ಷಿಣದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದ ಹೊಸ ಸೈಕ್ಲೋನ್ ಹುಟ್ಟಿಕೊಂಡಿದೆ. ಇದರಿಂದಾಗಿ ಮುಂದಿನ ಮೂರು ದಿನಗಳ ಕಾಲ ತಮಿಳುನಾಡು ಕರಾವಳಿ, ಪುದುಚೇರಿ, ಉತ್ತರ ಕೇರಳ ಹಾಗೂ ಆಂಧ್ರ ಪ್ರದೇಶದ ಕರಾವಳಿ ಹಾಗೂ ರಾಯಲ್‌ಸೀಮಾ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ದಾವಣಗೆರೆಯಲ್ಲಿ ಅತಿ ಕಡಿಮೆ ಅಂದರೆ 11.0 ಡಿಗ್ರಿ ಸೆಕ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಸಧ್ಯಕ್ಕೆ ರಾಜ್ಯದಲ್ಲಿ ಒಣಹವೆ ಮುಂದುವರೆದಿದೆ.












Click it and Unblock the Notifications