ಹಾಸನ ವಿಮಾನ ನಿಲ್ದಾಣ ಶೀಘ್ರ ಆರಂಭ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಡಿಸೆಂಬರ್‌ಗೆ ಪೂರ್ಣ: ಸಚಿವ ಶಿವಲಿಂಗೇಗೌಡ ಅಪ್ಡೇಟ್ಸ್
ಹಾಸನದಲ್ಲಿ ಶೀಘ್ರವಾಗಿ ವಿಮಾನ ಸೇವೆ ಆರಂಭಗೊಳ್ಳುವ ಬಗ್ಗೆ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿದ್ದಾರೆ. ಜಿಲ್ಲೆಯಲ್ಲಿ ಆದಷ್ಟು ಶೀಘ್ರವಾಗಿ ವಿಮಾನ ಸೇವೆ ಆರಂಭಗೊಳ್ಳಬೇಕು ಎಂಬುದು ಆಶಯವಾಗಿದೆ. ವಿಮಾನ ನಿಲ್ದಾಣ ಯೋಜನೆಗೆ ಕೇಂದ್ರ ಸರ್ಕಾರದಿಂದ ಪರಿಸರ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಮರ್ಪಕ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅಬಕಾರಿ ಸಚಿವ ಹಾಗೂ ಹಾಸನ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ನಡೆದ ಹಾಸನ ನಗರದ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಾಲೋಚನೆ ನಡೆಸಿದ ಕೆ. ಎಂ. ಶಿವಲಿಂಗೇಗೌಡ ಅವರು ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಯೋಜನೆ ಕಾರ್ಯರೂಪಕ್ಕೆ ಬರುವ ಮೊದಲು ಅಡಚಣೆಗಳನ್ನು ಪೂರ್ವಭಾವಿಯಾಗಿ ಪರಿಹರಿಸಿಕೊಳ್ಳಬೇಕು. ಯೋಜನೆಗೆ ಕೈಹಾಕಿದ ಮೇಲೆ ಅಡಚಣೆಗಳ ನಿವಾರಣೆಗೆ ಪ್ರಯತ್ನಿಸಿದರೆ ಕಗ್ಗಂಟಾಗುತ್ತದೆ. ಪರಿಸರ ಅನುಮತಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದಿದ್ದಾರೆ.

ರನ್ ವೇ ಎಕ್ಸ್‌ಟೆನ್ಶನ್‌ಗೆ ಸಂಬಂಧಿಸಿ ಬಾಕಿ ಇರುವ 98 ಎಕರೆ ಭೂಮಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ. ನೀರು, ವಿದ್ಯುತ್, ಗ್ರಿಡ್, ರಸ್ತೆ ಸಂಪರ್ಕ ಸೇರಿದಂತೆ ಇನ್ನಿತರ ಮೂಲಭೂತ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೆ ವಿಳಂಬವಾಗಬಾರದು. ಭೂಮಿ ಕಳೆದುಕೊಂಡ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬರಬಾರದು ಎಂದು ನಿರ್ದೇಶನ ನೀಡಿದ್ದಾರೆ.
Hassan Airport: ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಡಿಸೆಂಬರ್‌ಗೆ ಪೂರ್ಣ
ಬಡವರಿಗೆ ಆರೋಗ್ಯ ಸೇವೆ ಒದಗಿಸುವುದು ನಮ್ಮ ಕರ್ತವ್ಯ. ಬಡವರಿಗೆ ಮತ್ತು ಸಾರ್ವಜನಿಕರಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ಹಾಗೂ ಹೃದ್ರೋಗ, ನರವಿಜ್ಞಾನ ಮುಂತಾದ ವಿಶೇಷ ಚಿಕಿತ್ಸೆಗಳು ಶೀಘ್ರವಾಗಿ ಸಿಗುವಂತಾಗಬೇಕು ಎಂದು ಸಚಿವ ಎಂ. ಶಿವಲಿಂಗೇಗೌಡ ಅವರು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ನಡೆದ ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಕೆ. ಎಂ. ಶಿವಲಿಂಗೇಗೌಡ ಅವರು ಬಾಕಿಯಿರುವ ಎಲ್ಲ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಆಸ್ಪತ್ರೆ ಕಾಮಗಾರಿ ವಿಚಾರದಲ್ಲಿ ವಿಳಂಬವಾಗಬಾರದು. ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸಮರೋಪಾದಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಯು ಪೂರ್ಣ ಹಂತದಲ್ಲಿದ್ದು, ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜನವರಿಯಲ್ಲಿ ಉದ್ಘಾಟನಾ ಸಮಾರಂಭ ಇಟ್ಟುಕೊಳ್ಳಬಹುದು. ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕಾಮಗಾರಿಯು ಪೂರ್ಣಗೊಂಡು ಉದ್ಘಾಟನೆಗೊಳ್ಳುವಂತಾದರೆ ನನಗೆ ತುಸು ಸಮಾಧಾನ ಸಿಗುತ್ತದೆ ಎಂದಿದ್ದಾರೆ.


Click it and Unblock the Notifications
