ಹಾಸನಾಂಬ ಉತ್ಸವ, ಈ ಬಾರಿ ಹೇಗೆ ನಡೆಯಲಿದೆ; ಸಚಿವ ಕೆ. ಎಂ. ಶಿವಲಿಂಗೇಗೌಡ ಹೇಳಿದ್ದೇನು ?
ಹಾಸನ: ಕರ್ನಾಟಕದಲ್ಲಿ ಈ ಬಾರಿ ತೀವ್ರ ಬರ ಹಾಗೂ ರೈತರು, ನಾಡಿನ ಜನತೆ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಮಾಡುತ್ತಿರುವ ವೆಚ್ಚವೇನು ಎಂದು ಈಚೆಗೆ ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಹೀಗಾಗಿ, ಈ ಬಾರಿಯ ಹಾಸನ ಉತ್ಸವ ಸರಳವಾಗಿ ನಡೆಯಲಿದೆಯೇ ಎನ್ನುವ ಕುತೂಹಲ ಮೂಡಿತ್ತು. ಇದೀಗ ಹಾಸನ ಉತ್ಸವಕ್ಕೆ ಸಂಬಂಧಿಸಿದಂತೆ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಹಾಸನಾಂಬ ಉತ್ಸವದ ಪೂರ್ವಸಿದ್ಧತೆಗೆ ಸಂಬಂಧಿಸಿ ಪ್ರತಿ ದಿನ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲ ಕೆಲಸಗಳು ಬಿರುಸಿನಿಂದ ಸಾಗಿವೆ. ಹಿಂದಿನ ವರ್ಷದ ಪರಿಪಾಠದಂತೆ ಹಾಸನಾಂಬ ಉತ್ಸವ ನಡೆಯಲಿದೆ. ಪ್ರಸ್ತಕ ವರ್ಷ ಕುಸ್ತಿ ಪಂದ್ಯವು ಪ್ರಮುಖ ಆಕರ್ಷಣೆಯಾಗಿದೆ ಎಂದು ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಹೇಳಿದ್ದಾರೆ.

ಹಾಸನಾಂಬ ಕ್ರೀಡೋತ್ಸವದ ಪ್ರಮುಖ ಕೇಂದ್ರ ಬಿಂದು ಕುಸ್ತಿ. ಸುಮಾರು 400 ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ. ಮೈಸೂರು ದಸರಾದ ಕುಸ್ತಿ ಪಂದ್ಯಾಟದ ಮಾದರಿಯಲ್ಲಿ ನಡೆಯಲಿದೆ. ಜೊತೆಗೆ 150 ವಾಲಿಬಾಲ್ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. 200 ಕಬ್ಬಡಿ ಆಟಗಾರರು ಬರುತ್ತಿದ್ದಾರೆ.
ಹೋರಿ, ಟಗರುಗಳ ಪ್ರದರ್ಶನ, ಶ್ವಾನ ಪ್ರದರ್ಶನಗಳು, ಮೈಸೂರು ದಸರಾ ಮಾದರಿಯ ವಿದ್ಯುತ್ ದೀಪಾಲಂಕಾರಗಳೆಲ್ಲವೂ ಮನರಂಜನೆ ನೀಡಲಿವೆ. 2-3 ದಿನಗಳಲ್ಲಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸವಾಗಲಿದೆ. ದೇಶವಿದೇಶಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನಿಗಾವಹಿಸಲಾಗುತ್ತಿದೆ. ಸುಸೂತ್ರವಾಗಿ ಹಾಸನಾಂಬ ಉತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ಸಕಲ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.
ಹಾಸನಾಂಬ ಉತ್ಸವ ಆಚರಣೆ ವಿಚಾರವಾಗಿ ಹಾಸನ ಶಾಸಕರ ಜೊತೆಗೆ ವೈಮನಸ್ಸು ಹೊಂದಿರುವ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ವೈಮನಸ್ಸು ಇಲ್ಲ. ಎಲ್ಲರೂ ಒಟ್ಟಾಗಿ ಸೌಹಾರ್ದಯುತವಾಗಿ ನಾಡಹಬ್ಬವನ್ನು ಆಚರಿಸಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ಹೇಳಿದ್ದೇನು ?
ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ಬಗ್ಗೆ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಉತ್ತಮ ರೀತಿಯಲ್ಲಿ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಿದ್ದರಾಮಯ್ಯನವರ ವಿರುದ್ಧ ನಡೆಸಿರುವ ಷಡ್ಯಂತ್ರ ಬಯಲಾಗಬೇಕು. ಈ ಪ್ರಕರಣದಿಂದ ಯಾರ ವರ್ಚಸ್ಸಿಗೆ ಹಾನಿಯಾಗುತ್ತದೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಎಂದರು.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಕುಟುಂಬವನ್ನು ಮುಗಿಸಲು ಹಾಲಿ ಸಿಎಂ 600 ಕೋಟಿ ರೂ. ಮೊತ್ತದ ಡೀಲ್ ಕೊಟ್ಟಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಮಾಧ್ಯಕ್ಕೆ ಉತ್ತರಿಸಿದ ಸಚಿವರು, ಡೀಲ್ ಕೊಟ್ಟು ಯಾರನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಇಂತಹ ಆರೋಪ ಮಾಡುತ್ತ ಕಾಲಹರಣ ಮಾಡಬಾರದು.
ಕುಮಾರಸ್ವಾಮಿ ಅವರು ದೇಶದ ಮಂತ್ರಿ. ದೆಹಲಿಯಲ್ಲಿ ಕೆಲಸ ಮಾಡಬೇಕು. ತವರು ಜಿಲ್ಲೆ ಹಾಸನಕ್ಕೆ ಅನುಕೂಲವಾಗುವಂತೆ ಆಡಳಿತ ನಡೆಸಬೇಕು. ಐಐಟಿಗಾಗಿ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆ ಶೀಘ್ರವಾಗಿ ಜಿಲ್ಲೆಗೆ ಐಐಟಿ ಕಲ್ಪಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಮನವಿ ಮಾಡುತ್ತೇನೆ ಎಂದೂ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಹೇಳಿದ್ದಾರೆ.


Click it and Unblock the Notifications
